ಬಳ್ಳಾರಿ

ಹೂವಿನಹಡಗಲಿಯಲ್ಲೂ ಅಪಾರ ನಷ್ಟ

Published On :

ಹೂವಿನಹಡಗಲಿ: ತಾಲೂಕಿನ ವಿವಿಧ ಕಡೆಗಳಲ್ಲಿ ಬಿತ್ತನೆ ಮಾಡಿರುವ ಮಹಿಕೋ ಕಂಪನಿಯ ಕಳಪೆ ಬಿಟಿ ಹತ್ತಿ ಬೀಜ ಮಾರಾಟ ಮಾಡಿರುವ ಫಲವಾಗಿ ಬಿಟಿ ಹತ್ತಿ ಗಿಡಗಳಲ್ಲಿ ಹೂ, ಕಾಯಿ ಬಿಡದೆ ಸಂಪೂರ್ಣ ಬೆಳೆ ವಿಫಲವಾಗಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ.
ತಾಲೂಕಿನ ಬ್ಯಾಲಹುಣ್ಸಿ, ಮೈಲಾರ, ಹೊಳಲು, ಮಾಗಳ, ಬೂದುನೂರು, ಬನ್ನಿಮಟ್ಟಿ, ನಂದಿಗಾವಿ, ಕಾಲ್ವಿ, ಸೋವೇನಹಳ್ಳಿ ತಾಂಡಾ, ದೇವಗೊಂಡನಹಳ್ಳಿ, ಮೀರಾಕೂರ್ನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳ ರೈತರು ನೂರಾರು ಎಕರೆ ಪ್ರದೇಶದಲ್ಲಿ ಬಿಟಿ ಹತ್ತಿ ಬಿತ್ತನೆ ಮಾಡಿದ್ದಾರೆ. ಬಿಟಿ ಹತ್ತಿ ಬೀಜ ಬಿತ್ತನೆ ಮಾಡಿರುವ ಬೆಳೆ ಚೆನ್ನಾಗಿ ಬೆಳೆದು ನಿಂತಿದೆ. ಆದರೆ ಇದರಲ್ಲಿ ಹೂ, ಕಾಯಿ ಬಿಟ್ಟಿಲ್ಲ. ಕಂಪನಿಯು ಕಳಪೆ ಬೀಜ ಮಾರಾಟ ಮಾಡಿದೆ ಎಂಬುದು ಆರೋಪ ರೈತರದ್ದು. ಬಿಟಿ ಹತ್ತಿ ಬೀಜ ಮಾರಾಟ ಕಂಪನಿ ಮಾಲೀಕರಿಂದ ಸೂಕ್ತ ಪರಿಹಾರ ನೀಡಬೇಕೆಂದು ಬ್ಯಾಲಹುಣ್ಸಿ ಬಸವನಗೌಡ ಆಗ್ರಹಿಸಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಬಂದು ತಮ್ಮ ನೋವನ್ನು ರೈತರು ಹೇಳಿಕೊಂಡಾಗ, ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಸ್ತರಣ ಘಟಕದ ತಜ್ಞರ ತಂಡವನ್ನು ಗ್ರಾಮಕ್ಕೆ ಕಳುಹಿಸಿ ಬೆಳೆ ವಿಫಲಕ್ಕೆ ಕಾರಣಗಳನ್ನು ತಿಳಿದುಕೊಳ್ಳಲಾಗುವುದು ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಡಿ. ಮಂಜಣ್ಣ.
ಉಗ್ರ ಹೋರಾಟ: ಧಾರವಾಡದ ಕೃಷಿ ವಿವಿ ಆಯೋಜಿಸಿದ್ದ ಕೃಷಿ ಮೇಳಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಇವರ ಎದುರೇ ಕಳಪೆ ಬಿಟಿ ಹತ್ತಿ ಬೀಜದ ಬೆಳೆಯನ್ನು ಪ್ರದರ್ಶನ ಮಾಡಿ ಪ್ರತಿಭಟನೆ ಮಾಡಿದ್ದರೂ, ಈವರೆಗೂ ಸರ್ಕಾರ ಸಂಬಂಧಪಟ್ಟ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ರೈತರಿಗಾಗಿರುವ ಅನ್ಯಾಯವನ್ನು ಸರಿಪಡಿಸಲು ಜಿಲ್ಲಾಡಳಿತ ಕಂಪನಿಯ ಮೇಲೆ ಸೂಕ್ತ ಕ್ರಮಕೈಗೊಂಡು ರೈತರಿಗೆ ಕಂಪನಿಯಿಂದ ಪರಿಹಾರ ವಿತರಣೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.
--
ಜೂಜು ಅಡ್ಡೆ ಮೇಲೆ ದಾಳಿ: ಐವರ ಬಂಧನ
ಕೊಟ್ಟೂರು:  ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಯುವಕರ ಗುಂಪಿನ ಮೇಲೆ ಇಲ್ಲಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗುರುರಾಜ್ ಎನ್. ಮೈಲಾರ ನೇತೃತ್ವದ ಸಿಬ್ಬಂದಿ ದಾಳಿ ಮಾಡಿ ಐವರನ್ನು ಬಂಧಿಸಿ ರು. 4700ಕ್ಕೂ ಅಧಿಕ ಹಣ ವಶಪಡಿಸಿಕೊಂಡ ಘಟನೆ ಸೋಮವಾರ ಸಂಜೆ ನಡೆದಿದೆ. ಇಲ್ಲಿನ ಕೆರೆಯಂಗಳ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಕೆಲವರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು. ಈ ಕುರಿತು ಮಾಹಿತಿ ಆಧರಿಸಿ ಸರ್ಕಲ್ ಇನ್‌ಸ್ಪೆಕ್ಟರ್ ಲಾಲ್ಯ ನಾಯ್ಕ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಯಿತು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.