ಬಳ್ಳಾರಿ

ಗಣಿ ನಾಡಲ್ಲಿ ವಿಜಯದಶಮಿ ಸಂಭ್ರಮ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 14
ಗಣಿನಾಡು ಬಳ್ಳಾರಿಯಲ್ಲಿ ಸೋಮವಾರ ಸಡಗರ ಸಂಭ್ರಮದಿಂದ ವಿಜಯದಶಮಿಯನ್ನು ಬರಮಾಡಿಕೊಂಡ ಜನತೆ, ತಮ್ಮ ಕುಟುಂಬ ಪರಿವಾರದೊಂದಿಗೆ ದೇಗುಲಗಳಿಗೆ ತೆರಳಿ ದುರ್ಗಾಮಾತೆಯ ದರ್ಶನ ಪಡೆದು, ನಂತರ ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ದೃಶ್ಯ ಕಂಡುಬಂದಿತು.
ಶರನ್ನವರಾತ್ರಿಯ ನಿಮಿತ್ತ 9 ದಿನಗಳ ಕಾಲ ಬನ್ನಿ ಮಹಾಂಕಾಳಿ ದೇವಿಗೆ ವಿಶೇಷ ಪೂಜೆ, ಪುನಸ್ಕಾರದಲ್ಲೇ ನಿರತರಾದ ಮಹಿಳೆಯರು ವಿಜಯದಶಮಿಯ ದಿನವಾದ ಸೋಮವಾರ ದೇವಿಗೆ ಸೀರೆ, ಬಳೆ, ಉಡಿಗೆ ಅಕ್ಕಿ, ನೈವೇದ್ಯದೊಂದಿಗೆ ತೆರಳಿ ಮಲ್ಲಿಗೆ, ಸೇವಂತಿ, ಕನಕಾಂಬರ ಹೀಗೆ ಬಗೆಬಗೆಯ ಪುಷ್ಪಗಳಿಂದ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಪಲ್ಲಕ್ಕಿಯ ಮೆರವಣಿಗೆ: ದಸರಾ ನಿಮಿತ್ತ ನಗರದಲ್ಲಿ ಹಲವು ದಶಕಗಳಿಂದಲೂ ದೇವಸ್ಥಾನಗಳು, ಮಠಗಳು ದೇವರ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆ ನಡೆಸುವ ಮೂಲಕ ಹಬ್ಬ ಆಚರಿಸಿಕೊಂಡು ಬರುವುದು ಇಲ್ಲಿನ ವಿಶೇಷ. ಹಾಗೆ ಈ ಬಾರಿಯು ಸಂಜೆ ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ, ವೀರಭದ್ರೇಶ್ವರಸ್ವಾಮಿ ದೇವಸ್ಥಾನ, ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ಶಾಲೇಶ್ವರಸ್ವಾಮಿ ದೇವಸ್ಥಾನ, ಮರಿಸ್ವಾಮಿ ಮಠ, ಗವಿಸಿದ್ದೇಶ್ವರ ಸ್ವಾಮಿ ದೇವಸ್ಥಾನ, ಕಟ್ಟೇಬಸವೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಇತರೆ ಎಲ್ಲಾ ಮಠ ಮಂದಿರಗಳ ದೇವರ ಉತ್ಸವ ಮೂರ್ತಿಗಳನ್ನು ಕಲಾತ್ಮಕವಾಗಿ ಹಾಗೂ ಸುಂದರವಾಗಿ, ವಿವಿಧ ಬಗೆಯ ಪುಷ್ಪಗಳು, ವಿದ್ಯುತ್ ದೀಪಾಲಂಕಾರ, ವರ್ಣರಂಜಿತ ಸಾಮಗ್ರಿಗಳೊಂದಿಗೆ ಅಲಂಕೃತಗೊಳಿಸಿದ ಪಲ್ಲಕ್ಕಿಗಳಲ್ಲಿ ಕೂಡಿಸಿ, ನಂದಿಧ್ವಜ, ಡೊಳ್ಳು, ಭಜನೆ, ವಿವಿಧ ಮಂಗಳವಾದ್ಯಗಳೊಂದಿಗೆ ನಗರದ ಪ್ರಮುಖ ರಸ್ತೆಯಾದ ತೇರುಬೀದಿಯಲ್ಲಿ ನಡೆಸಿದ ಬೃಹತ್ ಮೆರವಣಿಗೆಯಲ್ಲಿ ಪಲ್ಲಕ್ಕಿಗಳ ದೃಶ್ಯ ಮನಮೋಹಕವಾಗಿತ್ತು. ನಂತರ ಅಲ್ಲಿಂದ ಸ್ಥಳೀಯ ಕೊಲ್ಮಿ ಚೌಕ್ ಸಮೀಪದ ಕಮ್ಮರಚೇಡು ಕಲ್ಯಾಣಸ್ವಾಮಿ ಮಠದ ಬನ್ನಿಮಂಟಪ ತಲುಪಿ ಅಲ್ಲಿ ಬನ್ನಿ ಪತ್ರಿ ಮುಡಿದು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ದುಃಖ ದಾರಿದ್ರ್ಯಗಳ ನಿವಾರಣೆ, ಸಿರಿ ಸಂಪತ್ತುಗಳ ಸಮೃದ್ಧಿಗಾಗಿ, ಬುದ್ಧಿ ವಿವೇಕಗಳ ವರ್ಧನೆಗಾಗಿ ಸತತ ಹತ್ತು ದಿನಗಳ ಕಾಲ ನಡೆಯುವ ಹಬ್ಬದ ಸರಣಿಯೇ ದಸರಾ ಆಗಿದ್ದು, ದೇಶದ ನಾನಾ ಭಾಗಗಳಲ್ಲಿ ನಾನಾ ಪ್ರಕಾರವಾಗಿ ಆಚರಿಸಲಾಗುತ್ತದೆ. ಹಾಗೆ ದಸರಾ ಹಬ್ಬದ ಅಂಗವಾಗಿ ನಗರದ ಶಕ್ತಿದೇವಿಯ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಗಳ ಮೂಲಕ ಶೃಂಗಾರಗೊಳಿಸಲಾಗಿದ್ದ ದೇವಿಯ ದರ್ಶನ ಪಡೆಯಲು ಭಕ್ತಾದಿಗಳು ಹೊಸ ಬಟ್ಟೆಗಳನ್ನು ಧರಿಸಿ, ಉತ್ಸಾಹ ಹಾಗೂ ಲವಲವಿಕೆಯಿಂದ ಮಕ್ಕಳು ಹಾಗೂ ಸಕಲ ಕುಟುಂಬದೊಂದಿಗೆ ತಂಡೋಪತಂಡವಾಗಿ ಆಗಮಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಅದರಲ್ಲೂ ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಜಯದಶಮಿಯ ಅಂಗವಾಗಿ ದೇವಿಗೆ ವಿಶೇಷವಾಗಿ ಬಂಗಾರದ ಆಭರಣಗಳಿಂದ ಅಲಂಕರಿಸಲಾಗಿತ್ತು. ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ದೇವಸ್ಥಾನವು ಅಪಾರ ಭಕ್ತ ಸಮೂಹದಿಂದ ತುಂಬಿ ತುಳುಕುತ್ತಿತ್ತು. ಜತೆಗೆ ದಸರಾ ಮಹೋತ್ಸವದ ಅಂಗವಾಗಿ ನಗರದ ಕಲ್ಯಾಣಸ್ವಾಮಿ ಮಠದಲ್ಲಿ ಶ್ರೀ ದೇವಿ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಆಟೋ, ಬಸ್, ಲಾರಿ, ದ್ವಿಚಕ್ರ ವಾಹನಗಳ ಸವಾರರಂತು ತಮ್ಮ ವಾಹನಗಳನ್ನು ಶುಭ್ರಗೊಳಿಸಿ, ಪೂಜಿಸಿ, ಬಾಳೆ ಕಂಬ, ಚಂಡು, ಅಡಿಕೆ, ರೇಷ್ಮೆ ಹೂಗಳಿಂದ ಸಿಂಗಾರಗೊಳಿಸಿ, ನಗರದಲ್ಲಿ ಸಂಚರಿಸುತ್ತಿರುವುದು ಕಂಡು ಬಂತು.
ಇಂದಿನ ಸಂಕೀರ್ಣ ಜಗತ್ತಿನಲ್ಲಿ ಉಂಟಾಗುವ ಅಭಿಪ್ರಾಯ ಭೇದಗಳನ್ನು, ಸಂಬಂಧಗಳ ತೊಡಕುಗಳನ್ನು ಮತ್ತು ತಪ್ಪು ಗ್ರಹಿಕೆಗಳಿಂದ ಉಂಟಾಗುವ ಸಾಂಸಾರಿಕ ಬಿರುಕುಗಳನ್ನು ಸರಿಪಡಿಸುವಲ್ಲಿ ಹಾಗೂ ಅದರಲ್ಲೂ ಬಿಗುಮಾನಗಳನ್ನು ಬಿಟ್ಟು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಸ್ನೇಹ, ಪ್ರೀತಿಯನ್ನು ವ್ಯಕ್ತಪಡಿಸುವ ವಿಜಯದಶಮಿ ಹಬ್ಬವನ್ನು ನಗರದಲ್ಲಿ ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.

 ವೈ.ಎಂ. ಸಿದ್ಧಲಿಂಗಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.