ಬಳ್ಳಾರಿ

ಮಳೆ ಕೊರತೆ: ಒಣಗಿದ ಶೇಂಗಾ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಅ. 14
ಶೇಂಗಾ ಬೆಳೆದವರ ಬದುಕು ಈಗ ಜೊಳ್ಳುಶೇಂಗಾದಂತಾಗಿದೆ. ಅಗತ್ಯ ಸಮಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಶೇಂಗಾ ಬೆಳೆದ ರೈತರು ಹಾನಿ ಅನುಭವಿಸುವಂತಾಗಿದೆ.
ಪ್ರತಿವರ್ಷ ತಾಲೂಕಿನ ಅತಿ ಹೆಚ್ಚು ರೈತರು ಮಳೆಗಾಲದಲ್ಲಿ ಶೇಂಗಾ ಬೆಳೆಯುತ್ತಾರೆ. ತಾಲೂಕಿನ 96 ಸಾವಿರ ಹೆಕ್ಟೇರ್ ಬಿತ್ತನೆ ಭೂಮಿಯಲ್ಲಿ ಪ್ರತಿವರ್ಷ ಅಂದಾಜು 40-43 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಶೇಂಗಾ ಬೆಳೆಯುತ್ತಾರೆ. ಪ್ರಸಕ್ತ ವರ್ಷವೂ ಅಂದಾಜು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಿದ್ದ ರೈತರೀಗ ಒಂದೆರಡು ಮಳೆಯ ಕೊರತೆಯಿಂದ ಕೈ ಕೈ ಹಿಸುಕಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದ್ದ ಅಲ್ಪ ಸ್ವಲ್ಪ ಫಸಲು ಸಹ ಈಗ ವಾರದಿಂದ ಒಣಗಲು ಶುರುಮಾಡಿದೆ.
ಉತ್ತಮ ಮಳೆಯಾದರೆ ಅಂದಾಜು 40 ಸಾವಿರ ಟನ್‌ಗಿಂತಲೂ ಹೆಚ್ಚು ಇಳುವರಿ ತಾಲೂಕಿನಲ್ಲಿ ಬರೀ ಶೇಂಗಾ ಬೆಳೆಯಿಂದ ಬರುತ್ತಿತ್ತು. ಆದರೆ ಈ ಬಾರಿ ರೈತರ ಕೈಗೆ 10 ಸಾವಿರ ಟನ್ ಶೇಂಗಾ ಸಿಗುವುದು ಸಹ ಅನುಮಾನವಾಗಿದೆ. ಶೇಂಗಾ ಬೆಳೆ ಮೊದಲು ಚೆನ್ನಾಗಿ ಬಂದಿದ್ದರೂ, ಸಮಯಕ್ಕೆ ಸರಿಯಾಗಿ ಮಳೆಯಾಗದಿದ್ದರಿಂದ ಹೂ, ಕಾಯಿಗಟ್ಟುವ ಸಮಯದಲ್ಲಿ ಬಾಡಿತು. 15 ದಿನಗಳ ಹಿಂದೆ ಒಂದೇ ಒಂದು ಉತ್ತಮ ಮಳೆಯಾಗಿದ್ದರೆ ಈ ಬಾರಿ ತಾಲೂಕಿನ ರೈತರು ಶೇ. 75ರಷ್ಟು ಶೇಂಗಾ ಬೆಳೆಯುತ್ತಿದ್ದರು. ಸದ್ಯ ರೈತರು ಕೈಸುಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆಯಲ್ಲದೆ, ಬಳ್ಳಿ ಕೂಡ ಒಣಗಿದ್ದರಿಂದ ಜಾನುವಾರಿಗೆ ಮೇವೂ ಸಿಗುವ ಸಾಧ್ಯತೆ ಇಲ್ಲ. ತಾಲೂಕಿನಲ್ಲಿ ಅತಿ ಹೆಚ್ಚು ಶೇಂಗಾ ಬೆಳೆಯುವ ಕಾನಾಹೊಸಹಳ್ಳಿ ಮತ್ತು ಗುಡೇಕೋಟೆ ಹೋಬಳಿಯಲ್ಲಿ ಶೇಂಗಾ ಬೆಳೆಯನ್ನೇ ನೆಚ್ಚಿಕೊಂಡು ಬದುಕುವ ಸಹಸ್ರಾರು ಕುಟುಂಬಗಳಿವೆ. ಇಲ್ಲಿ 10-30 ಎಕರೆ ಪ್ರದೇಶಕ್ಕೂ ಹೆಚ್ಚು ಭೂಮಿಯಲ್ಲಿ ಶೇಂಗಾ ಬಿತ್ತನೆ ಮಾಡುವವ ರೈತರದ್ದಾರೆ. ಕೆಲವು ರೈತರು ಕೇವಲ ಶೇಂಗಾ ಬೆಳೆಯನ್ನೇ ಅವಲಂಬಿಸಿದ್ದಾರೆ. ಅಂಥವರಿಗೆ ದಿಕ್ಕೇ ತೋಚದಂತಾಗಿದೆ.
ಕಾನಾಹೊಸಹಳ್ಳಿ ಹೋಬಳಿ ಹೆಚ್ಚು ನಷ್ಟ: ತಾಲೂಕಿನಲ್ಲಿ ಅತಿ ಹೆಚ್ಚು ಶೇಂಗಾ ಬೆಳೆಯುವ ಪ್ರದೇಶವೆಂದರೆ ಕಾನಾಹೊಸಹಳ್ಳಿ. ಅನಂತರದ ಸ್ಥಾನ ಗುಡೇಕೋಟೆ ಹೋಬಳಿಯಾಗಿದೆ. ತಾಲೂಕಿನ ಕೂಡ್ಲಿಗಿ, ಕೊಟ್ಟೂರು ಹೋಬಳಿಯಲ್ಲಿ ಶೇಂಗಾ ಬೆಳೆಯುತ್ತಿದ್ದರೂ ಈ ಭಾಗದಲ್ಲಿ ಮಳೆ ಸ್ವಲ್ಪ ಹೆಚ್ಚು ಆಗಿರೋದ್ರಿಂದ ರೈತರಿಗೆ ಲಾಭ ಆಗದಿದ್ದರೂ ನಷ್ಟವಂತೂ ಆಗಿಲ್ಲ. ಅಲ್ಲದೇ ಈ ಭಾಗದಲ್ಲಿ ಪರ್ಯಾಯ ಬೆಳೆಗಳಾದ ಹತ್ತಿ, ಮೆಕ್ಕೆಜೋಳ ಮುಂತಾದವುಗಳನ್ನು ಬೆಳೆಯುವುದರಿಂದ ಶೇಂಗಾದ ಮೇಲೆ ಅವಲಂಬನೆ ಕಡಿಮೆ ಇದೆ. ಅಷ್ಟೇನೂ ನಷ್ಟವಾಗದಿದ್ದರೂ ಕಾನಾಹೊಸಹಳ್ಳಿ ಹೋಬಳಿಯಲ್ಲಂತೂ ಶೇ. 75ಕ್ಕಿಂತ ಹೆಚ್ಚು ಶೇಂಗಾ ಬೆಳೆ ನಷ್ಟವಾಗಿದೆ ಎಂಬುದು ಈ ಭಾಗದ ರೈತರ ಅಭಿಪ್ರಾಯವಾಗಿದೆ.
ಕಾನಾಹೊಸಹಳ್ಳಿಯ ಹೋಬಳಿಯಲ್ಲೊಂದೇ ಈ ಬಾರಿ ರು. 8 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಇಲ್ಲಿಯ ಶೇಂಗಾ ವ್ಯಾಪಾರಿಯೊಬ್ಬರು ಅಂದಾಜು ಮಾಡಿದ್ದು, ಕೂಡ್ಲಿಗಿ, ಗುಡೇಕೋಟೆ, ಕೊಟ್ಟೂರು ಹೋಬಳಿ ಪ್ರದೇಶದಲ್ಲಿಯೂ ಶೇಂಗಾ ನಷ್ಟವಾಗಿದ್ದರಿಂದ ತಾಲೂಕಿನ ರೈತರ ಪರಿಸ್ಥಿತಿ ಅಯೋವುಯವಾಗಿದೆ. ಸರ್ಕಾರ ತಾಲೂಕಿನ ರೈತರ ಕಷ್ಟಕ್ಕೆ ನೆರವಾಗಬೇಕಾಗಿದೆ.

ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.