ಪಿಜಿ ಕೋರ್ಸ್ ಆರಂಭ ಯಾವಾಗ?
ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ಪಟ್ಟಣದ ಜಿವಿಪಿಪಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಷಯಗಳ ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸುವಂತೆ ಸಲ್ಲಿಸಿರುವ ಪ್ರಸ್ತಾವನೆ ಈಗ ಸರ್ಕಾರದ ಅಂಗಳದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಾದರೂ ಈ ಪ್ರಸ್ತಾವನೆಗೆ ಮುಕ್ತಿಭಾಗ್ಯ ಸಿಕ್ಕು, ದಶಕದಿಂದ ತಾಲೂಕಿನಲ್ಲಿ ಸ್ನಾತಕೋತ್ತರ ಕೋರ್ಸ್ ಕಲಿಯಬೇಕೆಂಬ ಇಲ್ಲಿನ ಸಾವಿರಾರು ವಿದ್ಯಾರ್ಥಿಗಳ ಕನಸು ಈಡೇರುವುದೇ ಎಂಬ ಕುತೂಹಲ ಮೂಡಿದೆ.
ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಅಗತ್ಯವಿರುವ ವಿದ್ಯಾರ್ಥಿಗಳ ಬೇಡಿಕೆ, ಕಟ್ಟಡ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳು, ಬೋಧಕರ ಲಭ್ಯತೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಾಲೇಜು ಹೊಂದಿದೆ. ಆದರೆ ಸ್ನಾತಕೋತ್ತರ ಕೋರ್ಸ್ಗಳನ್ನು ಮಾತ್ರ ಪ್ರಾರಂಭಿಸಿಲ್ಲ.
3 ತಾಲೂಕುಗಳಿಗೆ ಕೇಂದ್ರ: ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ಹೂವಿನಹಡಗಲಿ, ಕೂಡ್ಲಿಗಿ, ಕೊಟ್ಟೂರುಗಳಿಗೆ ಭೌಗೋಳಿಕವಾಗಿ ಹಗರಿಬೊಮ್ಮನಹಳ್ಳಿ ಕೇಂದ್ರಸ್ಥಾನದಂತಿದೆ. ಈ 3 ತಾಲೂಕುಗಳಿಗೂ 30 ಕಿ.ಮೀ. ಅಂತರದಲ್ಲಿರುವ ಹಗರಿಬೊಮ್ಮನಹಳ್ಳಿಯಲ್ಲಿ ಪಿಜಿ ಕೋರ್ಸ್ಗಳು ಆರಂಭವಾದರೆ ಈ ತಾಲೂಕುಗಳ ವಿದ್ಯಾರ್ಥಿಗಳು ಪಿಜಿ ಕಲಿಯಲು ನೂರು ಕಿ.ಮೀ. ದೂರದ ಬಳ್ಳಾರಿ, ದಾವಣಗೆರೆ, ಗುಲ್ಬರ್ಗ ಅಥವಾ ಧಾರವಾಡಕ್ಕೆ ಹೋಗುವುದು ತಪ್ಪುತ್ತದೆ. ಈ ಕಾರಣಕ್ಕಾಗಿ ಹಗರಿಬೊಮ್ಮನಹಳ್ಳಿಯಲ್ಲಿ ಪಿಜಿ ಕೋರ್ಸ್ಗಳನ್ನು ಆರಂಭಿಸಬೇಕೆಂಬುದು ಈ ಭಾಗದ ವಿದ್ಯಾರ್ಥಿಗಳ ಬೇಡಿಕೆ.
ಪ್ರಸ್ತಾವನೆ ಪತ್ರ: ಪಿಜಿ ಕೋರ್ಸ್ ಪ್ರಾರಂಭಿಸಲು ಹಿಂದಿನ ಸರ್ಕಾರದಲ್ಲಿಯೇ ಪ್ರಯತ್ನಗಳು ಶುರುವಾಗಿದ್ದವು. ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ನವಂಬರ್ 9, 2012ರಂದು ಜಿವಿಪಿಪಿ ಕಾಲೇಜು ಪ್ರಾಚಾರ್ಯರಿಗೆ ಪತ್ರವೊಂದನ್ನು ಬರೆದು, ಅಗತ್ಯವಿರುವ ಮೂಲ ಸೌಲಭ್ಯಗಳ ಕುರಿತಂತೆ ಸೂಕ್ತ ಪ್ರಸ್ತಾವನೆಯನ್ನು ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಮೂಲಕ ಸಲ್ಲಿಸುವಂತೆ ತಿಳಿಸಿದ್ದರು.
ನಿರ್ದೇಶಕರ ಪತ್ರದನ್ವಯ ಅಗತ್ಯವಾದ ಮೂಲ ಸೌಕರ್ಯಗಳು, ಬೋಧಕರ ಲಭ್ಯತೆ ಸೇರಿದಂತೆ ವಿವಿಧ ಅಗತ್ಯ ಮಾಹಿತಿಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಕಾಲೇಜು ಪ್ರಾಚಾರ್ಯ ಜಿ. ಮಲ್ಲಿಕಾರ್ಜುನ ಅವರು, ಜನವರಿ 15, 2013ರಂದು ಜಂಟಿ ನಿರ್ದೇಶಕರ ಮೂಲಕ ಕಾಲೇಜು ನಿರ್ದೇಶಕರಿಗೆ ಸಲ್ಲಿಸಿದ್ದಾರೆ.
ಬಿಎ, ಬಿಕಾಂ ಹಾಗೂ ಬಿಎಸ್ಸಿ ವಿಭಾಗಗಳನ್ನು ಸೇರಿ ಸದ್ಯ ಕಾಲೇಜಿನಲ್ಲಿ 1205 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ವರ್ಷದ ಅಂತಿಮ ಬಿಎದಲ್ಲಿ 210 ಹಾಗೂ ಬಿಕಾಂನಲ್ಲಿ 75 ವಿದ್ಯಾರ್ಥಿಗಳಿದ್ದಾರೆ. ಪ್ರಸ್ತಾಪಿತ ವಿಷಯಗಳಲ್ಲಿ ಪಿಎಚ್ಡಿ ಮಾಡಿದ ನಾಲ್ಕು ಸಹಾಯಕ ಪ್ರಾಧ್ಯಾಪಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೃಹತ್ ಕಟ್ಟಡಗಳು ಸೇರಿದಂತೆ 6.23 ಎಕರೆ ವಿಸ್ತೀರ್ಣದ ವಿಶಾಲ ಸ್ಥಳವನ್ನು ಕಾಲೇಜು ಹೊಂದಿದೆ.
ಕಾಲೇಜು ಶಿಕ್ಷಣ ಇಲಾಖೆಯಿಂದ ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ಅತಿ ಅಗತ್ಯ. ಸರ್ಕಾರ ಅನುಮೋದನೆ ನೀಡಿದ ನಂತರ ಅದು ಸಂಬಂಧಪಟ್ಟ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಹೋಗುತ್ತದೆ. ಅಲ್ಲಿ ಅನುಮೋದನೆಗೊಂಡರೆ ಕೋರ್ಸ್ಗಳು ಆರಂಭವಾಗುತ್ತವೆ. ಗಮನಿಸಬೇಕಾದ ಅಂಶವೆಂದರೆ ಸ್ನಾತಕೋತ್ತರ ಕೋರ್ಸ್ ಪ್ರಾರಂಭಿಸಲು ಸರ್ಕಾರದ ಅನುಮೋದನೆ ಅಗತ್ಯ. ಸರ್ಕಾರದ ಮೇಲೆ ಒತ್ತಡ ಹಾಕಿ ಅನುಮೊದನೆ ಪಡೆಯುವ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ.
- ಹುಳ್ಳಿ ಪ್ರಕಾಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

