ರು. 100 ಕೋಟಿಯಲ್ಲಿ ನಗರೋತ್ಥಾನ
ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 26
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 3ನೇ ಹಂತದ ರು. 100 ಕೋಟಿ ಕೇವಲ ರಸ್ತೆ ಅಭಿವೃದ್ಧಿಗೆ ಸೀಮಿತವಾಗದೆ, ನಗರದ ಸಂಚಾರಿ ವ್ಯವಸ್ಥೆ ಅಭಿವೃದ್ಧಿಗೆ ಬಳಕೆಯಾಗಲಿದೆ.
ಈ ಯೋಜನೆಯಡಿ ನೀರು ಶುದ್ಧೀಕರಣ ಘಟಕಕ್ಕೆ, ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಿಸಲು ಹಾಗೂ ನಗರ ಪ್ರವೇಶ ಮತ್ತು ಹೊರ ಸಾಗುವ ಪ್ರದೇಶಗಳಲ್ಲಿ ಸೆಟಲೈಟ್ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯಕ್ಕೆ ಸರ್ಕಾರದ ಆದೇಶದಂತೆ ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಈಗಾಗಲೇ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಮೊದಲ ಎರಡು ಹಂತದಲ್ಲಿ ಬಂದಿರುವ ರು. 200 ಕೋಟಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದರೆ, ಇನ್ನು ಕೆಲ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ. ಇದೀಗ 3ನೇ ಹಂತದಲ್ಲಿ ಹಣ ಬಿಡುಗಡೆಗೆ ಸರ್ಕಾರ ಮುಂದಾಗುತ್ತಿದೆ.
ಕ್ರಿಯಾಯೋಜನೆ ಸಲ್ಲಿಸಲು ಪತ್ರ: ಮುಖ್ಯಮಂತ್ರಿಗಳ ನಗರೋತ್ಥಾನದ 3ನೇ ಹಂತದಲ್ಲಿ ರು. 100 ಕೋಟಿ ವಿಶೇಷ ಅನುದಾನವನ್ನು ಮಹಾನಗರ ಪಾಲಿಕೆಗೆ ಬಿಡುಗಡೆ ಮಾಡಬೇಕಾಗಿರುವ ಕುರಿತು ಕ್ರಿಯಾಯೋಜನೆ ಸಲ್ಲಿಸುವಂತೆ ಸೆ. 10ರಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಸೂಚಿಸಿದ್ದರು. ರು. 100 ಕೋಟಿ ಅನುದಾನಕ್ಕೆ ಕ್ರಿಯಾಯೋಜನೆಯ ಪ್ರಸ್ತಾವನೆಯಲ್ಲಿ ರಸ್ತೆಗಳು, ರಸ್ತೆ ಬದಿಯ ಚರಂಡಿಗಳ ಅಭಿವೃದ್ಧಿ, ಪಾದಚಾರಿ ಮಾರ್ಗಕ್ಕೆ ಆದ್ಯತೆ ನೀಡುವುದರೊಂದಿಗೆ, ನೀರು ಸರಬರಾಜು ವಿತರಣಾ ಜಾಲದ ನವೀಕರಣ, ಮೇಲ್ಮಟ್ಟದ ಜಲಸಂಗ್ರಹಗಾರ, ನೀರು ಸರಬರಾಜು ಕಾಮಗಾರಿಗೆ, ಒಳಚರಂಡಿ ವ್ಯವಸ್ಥೆ, ಸಂಚಾರ ವ್ಯವಸ್ಥೆ ಸುಧಾರಣೆ, ವಿದ್ಯುತ್ ಬೀದಿ ದೀಪಗಳ ಅಳವಡಿಕೆ, ಮಲ್ಟಿ ಪಾರ್ಕಿಂಗ್ ಕಾಂಪ್ಲೆಕ್ಸ್ ಸೇರಿದಂತೆ ಇತರ ಮೂಲ ಸೌಲಭ್ಯ ಅಭಿವೃದ್ಧಿ ಕಾಮಗಾರಿಗೆ ಒತ್ತು ನೀಡುವಂತೆ ತಿಳಿಸಲಾಗಿತ್ತು.
ಅಭಿವೃದ್ಧಿಯಲ್ಲಿನ ವಿಷಯಗಳು: 3ನೇ ಹಂತದ ಯೋಜನೆಯಲ್ಲಿ ನಗರದ ಬಂಡಿಹಟ್ಟಿ ಕಾಲೋನಿ ಮುಖ್ಯರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ, ರೂಪನಗುಡಿ ಮುಖ್ಯರಸ್ತೆಯಿಂದ ಹರೀಶ್ಚಂದ್ರ ಘಾಟ್ ರಸ್ತೆ, ಚರಂಡಿ ಅಭಿವೃದ್ಧಿ, ಬೊಮ್ಮನಹಾಳ ರಸ್ತೆಯಿಂದ ಕಮ್ಮಿಂಗ್ ರಸ್ತೆವರೆಗೆ ರಸ್ತೆ, ಚರಂಡಿ ಅಭಿವೃದ್ಧಿ, ನಗರದ ಸ್ವಂತಲಿಂಗಣ್ಣ ಕಾಲೋನಿ ಹಾಗೂ ಕೆಎಚ್ಬಿ ಕಾಲೋನಿಯ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ, ಸೌದಗಾರ್ ಕಾಲೋನಿ, ನೇತಾಜಿ ಕಾಲೋನಿ, ರಾಜೀವ್ ಗಾಂಧಿ ನಗರ, ಡಿಸಿ ನಗರ, ಪ್ರಶಾಂತ ನಗರ, ಮಾಜಿ ಸೈನಿಕ ಕಾಲೋನಿ, ಅಕ್ಕಸಾಲಿಗರ ಕಾಲೋನಿ, ಪತ್ರಕರ್ತರ ಕಾಲೋನಿ, ಬಂಡಿಹಟ್ಟಿ ಕಾಲೋನಿ, ಅಜಾದ್ ನಗರ, ವಡ್ಡೆನಾಗಪ್ಪ ಬಡಾವಣೆ, ಗೌತಂ ನಗರದ, ಶಾಂತಿನಗರ, ರಾಮಾಂಜನೇಯ ನಗರ, ಸಿಎಂಸಿ ಕಾಲೋನಿ, ರಾಜೇಶ್ವರಿ ನಗರ, ತಿಲಕ್ ನಗರ, ವಿದ್ಯಾನಗರ, ಅಂದ್ರಾಳ್, ವಿನಾಯಕರ ನಗರ, ಟಿ.ಬಿ. ಸ್ಯಾನಿಟೋರಿಯಂ, ಸಿದ್ಧಾರ್ಥ ಕಾಲೋನಿ, ನಗರದ ಕೋಟೆ ಪ್ರದೇಶ, ಬೀಚಿ ನಗರ, ದಿವಾಕರಬಾಬು ಬಡಾವಣೆ, ಪಟೇಲ್ ನಗರ, ಕೌಲ್ಬಜಾರ್ ಪ್ರದೇಶದ ಕೆಲ ಭಾಗ, ಪಾರ್ವತಿ ನಗರ ಕೆಲ ಭಾಗ, ಆಶ್ರಯ ಕಾಲೋನಿ, ಮಹಮ್ಮದೀಯ ಕಾಲೋನಿ, ಜಾಗೃತಿ ನಗರ ಹೀಗೆ ನಗರದ ವಿವಿಧ ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳು 3ನೇ ಹಂತದ ಅಭಿವೃದ್ಧಿ ಕಾಮಗಾರಿಯ ಕ್ರಿಯಾಯೋಜನೆಯಲ್ಲಿ ಇವೆ.
ನೀರಿನ ಸಮಸ್ಯೆಗೆ ಆದ್ಯತೆ: ನೀರಿನ ಸಮಸ್ಯೆಗೆ ಕ್ರಿಯಾಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. ಮೋತಿ ವೃತ್ತದ ಸಮೀಪದಲ್ಲಿ 15 ಲಕ್ಷ ಮೇಲ್ಮಟ್ಟದ ಜಲಗಾರ ನಿರ್ಮಿಸುವ ಕಾಮಗಾರಿ, ಟಿ.ಬಿ. ಸ್ಯಾನಿಟೋರಿಯಂ ಹತ್ತಿರ 10 ಲಕ್ಷ ಮೇಲ್ಮಟ್ಟದ ಜಲಗಾರ ಕಾಮಗಾರಿ, ಹಳೆ ಮುಂಡ್ರಗಿಯ ಆಶ್ರಯ ಬಡಾವಣೆ ಹಾಗೂ ಹೊಸ ಆಶ್ರಯ ಬಡಾವಣೆ ನೀರಿನ ಸಂಪರ್ಕ ಕಾಮಗಾರಿ, ಮೋಕಾದಲ್ಲಿರುವ ನೀರಿನ ಶುದ್ಧೀಕರಣ ಘಟಕ ಅಭಿವೃದ್ಧಿಪಡಿಸುವ ಕಾಮಗಾರಿ, ನೀರಿನ ವಿತರಣೆ ಜಾಲವನ್ನು ನೀರು ಇಲ್ಲದ ಪ್ರದೇಶಗಳಿಗೆ ವಿಸ್ತರಿಸುವುದು, ಅಲ್ಲೀಪುರ ನೀರಿನ ಸಂಗ್ರಹಣ ಕೆರೆಗೆ ಶಾಶ್ವತ ಬಂಡ್ ನಿರ್ಮಿಸುವುದು ಸೇರಿದಂತೆ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಿಯಾಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.
ಸೆಟಲೈಟ್ ಕ್ಯಾಮೆರಾ: ಪೊಲೀಸರು ನೋಡುವ ನಿಯಂತ್ರಣ ಕೊಠಡಿಯೊಂದಿಗೆ 6 ಪ್ರಮುಖ ವಲಯಗಳು, 5 ಸಣ್ಣ ವಲಯಗಳಿಗೆ, 12 ಪ್ರಮುಖ ರಸ್ತೆಗಳಿಗೆ ಕಣ್ಗಾವಲು ಕ್ಯಾಮೆರಾಗಳ ಅವಳವಡಿಕೆ, ನಗರದ 6 ಪ್ರದೇಶಗಳಲ್ಲಿ ವಾಹನಗಳ ಒಳ ಬರುವ ಹಾಗೂ ಹೊರ ಸಾಗುವ ಪ್ರದೇಶಗಳಲ್ಲಿ ಸೆಟಲೈಟ್ ಕ್ಯಾಮೆರಾಗಳ ಅಳವಡಿಕೆ, 6 ಪ್ರದೇಶಗಳಲ್ಲಿ ಸಂಚಾರಿ ಸಂಕೇತಗಳಿಗೆ ಸೋಲಾರ್ ಯುಪಿಎಸ್ ಅಳವಡಿಸುವ ಕಾಮಗಾರಿ ಯೋಜನೆಯಲ್ಲಿದೆ.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸರ್ಕಾರ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಕ್ರಿಯಾಯೋಜನೆ ತಯಾರಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ.
ಯೋಜನೆಯಲ್ಲಿ...
- ರಸ್ತೆಗಳು, ರಸ್ತೆ ಬದಿಯ ಚರಂಡಿಗಳ ಅಭಿವೃದ್ಧಿ ಪಾದಚಾರಿ ಮಾರ್ಗಕ್ಕೆ ಆದ್ಯತೆ
- ನೀರು ಸರಬರಾಜು ವಿತರಣಾ ಜಾಲ ನವೀಕರಣ
- ಮೇಲ್ಮಟ್ಟದ ಜಲಸಂಗ್ರಹಗಾರ
- ನೀರು ಸರಬರಾಜು ಕಾಮಗಾರಿ
- ಒಳಚರಂಡಿ ವ್ಯವಸ್ಥೆ, ಸಂಚಾರ ವ್ಯವಸ್ಥೆ ಸುಧಾರಣೆ
- ವಿದ್ಯುತ್ ಬೀದಿ ದೀಪಗಳ ಅಳವಡಿಕೆ
- ಮಲ್ಟಿ ಪಾರ್ಕಿಂಗ್ ಕಾಂಪ್ಲೆಕ್ಸ್
- ಇತರ ಮೂಲ ಸೌಲಭ್ಯ ಅಭಿವೃದ್ಧಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

