ಹೊಸಪೇಟೆ ಬಂದ್ ಮುಂದೂಡಿಕೆ
ಹೊಸಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೊಸಪೇಟೆ ರೈತ ಸಂಘ ಅ. 30ರಂದು ಕರೆ ನೀಡಿದ್ದ ಹೊಸಪೇಟೆ ಬಂದ್ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ತಾರಿಹಳ್ಳಿ ಹುಲುಗಜ್ಜಪ್ಪ ಹಾಗೂ ಕಾರ್ಯದರ್ಶಿ ಗೋಸಲಭರಮಪ್ಪ ತಿಳಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರ ಸಂಘದವರು ಅ. 30ರಂದು ಹೊಸಪೇಟೆ ಬಂದ್ ಕರೆ ನೀಡಿದ್ದರು. ಬಂದ್ಗೆ ಮುಂದಿನ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಸಂಘಟಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ವೃದ್ಧೆ ಶವ ಪತ್ತೆ
ಬಳ್ಳಾರಿ: ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ವಿನಾಯಕ ನಗರದ ಮಹಾದೇವ ತಾತ ಮಠದ ಎದುರಿಗಿನ ಬಸ್ನಿಲ್ದಾಣದ ಬಳಿ ಅಪರಿಚಿತ ವೃದ್ಧೆ ಶವ ಪತ್ತೆಯಾಗಿದೆ. ಅ. 28ರಂದು ಮಧ್ಯಾಹ್ನ 2 ಗಂಟೆಗೆ ಶವಪತ್ತೆಯಾಗಿದೆ. ಮೃತ ವೃದ್ಧೆಯು ಸುಮಾರು 15 ದಿನಗಳ ಹಿಂದೆ ವಿನಾಯಕ ನಗರಕ್ಕೆ ಬಂದಿದ್ದು, ಬಸ್ ನಿಲ್ದಾಣದಲ್ಲಿಯೇ ಇರುತ್ತಿದ್ದಳು. ಈಕೆ ನಿಶ್ಯಕ್ತಳಾಗಿದ್ದು, ಓಡಾಡಲು ಆಗುತ್ತಿರಲಿಲ್ಲವಾದ್ದರಿಂದ ಅಲ್ಲಿನ ನಿವಾಸಿಗಳು ಊಟ, ತಿಂಡಿ ನೀಡುತ್ತಿದ್ದರು. ಮೃತ ವೃದ್ಧೆಯು 4.8 ಅಡಿ ಎತ್ತರ, ತೆಳುವಾದ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದಾಳೆ. ಎರಡೂ ಕೈಗಳ ಮೇಲೆ ಹೂಗಳ ಅಚ್ಚೆ ಹಾಕಲಾಗಿದೆ. ಎರಡೂ ಕಿವಿಗಳಲ್ಲಿ ರೋಡ್ಗೋಲ್ಡ್ ಬೆಂಡೋಲೆ ಮತ್ತು ಬುಗುಡಿ ಇದ್ದು, ಕೈಗಳಲ್ಲಿ ಅಲ್ಯುಮಿನಿಯಂನ ಎರಡೆರಡು ಬಳೆಗಳಿವೆ. ಮೃತ ವೃದ್ಧೆಯ ಸಂಬಂಧಿಕರಿದ್ದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಠಾಣಾ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಹಿರೇಮನಿ ಕರಿಯಮ್ಮ ನಿಧನ
ಕೊಟ್ಟೂರು: ಇಲ್ಲಿನ ಆರಾಧ್ಯದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ಪ್ರತೀ ರಥೋತ್ಸವದ ಮುನ್ನ ಮಂಗಳಾರತಿ ಬೆಳಗುವ ಕಾಯಕ ನೆರವೇರಿಸುತ್ತಾ ಬಂದಿದ್ದ ದಲಿತ ಮಹಿಳೆ ಹಿರೇಮನಿ ಕರಿಯಮ್ಮ (65) ಮಂಗಳವಾರ ನಿಧನರಾದರು. ಮೃತರಿಗೆ ಓರ್ವ ಪುತ್ರಿ ಇದ್ದಾರೆ. 40ಕ್ಕೂ ಹೆಚ್ಚು ವರ್ಷಗಳಿಗಿಂತ ಶ್ರೀಸ್ವಾಮಿಯ ಕೈಂಕರ್ಯ ನೆರವೇರಿಸುತ್ತಿದ್ದ ಅವರು ಕಳೆದ ವರ್ಷ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದರು. ಕರಿಯಮ್ಮನ ನಿಧನದ ಸುದ್ದಿತಿಳಿದು ಕೂಡ್ಲಿಗಿ ತಹಸೀಲ್ದಾರ್ ಜವರೇಗೌಡ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಮಹೇಶ್ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತಗುಂಡಿ, ಪ್ರಧಾನ ಧರ್ಮಕರ್ತ ಎ.ಎಂ.ಬಿ. ಕೊಟ್ರಯ್ಯ, ಮುಖಂಡ ಎಂ.ಎಂ.ಜೆ. ಹರ್ಷವರ್ಧನ್, ಪಪಂ ಸದಸ್ಯ ಬುಗ್ಗಳ್ಳಿ ಕೊಟ್ರೇಶ್ ಮತ್ತಿತರರು ಮೃತರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು. ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಭಕ್ತರ ಕಾಣಿಕೆ ಹುಂಡಿ ಪೆಟ್ಟಿಗೆಗಳ ಎಣಿಕಾ ಕಾರ್ಯವನ್ನು ಮೃತರ ಗೌರವಾರ್ಥ ಕೈಬಿಟ್ಟು ಬುಧವಾರಕ್ಕೆ ಮುಂದೂಡಲಾಯಿತು. ಮಂಗಳವಾರ ಸಂಜೆ ಮೃತ ಕರಿಯಮ್ಮನ ಅಂತ್ಯಕ್ರಿಯೆ ರುದ್ರಭೂಮಿಯಲ್ಲಿ ನೆರವೇರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

