ಇಂದು ಕೃಷ್ಣ ಜಯಂತ್ಯುತ್ಸವ
ಕೂಡ್ಲಿಗಿ: ತಾಲೂಕು ಯಾದವ ಸಂಘದಿಂದ ಸೆ. 4ರಂದು ಬೆಳಗ್ಗೆ 11.30ಕ್ಕೆ ಶ್ರೀಕೃಷ್ಣ ಜಯಂತ್ಯುತ್ಸವ ಕಾರ್ಯಕ್ರಮವನ್ನು ಪಟ್ಟಣದ ಚಂದ್ರಶೇಖರ ಅಜಾದ್ ಮೈದಾನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಶಾಸಕ ಬಿ. ನಾಗೇಂದ್ರ ಉದ್ಘಾಟಿಸಲಿದ್ದಾರೆ. ಚಿತ್ರದುರ್ಗದ ಯಾದವ ಮಹಾಸಂಸ್ಥಾನ ಮಠದ ಶ್ರೀಕೃಷ್ಣ ಯಾದವನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವ ಎ. ಕೃಷ್ಣಪ್ಪ, ಬಾಗಲಕೋಟೆ ಎಸ್ಪಿ ಈಶ್ವರಚಂದ್ರ ವಿದ್ಯಾಸಾಗರ, ಯಾದವ ಸಮಾಜದ ಹಿರಿಯ ಮುಖಂಡ ಎಂ. ರಾಮಯ್ಯ, ಮಾಜಿ ಶಾಸಕ ಎ.ವಿ. ಉಮಾಪತಿ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಚಿಕ್ಕಪ್ಪಯ್ಯ, ತಾಪಂ ಅಧ್ಯಕ್ಷೆ ಮಂಗಳಮ್ಮ ಚಿನ್ನಾಮ್ರಪ್ಪ, ಉಪಾಧ್ಯಕ್ಷ ಎಚ್. ಮಹೇಶ್, ಜಿಪಂ ಸದಸ್ಯೆ ಸಾವಿತ್ರಮ್ಮ, ಕೆ.ಎಂ. ಶಶಿಧರ, ಪಿ. ಚನ್ನಬಸವನಗೌಡ, ಸಾವಜ್ಜಿ ಶಾರದಾ ಪ್ರಸಾದ್, ಮೀನಾಕ್ಷಮ್ಮ, ಎಪಿಎಂಸಿ ಅಧ್ಯಕ್ಷ ಜೆ.ಸಿ. ಶಶಿಧರ ಭಾಗವಹಿಸಲಿದ್ದಾರೆ. ಡಾ. ದೊಡ್ಡ ಮಲ್ಲಯ್ಯ ಕೃಷ್ಣ ಪ್ರಜ್ಞೆ ಎನ್ನುವ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬೆಳಗ್ಗೆ 9.30ಕ್ಕೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದು ಸಂಘದ ಜಿ.ಪಿ. ಗುರುಲಿಂಗಪ್ಪ, ಡಿ.ಬಿ. ಚಿತ್ತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರದ ಕ್ರಮಕ್ಕೆ ಖಂಡನೆ
ಬಳ್ಳಾರಿ: ದೇಶವನ್ನು ಆರ್ಥಿಕ ಸಂಕಷ್ಟದಿಂದ ಹೊರತರಲು ದೇವಸ್ಥಾನದ ಬಂಗಾರದ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಜಿಲ್ಲಾ ರೈತಪರ ಹೋರಾಟಗಾರ ಜಿ. ಪುರುಷೋತ್ತಮಗೌಡ ಖಂಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ ಮಹಾರಾಜರು ಅನಾದಿ ಕಾಲದಿಂದಲೂ ದೇವಸ್ಥಾನಗಳಿಗೆ ಜಾತಿ, ಭೇದ ಮರೆತು ದಾನವಾಗಿ ನೀಡಿರುವ ಬಂಗಾರವನ್ನು ಈ ರೀತಿ ಬಳಸಿಕೊಳ್ಳಲು ಮುಂದಾಗುತ್ತಿರುವುದು ಧಾರ್ಮಿಕತೆಗೆ ಧಕ್ಕೆಯುಂಟಾಗಲಿದೆ. ಶಾಸಕರು, ಮಾಜಿ ಶಾಸಕರು, ಮಂತ್ರಿಗಳು, ಕೇಂದ್ರ ಮಂತ್ರಿಗಳು, ಭ್ರಷ್ಟಾಧಿಕಾರಿಗಳು ಅಕ್ರಮವಾಗಿ ಸಂಪಾದಿಸಿದ ವಜ್ರ, ಬಂಗಾರ, ಆಸ್ತಿ ಮತ್ತು ವಿದೇಶಗಳಲ್ಲಿ ಹೂಡಿರುವ ಕಪ್ಪು ಹಣವನ್ನು ಕೇಂದ್ರ ಸರ್ಕಾರ ತರಬೇಕು. ಈ ಮೂಲಕ ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಂದು ಅಹವಾಲು ಸ್ವೀಕಾರ
ಬಳ್ಳಾರಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯೆ ಮೀರಾ ಸಿ. ಸಕ್ಸೇನಾ ಅವರು ಸೆ. 4ರಂದು ಬೆಳಗ್ಗೆ 11 ಗಂಟೆಗೆ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಅನಂತರ ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಜಿಲ್ಲೆಯ ಎಲ್ಲ ಅಧಿಕಾರಿಗಳು ಅಹವಾಲು ಸ್ವೀಕಾರ ಹಾಗೂ ಅಧಿಕಾರಿಗಳ ಸಭೆಗೆ ತಪ್ಪದೇ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಲು ಶಿಕ್ಷಕಿಗೆ ಸೂಚನೆ
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಡಿ. ಅಂತಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀದೇವಿ ಡಿ. ಜಾಧವ ಅವರು ತಮ್ಮ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ, ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಶ್ರೀದೇವಿ ಅವರು 2012ರ ಆಗಸ್ಟ್ 16ರಿಂದ ಅನಿರ್ದಿಷ್ಟ ಅವಧಿಗೆ ವೈದ್ಯಕೀಯ ರಜೆ ಮೇಲೆ ತೆರಳಿದ್ದು, ಈ ವರೆಗೂ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ಈ ಹಿಂದೆ 2 ಬಾರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ಕರ್ತವ್ಯಕ್ಕೆ ಹಾಜರಾಗಲು ತಿಳಿಸಲಾಗಿತ್ತು. ಆದರೆ ಈ ನೋಟಿಸುಗಳು ಸ್ವೀಕೃತವಾಗದೇ ವಾಪಸ್ ಬಂದಿರುತ್ತದೆ. ಈ ಪ್ರಕಟಣೆ ಪ್ರಕಟವಾದ 7 ದಿನಗಳೊಳಗಾಗಿ ಬಿಇಒ ಅನುಮತಿ ಪಡೆದು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ತಪ್ಪಿದಲ್ಲಿ ಕೆಸಿಎಸ್ಆರ್ ನಿಯಮ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂಜಿಸಿದ ಸಂಗೀತೋತ್ಸವ
ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬಳ್ಳಾರಿ ಮ್ಯೂಜಿಕ್ ಕ್ಲಬ್ನಿಂದ ಸಂಗೀತೋತ್ಸವ-2013 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಚೆನ್ನೈನ ರಂಜಿನಿ ಹಾಗೂ ಗಾಯತ್ರಿ ಸಂಗೀತೋತ್ಸವ ಉದ್ಘಾಟಿಸಿದರು. ಖ್ಯಾತ ಮೃದಂಗ ವಿದ್ವಾಂಸ ಬೆಂಗಳೂರಿನ ಎಚ್.ಎಸ್. ಸುಧೀಂದ್ರರನ್ನು ಕ್ಲಬ್ನಿಂದ ಗೌರವಿಸಿ, ಸನ್ಮಾನಿಸಲಾಯಿತು. ಅನಂತರ ಚೆನ್ನೈನ ರಂಜನಿ, ಗಾಯತ್ರಿ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮ್ಯೂಜಿಕ್ ಕ್ಲಬ್ ಅಧ್ಯಕ್ಷ ಜೆ. ಜಯಪ್ರಕಾಶ್ ಗುಪ್ತ, ಕಾರ್ಯದರ್ಶಿ ಡಿ. ಸಂಧ್ಯಾರಾವ್, ಉಪಾಧ್ಯಕ್ಷೆ ಪಿ. ಮಾಯಾರಾವ್, ಖಜಾಂಚಿ, ಲಕ್ಷಣ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

