ಬಳ್ಳಾರಿ

ಮಳೆ ಹಾನಿ: ಶ್ರೀರಾಮುಲು ಭೇಟಿ

Published On :

ಬಳ್ಳಾರಿ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ನೀರಿನಿಂದ ಅವ್ಯವಸ್ಥೆಗೊಳಗಾದ ವಿವಿಧ ಕ್ಯಾಂಪು ಮತ್ತು ಗ್ರಾಮಗಳಿಗೆ ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು.
ರೂಪನಗುಡಿ ಜಿಪಂ ವ್ಯಾಪ್ತಿಯ ತಿರುಮಲನಗರ ಕ್ಯಾಂಪ್, ಶಂಕರಬಂಡೆ, ವಿಜಯಪುರ ಕ್ಯಾಂಪಿನಲ್ಲಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು, ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಸೂಚಿಸಿದರು. ರೂಪನಗುಡಿ ರಸ್ತೆಯಲ್ಲಿರುವ ವೇದಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಹಳೆಯ ಸೇತುವೆ ಒಡೆದು ಹೋಗಿದೆ. ಆ ಭಾಗದ ಜನರ ಸಂಚಾರಕ್ಕೆ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಶ್ರೀರಾಮುಲು ತಾಕೀತು ಮಾಡಿದರು.
ಜಿ. ಜನಾರ್ದನ ರೆಡ್ಡಿ ಅಧಿಕಾರದಲ್ಲಿದ್ದಾಗ ರೂಪನಗುಡಿ ಸೇತುವೆ ನಿರ್ಮಾಣಕ್ಕೆ ರು. 25 ಕೋಟಿ ಅನುದಾನ ಒದಗಿಸಿದ್ದರು. ಇದೀಗ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಅಭಿಯಂತರಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ರೂಪನಗುಡಿ-ರಾಯಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ರು. 1 ಕೋಟಿ ವೆಚ್ಚದಲ್ಲಿ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ನಂತರ ಸುವರ್ಣಗ್ರಾಮ ಯೋಜನೆಯಡಿ ರೂಪನಗುಡಿ ಗ್ರಾಮದಲ್ಲಿ ನಿರ್ಮಿಸಿದ್ದ ಸಮುದಾಯ ಭವನ ಉದ್ಘಾಟಿಸಿದರು.
ಕಮ್ಮರಚೇಡು ಗ್ರಾಮದಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಶಾಲೆಗೆ ಭೇಟಿ ನೀಡಿ, ಶಾಲೆಯ ಸುತ್ತಲೂ ಮಳೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸುವಂತೆ ತಿಳಿಸಿದರು. ಎತ್ತಿನಬೂದಿಹಾಳ, ಇಬ್ರಾಹಿಂಪುರ ಗ್ರಾಮಗಳಿಗೂ ಶಾಸಕರು ಭೇಟಿ ನೀಡಿದರು.
ಬಿಎಸ್ಸಾರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಗುರುಲಿಂಗನಗೌಡ, ಜಿಪಂ ಸದಸ್ಯರಾದ ಡಿ. ರಾಮುಡು, ಮಲ್ಲಿಕಾರ್ಜುನ, ತಾಪಂ ಅಧ್ಯಕ್ಷ ವಿ. ಗಾದಿಲಿಂಗಪ್ಪ, ನಾಗಭೂಷಣಗೌಡ, ಓಬಳೇಶ್ ಸೇರಿದಂತೆ ಸ್ಥಳೀಯ ಗ್ರಾಪಂ ಸದಸ್ಯರು, ಗ್ರಾಮಗಳ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.