ಬಳ್ಳಾರಿ

ಮಕ್ಕಳ ನಾಮಕರಣಕ್ಕೆ ರಕ್ತದಾನ!

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಸೆ. 11
ಪೋಷಕರು ತಮ್ಮ ಮುದ್ದು ಕಂದಮ್ಮಗಳ ನಾಮಕರಣ ಕಾರ್ಯಕ್ರಮವನ್ನು ಬಂಧು, ಬಳಗ, ಹಿತೈಷಿ, ಸ್ನೇಹಿತರನ್ನು ಕರೆಯಿಸಿ ಕೂಸನ್ನು ತೊಟ್ಟಿಲಲ್ಲಿ ತೂಗಿ ನಾಮಕರಣ ಮಾಡಿ ಸಿಹಿ ಊಟ ಹಾಕಿಸಿ ಸಂಭ್ರಮಿಸುವುದನ್ನ ನಾವು ಕಂಡಿದ್ದೇವೆ. ಆದರೆ ದಂಪತಿ ಜೋಡಿ ತಮ್ಮ ಚೊಚ್ಚಲ ಮಗನ ನಾಮಕರಣವನ್ನು ರಕ್ತದಾನದಂತ ನಿಸ್ವಾರ್ಥ ಕಾರ್ಯ ಮಾಡುವ ಮೂಲಕ ಕಾರ್ಯಕ್ರಮವನ್ನು ಆಚರಿಸಿ ಮಾದರಿಯಾಗಿದ್ದಾರೆ.
ಹೌದು, ತಾಲೂಕಿನ ಗಡಿಗ್ರಾಮ ಎಕ್ಕೆಗುಂದಿಯ ನಾಗರಾಜ ಹಾಗೂ ತಿಪ್ಪೇಸ್ವಾಮಿ ಸಹೋದರರು ತಮ್ಮ ಮಕ್ಕಳ ನಾಮಕರಣವನ್ನು ಅರ್ಥಪೂರ್ಣವಾಗಿ ಆಚರಿಸಿ ಇತರರಿಗೂ ಪ್ರೇರಣೆಯಾಗಿದ್ದಾರೆ.
ಸುಮಾ, ಎ.ಬಿ. ನಾಗರಾಜ ಹಾಗೂ ಪ್ರೇಮಾ, ಎ.ಬಿ. ತಿಪ್ಪೇಸ್ವಾಮಿ ದಂಪತಿ ತಮ್ಮ ಇಬ್ಬರು ಮಕ್ಕಳ ನಾಮಕರಣದಲ್ಲಿ ರಕ್ತದಾನ ಮಾಡಿದ್ದಾರೆ. ನಾಗರಾಜ ಪುತ್ರನಿಗೆ ಪ್ರತೀಕ್ ಎಂದು, ಎ.ಬಿ. ತಿಪ್ಪೇಸ್ವಾಮಿ ಪುತ್ರನಿಗೆ ನೂತನ್ ಎಂದು ನಾಮಕರಣ ಮಾಡಲಾಯಿತು.
ಗ್ರಾಮೀಣರಲ್ಲಿ ಅರಿವು: ಅವಿಭಕ್ತ ಕುಟುಂಬಗಳು ವಿಭಕ್ತ ಕುಟಂಬಳಾಗುತ್ತಿರುವ ಇಂದಿನ ದಿನಗಳಲ್ಲಿ ಈ ಸಹೋದರರು ತಮ್ಮಿಬ್ಬರ ಮಕ್ಕಳ ನಾಮಕರಣವನ್ನು ಒಂದೇ ದಿನ ಆಯೋಜಿಸಿ, ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡಿದ್ದನ್ನು ನೋಡಿದ ಗ್ರಾಮಸ್ಥರು, ಸುತ್ತಮುತ್ತಲ ಹಳ್ಳಿಗಳ ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ನಾಮಕರಣ, ಹುಟ್ಟುಹಬ್ಬದಂದು ರಕ್ತ ನೋಡುವುದೇ ಸರಿಯಲ್ಲ ಎಂದು ತಿಳಿದಿರುವ ನಮ್ಮ ಹಳ್ಳಿ ಜನತೆಗೆ ಇಲ್ಲಿಯ ಅಕ್ಷರಸ್ಥ ಯುವಕ ನಾಗರಾಜ ರಕ್ತದಾನ ಶ್ರೇಷ್ಠದಾನ ಎಂದು ಹಳ್ಳಿ ಜನತೆಯಲ್ಲಿ ಅರಿವು ಮೂಡಿಸುವ ಜತೆಗೆ ಆಡಂಬರದ ಆಚರಣೆಗಳಿಗಿಂತ ಮಾನವೀಯ ಮೌಲ್ಯಗಳು ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ.
ಈ ವಿಶಿಷ್ಟ ನಾಮಕರಣ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಸೇರಿದಂತೆ ಸ್ನೇಹಿತರು, ಹಿತೈಷಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಸಾಕ್ಷಿಯಾದರು. ಬಳ್ಳಾರಿಯ ವಿಮ್ಸ್ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಈ ಕಾರ್ಯಕ್ರಮಕ್ಕೆ ಆಗಮಿಸಿ 25ಕ್ಕೂ ಹೆಚ್ಚು ಯುವಕರ ರಕ್ತವನ್ನು ಸಂಗ್ರಹಿಸಿದರು. ರಕ್ತ ಸಂಗ್ರಹ ನಂತರ ವೈದ್ಯರು, ನರ್ಸ್‌ಗಳು, ಸಿಬ್ಬಂದಿ, ಗ್ರಾಮಸ್ಥರು ನಾಮಕರಣದಲ್ಲಿ ಭಾಗವಹಿಸಿ ಸಿಹಿಯೂಟ ಸವಿದರು.

ರಕ್ತದಾನ ಮಾಡೋದ್ರಿಂದ ಎಷ್ಟೋ ಜೀವಗಳನ್ನು ಉಳಿಸಬಹುದು. ಹಳ್ಳಿಗರಲ್ಲಿ ಈಗಲೂ ರಕ್ತದಾನದ ಬಗ್ಗೆ ತಪ್ಪು ಕಲ್ಪನೆ ಇದೆ. ರಕ್ತಕೊಟ್ರೆ ನಿಶ್ಯಕ್ತಿ ಆಗುತ್ತದೆ, ಏಳಿಗೆ ಆಗೋದಿಲ್ಲ ಎಂದು ತಿಳಿದಿದ್ದಾರೆ. ಸಾಮಾನ್ಯ ಜನತೆಗೂ ರಕ್ತದಾನದಿಂದ ಎಷ್ಟು ಉಪಯೋಗ ಆಗುತ್ತೆ, ತೊಂದ್ರೆ ಇಲ್ಲ ಎಂದು ತೋರಿಸಲು ಕಾರ್ಯಕ್ರಮ ಮಾಡಿದ್ವಿ.
- ಎ.ಬಿ. ನಾಗರಾಜ.
ನಾಗರಾಜ ತಮ್ಮ ಮಕ್ಕಳ ನಾಮಕರಣಕ್ಕಷ್ಟೇ ರಕ್ತದಾನ ಮಾಡಲ್ರೀ, 5 ವರ್ಷದಿಂದ ನಮ್ಮೂರಿನಲ್ಲಿ ಗಣೇಶ ಚತುರ್ಥಿಯಂದು ನೂರಾರು ಯುವಕರು ರಕ್ತದಾನ ಮಾಡೋ ಕಾರ್ಯಕ್ರಮ ಮಾಡ್ತಾ ಬಂದಿದ್ದಾನೆ. ದುಶ್ಟಟಗಳನ್ನೇ ಹವ್ಯಾಸ ಮಾಡಿಕೊಂಡಿರುವ ಇಂದಿನ ಯುವಕರಿಗೆ ನಾಗರಾಜ ವಿಭಿನ್ನವಾಗಿ ಕಾಣುತ್ತಾರೆ. ಇಂಥವರು ಸಮಾಜಕ್ಕೆ ಬೇಕು.
- ನಿಂಗಪ್ಪ ಎಕ್ಕಗುಂದಿ,
ಎಸ್‌ಡಿಎಂಸಿ ಅಧ್ಯಕ್ಷ
- ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.