ಆಂಗ್ಲ ಶಿಕ್ಷಣ ವ್ಯಾಮೋಹ ಬೇಡ
ಹಗರಿಬೊಮ್ಮನಹಳ್ಳಿ: ಅಂಗ್ಲ ಭಾಷೆಯಲ್ಲಿಯೇ ಕಲಿತರೆ ನಮ್ಮ ಮಕ್ಕಳು ವೈದ್ಯ, ಎಂಜಿನಿಯರ್ ಆಗುತ್ತಾರೆಂಬ ಗಟ್ಟಿ ಭಾವನೆ ಬಹುತೇಕ ಪಾಲಕರ ಮನಸ್ಸಿನಾಳಕ್ಕೆ ಇಳಿದಿದೆ. ಇಂತಹ ಭಾವನೆಗಳನ್ನು ತಮ್ಮ ಮನಸ್ಸಿನಿಂದ ಕಿತ್ತೊಗೆಯಬೇಕು. ಅಲ್ಲಿವರೆಗೆ ಕನ್ನಡ ಭಾಷೆ ಕಲಿಕೆ ಬಗ್ಗೆ ಇಂದಿನ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಲು ಸಾಧ್ಯವಾಗದು ಎಂದು ಲೇಖಕ ಡಾ. ವೆಂಕಟಗಿರಿ ದಳವಾಯಿ ಅಭಿಪ್ರಾಯಿಸಿದರು.
ಬುಧವಾರ ಪಟ್ಟಣದ ಗುರುಭವನದಲ್ಲಿ ಮಾರುತಿ ಸ್ಪೋರ್ಟ್ಸ್ ಕ್ಲಬ್ 24ನೇ ವರ್ಷದ ವಿನಾಯಕ ಪ್ರತಿಷ್ಠಾಪನೆ ನಿಮಿತ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾತೃ ಭಾಷೆಯಲ್ಲಿಯೇ ಕಲಿತು ಖ್ಯಾತ ವೈದ್ಯ, ಎಂಜಿನಿಯರ್ಗಳು ಆಗಿರುವ ಲಕ್ಷಾಂತರ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಇಂತಹ ಸಾಧನೆಗಳು ನಮ್ಮ ಪಾಲಕರ ಕಣ್ಣಿಗೆ ಬೀಳುತ್ತಿಲ್ಲ ಎಂದರು.
ಕವಿಗೆ ಸಮಕಾಲಿನ ವಿದ್ಯಮಾನಗಳ ಅರಿವಿದ್ದಾಗ ಮಾತ್ರ ಸಮಾಜಮುಖಿ ಕವನಗಳು ಹುಟ್ಟಲು ಸಾಧ್ಯ. ಸಮಾಜದ ಹಿತದೃಷ್ಟಿಯಿಂದ ಪ್ರತಿಯೊಬ್ಬ ಕವಿ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಆಳವಾದ ಅಧ್ಯಯನ ಮತ್ತು ತಿಳಿವಳಿಕೆ ಬೆಳೆಸಿಕೊಳ್ಳುವ ಅಗತ್ಯವಿದೆ. ಜನಸಾಮಾನ್ಯರ ಬದುಕಿಗೆ ತೀರಾ ಹತ್ತಿರವಾಗುವ ಮತ್ತು ಅವರ ಜ್ವಲಂತ ಸಮಸ್ಯೆಗಳನ್ನು ಜಗತ್ತಿಗೆ ಬಿಂಬಿಸುವ ವಿಷಯವಸ್ತು ನಿಮ್ಮ ಮೊದಲ ಆಯ್ಕೆಯಾಗಬೇಕು. ಈ ರೀತಿ ಆದಾಗ ಮಾತ್ರ ಜನರ ಬದುಕಿಗೆ ಹತ್ತಿರವಾಗುವ ಕವಿತೆ ಹುಟ್ಟಲು ಸಾಧ್ಯ ಎಂದು ಹೇಳಿದರು.
ಕನ್ನಡಿಗರು ಉದಾರಿಗಳು: ಹುರಕಡ್ಲಿ ಶಿವಕುಮಾರ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಗತಕಾಲದ ಇತಿಹಾಸವಿದೆ. ಆದರೆ ಆಂಗ್ಲ ಸಾಹಿತ್ಯಕ್ಕೆ ಯಾವುದೆ ಇತಿಹಾಸವಿಲ್ಲ. ಅದರೂ ಇವತ್ತು ಇಡೀ ವಿಶ್ವವನ್ನು ಈ ಭಾಷೆ ಆಳ್ವಿಕೆ ಮಾಡುತ್ತಿದೆ. ಇಂಗ್ಲಿಷ್ ಬಿಟ್ಟರೆ ನಮ್ಮ ಅಸ್ತಿತ್ವವೇ ಇಲ್ಲ ಎಂಬಂತ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ನಮ್ಮ ಕನ್ನಡಿಗರಷ್ಟು ಉದಾರವಾದಿಗಳು ಈ ಪ್ರಪಂಚದಲ್ಲಿ ಬೇರೆಲ್ಲೂ ಸಿಗಲಾರರು. ಕಾರಣ ನಮ್ಮ ಭಾಷೆಯನ್ನು ಬಲಿ ಕೊಟ್ಟದಾರೂ ಸರಿ ಆಂಗ್ಲಭಾಷೆಯನ್ನು ಉಳಿಸಿ, ಬೆಳೆಸಬೇಕೆಂಬ ಹಂಬಲ ಬಹುತೇಕರಲ್ಲಿದೆ. ಹೀಗಾಗಿ ನಮ್ಮ ಭಾಷೆ ಕಾಯಲು ಕನ್ನಡ ಕಾವಲು ಸಮಿತಿಗಳನ್ನು ರಚಿಸುವ ಸ್ಥಿತಿ ಬಂದೊದಗಿದೆ ಎಂದು ವಿಷಾದಿಸಿದರು. ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಇಟಗಿ ಕಲ್ಲೇಶಪ್ಪ, ಸಾಹಿತಿ ಉಪ್ಪಾರ ಬಸಪ್ಪ, ಶಿವಾನಂದ ಶಿಶುವಿನಹಳ್ಳಿ, ಪರಮೇಶ್ವರಯ್ಯ ಸೊಪ್ಪಿಮಠ್, ಟಿ.ಎಂ. ಉಷಾರಾಣಿ, ಕೊಟ್ಟೂರಿನ ಸೈಫ್ಜಾನ್ಸೆ, ವಟ್ಟಮ್ಮನಹಳ್ಳಿ ಪಂಪಣ್ಣ, ಜಗದಾಂಬ ಅಂಬಿಗ, ಅಮರೇಶ ಸೊನ್ನದ್ ಸೇರಿದಂತೆ ಹಲವು ಕವಿಗಳು ಕವನ ವಾಚಿಸಿದರು. ಬಡಲಡಿಕಿ ಮಂಜುನಾಥ ಸ್ವಾಗತಿಸಿದರು. ಬಾರಿಕರ ಗಂಗಾಧರ ವಂದಿಸಿದರು. ಅಕ್ಕಿ ಬಸವೇಶ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

