ಇಂದು ಪ್ರಶಸ್ತಿ ಪ್ರದಾನ
ಹೊಸಪೇಟೆ: ಹಗರಿಬೊಮ್ಮನಹಳ್ಳಿಯ ಕಾವ್ಯವಾಹಿನಿ ಗಾಯನ ಸಂಸ್ಥೆ 6ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ, ಸಂಗೀತ ಮತ್ತು ನೃತ್ಯ ಕಲಾಮಹೋತ್ಸವ ಕಾರ್ಯಕ್ರಮ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೆ. 16ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಡಾ. ರತ್ನ ಜೋಷಿ, ಹರಪ್ಪನಹಳ್ಳಿ ಕುರೆಮಾಗನಹಳ್ಳಿಯ ಕೆ.ಎಸ್. ಪ್ರಕಾಶ್, ತೋರಣಗಲ್ಲಿನ ಉದ್ಯಮಿ ಕೆ. ಗುರುಪಾದಪ್ಪ, ಹರಪ್ಪನಹಳ್ಳಿಯ ಸಮಾಜ ಸೇವಕಿ ಪದ್ಮಾ ಲೋಕೇಶ್ ಅವರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ನಂತರ ಸಂಗೀತ ಕಲಾವಿದ ಟಿ. ರಾಜರಾವ್ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ನೃತ್ಯ ಹಾಗೂ ನೃತ್ಯ ರೂಪಕಗಳನ್ನು ವೀಣಾ ಆದೋನಿ ಮತ್ತು ಸಂಗಡಿಗರು ಹಾಗೂ ಕವಿತಾ ವಿಶ್ವನಾಥ ನೃತ್ಯ ಕಾರ್ಯಕ್ರಮ ನಡೆಸಿಕೊಡುವರು ಎಂದು ಸಂಸ್ಥೆಯ ಅಧ್ಯಕ್ಷೆ ಟಿ. ಜ್ಯೋತಿರಾಜ್ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಬಳ್ಳಾರಿ: ಅಲ್ಪಸಂಖ್ಯಾತ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಸರ್ವಿಸಿಂಗ್ ಎಲೆಕ್ಟ್ರಾನಿಕ್ಸ್ ಅಂಡ್ ಎಕ್ವಿಪ್ಮೆಂಟ್ (3 ತಿಂಗಳು) ಮತ್ತು ಏರ್ ಕಂಡಿಷನಿಂಗ್ ಅಂಡ್ ರೆಫಿಜರೇಷನ್ (6 ತಿಂಗಳು) ಕೋರ್ಸ್ಗಳಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಯನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ನೀಡಲಾಗುವುದು. ಎಸ್ಸೆಸ್ಸೆಲ್ಸಿ ಉತ್ತೀರ್ಣ, ಅನುತ್ತೀರ್ಣ ಹೊಂದಿರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಪಾರ್ಸಿ, ಸಿಖ್ ಮತೀಯ ಅಲ್ಪಸಂಖ್ಯಾತರ ಜನಾಂಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 18ರಿಂದ 40 ವರ್ಷ ವಯೋವಾನದವರಾಗಿದ್ದು, ಪೋಷಕರ ವಾರ್ಷಿಕ ವರಮಾನ ರು. 48,000 ಮೀರಿರಬಾರದು. ತರಬೇತಿ ಅವಧಿಯಲ್ಲಿ ರು. 500 ಭತ್ಯೆ ನೀಡಲಾಗುವುದು. ಆಸಕ್ತರು ತಮ್ಮ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸೆ. 30ರೊಳಗಾಗಿ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಬಳ್ಳಾರಿ ಇವರಿಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ.
ಯುವಕ ಸಾವು
ಹೂವಿನಹಡಗಲಿ: ತಾಲೂಕಿನ ಮುದೇನೂರು ಗ್ರಾಮದ ಕೆರೆಯಲ್ಲಿ ಈಜಲು ಹೋದ ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಭಾನುವಾರು ಸಂಜೆ ನಡೆದಿದೆ. ಮಹಾಂತೇಶ (17) ಮೃತ ದುರ್ದೈವಿಯಾಗಿದ್ದಾನೆ. ಮಹಾಂತೇಶ ಗ್ರಾಮದ ಚಂದ್ರಪ್ಪ ಎನ್ನುವವರ ಮಗನಾಗಿದ್ದು, ಪಕ್ಕದ ಹರಪ್ಪನಹಳ್ಳಿಯಲ್ಲಿ ಪಿಯುಸಿ ಅಭ್ಯಾಸ ಮಾಡುತ್ತಿದ್ದನು. ಕೆರೆಯಲ್ಲಿ ಈಜಲು ಹೋದವನು ಮರಳಿ ಬಾರದೇ ನೀರು ಪಾಲಾಗಿರುವ ಬಾಲಕನ ಹುಡುಕಾಟ ನಡೆದಾಗ ಕೆರೆಯ ದಂಡೆಯ ಮೇಲೆ ಯುವಕನ ಉಡುಪುಗಳು ಪತ್ತೆಯಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದು, ಶವ ಇನ್ನು ಸಿಕ್ಕಿಲ್ಲ. ಸ್ಥಳಕ್ಕೆ ಹೂವಿನಹಡಗಲಿ ಪಿಎಸ್ಐ ಆಂಜನೇಯ ಭೇಟಿ ನೀಡಿ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

