ಬಳ್ಳಾರಿ

ನವೆಂಬರ್ನಲ್ಲಿ ಹಂಪಿ ಉತ್ಸವ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 17
ಐತಿಹಾಸಿಕ ಸುಪ್ರಸಿದ್ಧ ಹಂಪಿ ಉತ್ಸವವನ್ನು ನವೆಂಬರ್ ತಿಂಗಳಿನಲ್ಲಿಯೇ ಆಚರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಹೇಳಿದರು.
ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಹೈ-ಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಈಗಾಗಲೇ ಹಂಪಿ ಉತ್ಸವ ಆಚರಣೆ ಕುರಿತು ಮೊದಲ ಸುತ್ತಿನ ಮಾತುಕತೆ ನಡೆಸಲಾಗಿದೆ. ಸಿಎಂ ಅವರು ವಿದೇಶಿ ಪ್ರವಾಸದಿಂದ ಮರಳಿ ಬಂದಿದ್ದು, ಆದಷ್ಟು ಶೀಘ್ರವೇ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸುತ್ತೇನೆ ಎಂದರು. ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್ರ ಅವಧಿಯಲ್ಲಿ ನವೆಂಬರ್ 3,4,5 ರಂದು ಆಚರಿಸುತ್ತಿದ್ದ ಹಂಪಿ ಉತ್ಸವಕ್ಕೆ ಈ ಬಾರಿ ದೀಪಾವಳಿ ಹಬ್ಬ ಇರುವುದರಿಂದ ಅದೇ ತಿಂಗಳಲ್ಲಿ ಇತರೆ ದಿನಗಳಂದು ಆಚರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಉತ್ಸವದ ರೂಪುರೇಷ: ಹಂಪಿ ಉತ್ಸವ ಆಚರಣೆಗೆ ಸರ್ಕಾರ ಬದ್ಧವಾಗಿದೆ. ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಈ ಮೊದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸುತ್ತಿದ್ದ ಉತ್ಸವದ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಿದ್ಧತೆ ಸಮಿತಿ ರಚಿಸಲಾಗುತ್ತದೆ. ಇದಾದ ನಂತರ ಸಚಿವರು, ಅಧಿಕಾರಿಗಳು ಸಭೆ ಸೇರಿ ಹಂಪಿ ಉತ್ಸವದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಾರೆ ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಕ್ರಮ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ. ಈಗಾಗಲೇ ಸಿ.ಕೆಟಗರಿಯ 51 ಗಣಿ ಕಂಪನಿಗಳ ಪರವಾನಗಿ ರದ್ದು ಮಾಡಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷಗಳ ಮುಖಂಡರು ಅಕ್ರಮ ಗಣಿಗಾರಿಕೆ ನಡೆಸಿದ್ದರೂ ಸರ್ಕಾರವು ಅವರ ವಿರುದ್ಧ ಕ್ರಮ ಜರುಗಿಸುತ್ತದೆ. ಈಗಾಗಲೇ ಸಿಬಿಐ, ಸಿಇಸಿ ತನಿಖೆ ನಡೆಸಿದ್ದು, ಅಕ್ರಮ ಗಣಿಗಾರಿಕೆಯ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ಎಲ್ಲ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕುಡಿವ ನೀರಿನ ಕೆರೆ ದುರಸ್ತಿ: ಬಳ್ಳಾರಿ ನಗರಕ್ಕೆ ಸರಬರಾಜಾಗುವ ಕುಡಿವ ನೀರಿನ ಕೆರೆ ದುರಸ್ತಿಗಾಗಿ ರು. 65 ಲಕ್ಷ ಬೇಕಾಗುತ್ತದೆ. ಸದ್ಯ ಅಷ್ಟೊಂದು ಹಣ ಇಲ್ಲದ ಕಾರಣ ರು. 15 ಲಕ್ಷಗಳಿಂದ ತಾತ್ಕಾಲಿಕವಾಗಿ ದುರಸ್ತಿ ಕಾರ್ಯಕೈಗೊಳ್ಳಲಾಗಿದೆ ಎಂದು ಎಂದು ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಹೇಳಿದರು.
ಕೆರೆ ದುರಸ್ತಿಗಾಗಿ ಇನ್ನುಳಿದ ಹೆಚ್ಚುವರಿ ಹಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬಂದ ಕೂಡಲೇ ದುರಸ್ತಿ ಮಾಡಿಸಲಾಗುವುದು. ಮುಂಬರುವ ಬೇಸಿಗೆ ದಿನಗಳಲ್ಲಿ ಯಾವುದೇ ರೀತಿಯ ಕುಡಿವ ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಸಮಗ್ರ ಜಿಲ್ಲೆಯನ್ನಾಗಿ: ಜಿಲ್ಲಾ ಕೇಂದ್ರದಲ್ಲಿ ನಡೆಯಬೇಕಿದ್ದ ಜಿಲ್ಲಾ ಸಮಾರಂಭಗಳನ್ನು ತಾಲೂಕು ಕೇಂದ್ರಗಳಲ್ಲಿ ನಡೆಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಿಕ್ಷಕರ ದಿನಾಚರಣೆಯನ್ನು ಹಡಗಲಿಯಲ್ಲಿ ನಡೆಸುವಂತೆ ತಾವು ತಿಳಿಸಿಲ್ಲ. ಮೇಲಾಗಿ ಶಿಕ್ಷಕರ ಸಂಘ, ನೌಕರರ ಸಂಘ, ಕೆಲ ಅಧಿಕಾರಿಗಳು ಸೇರಿ ಹಡಗಲಿಯಲ್ಲಿ ಆಚರಿಸೋಣ ಎಂದಾಗ ತಾವು ಅದಕ್ಕೆ ಸಹಮತ ಸೂಚಿಸಿದ್ದೇನೆ ಹೊರತು, ಅಲ್ಲಿಯೇ ಮಾಡಬೇಕೆಂದು ತಾವು ತಿಳಿಸಿಲ್ಲ. ಬಳ್ಳಾರಿ ಜಿಲ್ಲೆಯನ್ನು ಸಮಗ್ರ ಜಿಲ್ಲೆಯನ್ನಾಗಿ ನೋಡುತ್ತಿದ್ದೇನೆ ಎಂದು ಹೇಳಿದರು.
ಕ್ರೀಡಾಂಗಣ ಉದ್ಘಾಟನೆ: ಜಿಲ್ಲೆಯಲ್ಲಿ ಉದ್ಘಾಟನೆಗಾಗಿ ಕಾಯುತ್ತಿರುವ ಹೊನಲುಬೆಳಕಿನ ಫುಟ್ಬಾಲ್ ಕ್ರೀಡಾಂಗಣ, ವಿಜ್ಞಾನ ಭವನ ಇತರವುಗಳನ್ನು ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರದಲ್ಲೇ ಬಳ್ಳಾರಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಜಿಪಂ ಅಧ್ಯಕ್ಷೆ ಶೋಭ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ ಸುರೇಶ್, ಜಿಪಂ, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಜಿಪಂ ಸಿಇಒ ಮಂಜು ನಾಥ್ ನಾಯ್ಕ್, ಎಸ್ಪಿ ಚೇತನ್ಸಿಂಗ್ ರಾಥೋರ್ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.