ಬಳ್ಳಾರಿ

ರೈತರಿಗೆ ಕೈಕೊಟ್ಟ ಕನಕ ಬಿಟಿ

Published On :

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಸೆ. 25
'ನೆಚ್ಚಿದ ಎಮ್ಮೆ ಕೋಣ ಈಯಿತು' ಎಂಬ ಮಾತಿನಂತೆ ಕನಕ ಬಿಟಿ ಹತ್ತಿ ಬೀಜವನ್ನು ಹರಸಾಹಸ ಮಾಡಿ ಖರೀದಿಸಿದ ರೈತರು ಬಿತ್ತ್ತನೆ ಮಾಡಿ ಇದೀಗ ಪರಿತಪಿಸುವಂತೆ ಮಾಡಿದೆ.
ಕೊಟ್ಟೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ರೈತರ ನೆಚ್ಚಿನ ಬೀಜವಾಗಿದ್ದ ಕನಕ ಬಿಟಿ ಹತ್ತಿ ಹೊಲಗಳಲ್ಲಿ ವ್ಯಾಪಕ ಕೀಟಬಾಧೆಗೆ ಒಳಗಾಗಿ ಭಯಂಕರ ರೋಗದಿಂದ ಬೆಳೆ ಬಾರದಂತ ಗತಿಯನ್ನು ತಲುಪಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.
ಉದುರುತ್ತಿದೆ ಕಾಯಿ: ಕೊಟ್ಟೂರು ಸೇರಿದಂತೆ ಕೂಡ್ಲಿಗಿ ತಾಲೂಕಿನ 2,300 ಹೆಕ್ಟೇರ್ ಪ್ರದೇಶದಲ್ಲಿ ರೈತರು ಈ ಬಾರಿ ಹತ್ತಿ ಬಿತ್ತನೆಗೈದಿದ್ದರು. ಆ ಪೈಕಿ ಶೇ. 90ಕ್ಕಿಂತ ಅಧಿಕ ಪ್ರಮಾಣದಲ್ಲಿ ಬಿಟಿ ಹತ್ತಿ ಬಿತ್ತಿದ್ದಾರೆ. ಕನಕ ಬಿಟಿ ಹತ್ತಿಗೆ 2 ವಿಧದ ಕೀಟಗಳಿಂದ ಈಗ ಬಾಧೆ ಶುರುವಾಗಿದೆ. ಪ್ರತಿ ಗಿಡದಲ್ಲಿ ಮೊಗ್ಗು (ಮೋಪು)ಗಳಿಗೆ ಕೀಟಗಳು ದಾಳಿ ಇಡುತ್ತಿದ್ದು, ಹೂವಾಗುವ ಮೊದಲೆ ಮೊಗ್ಗುಗಳು ವ್ಯಾಪಕವಾಗಿ ಉದುರಲಾರಂಭಿಸಿವೆ. ಗಿಡಗಳಲ್ಲಿ ಉದುರುತ್ತಿರುವ ಮೊಗ್ಗುಗಳ ಸಂಖ್ಯೆ ಶೇ. 80ಕ್ಕೂ ಹೆಚ್ಚಿನ ಪ್ರಮಾಣದ್ದಾಗಿದೆ. ಇದರಿಂದಾಗಿ ಹತ್ತಿ ಗೀಡಗಳಲ್ಲಿ ಕಾಯಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ನಿರೀಕ್ಷೆಯಂತೆ ಕಾಯಿಗಳು ಗಿಡದಲ್ಲಿ ಉಳಿಯುತ್ತಿಲ್ಲವಾದ್ದರಿಂದ ಹೆಚ್ಚು ಹೆಚ್ಚು ಇಳುವರಿ ಕನಸು ಹೊತ್ತಿದ್ದ ರೈತರು ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಕಾಳಸಂತೆಯಲ್ಲೂ ಖರೀದಿ: ಈ ಭಾಗದ ರೈತರು ಕನಕ ಬಿಟಿ ಹತ್ತಿಯನ್ನು ಬಂಗಾರದ ಬೆಳೆ ಎಂಬಂತೆ ಪರಿಗಣಿಸಿ ಬೀಜ ಪಡೆಯಲು ರಾತ್ರಿ ಹಗಲೆನ್ನದೆ ಬೀಜ ಮಾರಾಟದ ಅಂಗಡಿಗಳ ಮುಂದೆ ಸಾಲು ಸಾಲಾಗಿ ನಿಂತು ಪಡೆದುಕೊಳ್ಳುವುದು ಕಳೆದ 3-4 ವರ್ಷಗಳಿಂದ ನಡೆದೆ ಇದೆ. ಈ ಹತ್ತಿ ಬೀಜವನ್ನು ಕೆಲ ರೈತರು ಕಾಳಸಂತೆಯಲ್ಲೂ ಖರೀದಿ ಮಾಡಿದ ಉದಾಹರಣೆ ಇವೆ. ಈ ಬೀಜ ಒಣ ಭೂಮಿಯಲ್ಲಿ 8ರಿಂದ 12 ಕ್ವಿಂಟಲ್, ಎರಡೇ ಬೀಡಿನಲ್ಲಿ 6 ಕ್ವಿಂಟಲ್ ಇಳುವರಿ ನೀಡುತ್ತದೆ. ನೀರಾವರಿ ಭೂಮಿಯಲ್ಲಿ ಈ ಬೆಳೆ ಪ್ರಮಾಣ ಇನ್ನೂ ಹೆಚ್ಚು. ಅಲ್ಲದೆ ಈ ಹತ್ತಿ ಬೆಳೆಗೆ ಔಷಧ ಸೇರಿ ಇತರ ಉಪಚಾರ ವೆಚ್ಚವೂ ಕಡಿಮೆ ಎಂಬ ಅಂಶ ರೈತರನ್ನು ಈ ಬೀಜದತ್ತ ಹೆಚ್ಚು ಆಕರ್ಷಿಸುವಂತೆ ಮಾಡಿತ್ತು. ಇದಕ್ಕೆಂದೇ ರೈತರು ಬೀಜ ಕೊಳ್ಳಲು ಪ್ರತಿ ಸಲ ಮುಗಿ ಬೀಳುವುದು ವಾಡಿಕೆಯಾಗಿತ್ತು.
ಬಿಟಿ ಹತ್ತಿ ಬೆಳೆಗೆ ಈ ಬಗೆಯ ಕೀಟಬಾಧೆ ತಗುಲಿಕೊಂಡು ರೈತರನ್ನು ಕಾಡುತ್ತಿರುವ ಸಂಗತಿ ತಿಳಿದು ತಾವು ಹಿರಿಯ ಅಧಿಕಾರಿಗಳ ಗಮನ ಸೆಳೆದೆವು. ಹಿರಿಯ ಕೃಷಿ ಅಧಿಕಾರಿಗಳು ಇತ್ತೀಚೆಗೆ ಆಗಮಿಸಿ ವೀಕ್ಷಣೆ ಮಾಡಿದ್ದಾರೆ. ಕೀಟ ಬಾಧೆ ಹೊಡೆದೋಡಿಸಲು ಕರಾಟೆ ಮೆಲಾಥಿನ್ ಔಷಧ ಸಿಂಪಡಿಸುವಂತೆ ಸೂಚಿಸಿದ್ದಾರೆ. ಈ ಔಷಧಿ ಸಿಂಪರಣೆಯಿಂದ ರೋಗ ನಿವಾರಣೆಯಾಗುವ ಸಾಧ್ಯತೆಗಳು ಇವೆ ಎಂದು ಮಂಜುನಾಥ ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.