ಕಾನೂನು ಅರಿತರೆ ಅಪರಾಧ ಕಡಿಮೆ
ಹೂವಿನಹಡಗಲಿ: ವ್ಯಕ್ತಿಗೆ ಕನಿಷ್ಠ ಕಾನೂನು ತಿಳಿವಳಿಕೆ ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತವೆ. ಅವುಗಳನ್ನು ಕಡಿಮೆ ಮಾಡಲು ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಿವಿಲ್ ನ್ಯಾಯಾಧೀಶ ಸುದೇಶ ರಾಜರಾಮ್ ಪರದೇಶಿ ಎಂದರು.
ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾಲೂಕು ವಕೀಲರ ಸಂಘ, ಎನ್ನೆಸ್ಸೆಸ್ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಣ್ಣ ವಿಚಾರವೆಂದು ಕಾನೂನನ್ನು ನಿರ್ಲಕ್ಷ್ಯ ಮಾಡಿದರೆ ಭವಿಷ್ಯದಲ್ಲಿ ಬಹಳಷ್ಟು ತೊಂದರೆಗಳು ಉಂಟಾಗಲಿದೆ. ಇಂದಿನ ಯುವ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸಿದಲ್ಲಿ ಅದು ಹತ್ತಾರು ಕಡೆ ಹರಡಿ ಸಮಾಜದ ಪ್ರತಿಯೊಬ್ಬರಿಗೂ ತಿಳಿವಳಿಕೆ ನೀಡಿದಾಗ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ದೆಹಲಿಯಲ್ಲಿ ನಡೆದ ಗ್ಯಾಂಗ್ರೇಪ್ ಪ್ರಕರಣ ದೇಶದಲ್ಲಿ ಸಾಕಷ್ಟು ಚರ್ಚೆಯಾಗಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ತರಲಾಗಿದೆ. ಶೋಷಿತ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಇದರಿಂದ ಅನುಕೂಲವಾಗಿದೆ. ಕಾನೂನು ಸಮುದ್ರವಿದ್ದಂತೆ, ನೆಮ್ಮದಿಯ ಜೀವನ ಸಾಗಿಸಲು ಅಗತ್ಯವಾದ ಕನಿಷ್ಠ ಕಾನೂನು ಅರಿವು ಅವಶ್ಯ. ಈ ಹಿನ್ನೆಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಸಮಿತಿ ಈ ತರಹದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉಚಿತ ಕಾನೂನು ತಿಳಿವಳಿಕೆ ನೀಡುತ್ತಿದೆ ಎಂದು ತಿಳಿಸಿದರು.
ಕಲಾಪದಲ್ಲಿ ಭಾಗವಹಿಸಿ: ತಹಸೀಲ್ದಾರ್ ಎ.ಬಿ. ವಿಜಯಕುಮಾರ ಮಾತನಾಡಿ, ಇಂದಿನ ಯುವಕರು ಕಾನೂನು ಅರಿತು ವ್ಯಾಜ್ಯ ರಹಿತ ಸಮಾಜ ನಿರ್ಮಾಣ ಮಾಡಬೇಕು. ದೇಶದ ಜನಸಂಖ್ಯೆಯ ಶೇ. 2ರಷ್ಟು ಮಾತ್ರ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುತ್ತಿದ್ದಾರೆ. ಉಳಿದವರಿಗೆ ಈ ರೀತಿಯ ಕಾರ್ಯಕ್ರಮಗಳ ಮೂಲಕವೇ ಕಾನೂನು ಸಾಕ್ಷರತೆ ಮೂಡಿಸಬೇಕಿದೆ. ಕಾನೂನಿನ ಬಗ್ಗೆ ಉದಾಸೀನತೆ ತೋರಿದರೆ ಭವಿಷ್ಯ ಮಂಕಾಗಲಿಕೆ ಎಂದರು.
ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ತಿದ್ದುಪಡಿ- 2013ರ ಬಗ್ಗೆ ಸರ್ಕಾರಿ ಅಭಿಯೋಜಕ ಜಗದೀಶ ಬಿಸೆರೊಟ್ಟಿ, ಮೋಟಾರ್ ವಾಹನ ಚಾಲನೆ, ನೋಂದಣಿ ಮತ್ತು ವಿಮೆ ಕುರಿತು ಎಂ. ಗಂಗಾಧರ, ಹಿಂದೂ ಮಹಿಳಾ ಆಸ್ತಿ ಹಕ್ಕು ಬಗ್ಗೆ ಸೊಪ್ಪಿನ ಸುರೇಶ, ಮಾಹಿತಿ ಹಕ್ಕು ಅಧಿನಿಯಮ- 2005 ಎಂಬ ವಿಷಯಗಳ ಕುರಿತು ಶಿವಲಿಂಗಪ್ಪ ಸೂರಣಗಿ ವಕೀಲರು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಎಂ. ಬಸವಲಿಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಚಾರ್ಯ ಡಾ. ಎನ್. ಚಿಕ್ಕಣ್ಣ, ಎನ್ನೆಸ್ಸೆಸ್ ಅಧಿಕಾರಿ ಕೆ. ಸುರೇಶ, ವಕೀಲರಾದ ಅಟವಾಳಗಿ ಕೊಟ್ರೇಶ ಇದ್ದರು. ಸುಮಾ ಸಂಗಡಿಗರು ಪ್ರಾರ್ಥಿಸಿದರು. ಅಬ್ದುಲ್ ಕರೀಂ ಸ್ವಾಗತಿಸಿದರು. ಪೂಜಾ ನಿರೂಪಿಸಿದರು. ಅಜಿತ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

