ಸಿಡಿಲು ಮಳೆಗೆ ಇಬ್ಬರ ಬಲಿ
ಬಳ್ಳಾರಿ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಸಂಜೆ ಗುಡುಗು ಮಿಂಚು ಸಹಿತ ಮಳೆಯಲ್ಲಿ ಸಿಡಿಲು ಬಡಿದು ಇಬ್ಬರು ವ್ಯಕ್ತಿಗಳು ಮೃತ ಪಟ್ಟಿರುವ ಘಟನೆ ಬಳ್ಳಾರಿ ತಾಲೂಕಿನಲ್ಲಿ ನಡೆದಿದೆ. ಇನ್ನು ಮಂಗಳವಾರ ಸಂಜೆ ಸಿಡಿಲು ಬಡಿದು ಕೂಡ್ಲಿಗಿ ತಾಲೂಕಿನ ಶಿವಪುರದಲ್ಲಿ ಎರಡು ಎತ್ತುಗಳು ಮೃತಪಟ್ಟಿವೆ.
ತಾಲೂಕಿನ ಕಾರೇಕಲ್ಲು ಗ್ರಾಮದ ತಿಕ್ಕಣ್ಣ (44), ಸಂಗನಕಲ್ ಗ್ರಾಮದ ಪೂಜಾರಿ ಬಾಬು (35) ಮೃತಪಟ್ಟವರು. ಸೋಮವಾರ ರಾತ್ರಿ ಗುಡುಗು ಮಿಂಚು ಸಹಿತ ಮಳೆ ಸುರಿದ ಸಂದರ್ಭ ಕಾರೇಕಲ್ಲು ಗ್ರಾಮದ ತಿಕ್ಕಣ್ಣ ಹೊಲದಿಂದ ಮನೆಗೆ ಬರುವಾಗ ಸಿಡಿಲು ಬಡಿದಿದೆ. ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಗಿತಬಳ್ಳಾರಿ ಹಗರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಸಂಜೆ ಬಹಿರ್ದೆಸೆಗೆ ಹೋಗಿದ್ದ ಸಂದರ್ಭ ಸಿಡಿಲು ಬಡಿದು ಸಂಗನಕಲ್ಲು ಗ್ರಾಮದ ಪೂಜಾರಿ ಬಾಬು ಮೃತ ಪಟ್ಟಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಪುರ: ಸಿಡಿಲಿಗೆ 2 ಎತ್ತು ಸಾವು
ಕೂಡ್ಲಿಗಿ: ತಾಲೂಕಿನ ಶಿವಪುರ, ಜಂಗಮಸೊವೇನಹಳ್ಳಿ, ಕೈವಲ್ಯಪುರ, ಬಿ.ಬಿ. ತಾಂಡಾ, ಹಿರೇಹೆಗ್ಡಾಳ್ ಮುಂತಾದ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದ್ದು, ತಾಲೂಕಿನ ಶಿವಪುರದಲ್ಲಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ.
ಗ್ರಾಮದಲ್ಲಿ ಸಂಜೆ 5ರ ಸುಮಾರಿಗೆ ಭಾರಿ ಮಳೆ, ಗಾಳಿ ಆರಂಭವಾಯಿತು. ಈ ಸಂದರ್ಭದಲ್ಲಿ ಕಣದಲ್ಲಿ ಕಟ್ಟಿದ್ದ ತಳವಾರ ಕೊಟ್ರೇಶ್, ಸೋದರಿ ರೇಣುಕಾ ಅವರಿಗೆ ಸೇರಿದ ಎರಡು ಎತ್ತುಗಳು ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿವೆ. ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ವಿನೋದ್ ಕುಮಾರ ಭೇಟಿ ನೀಡಿ ಪರಿಶೀಲಿಸಿದ್ದು, ರಾಸುಗಳು ರು. 50 ಸಾವಿರ ಬೆಲೆ ಬಾಳುತ್ತವೆ ಎಂದು ತಿಳಿಸಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಾಪುರ ಗ್ರಾಮದ ಬಡಿಗೇರ ಉಮೇಶ್ ಸಿಡಿಲು ಬಡಿದು ಗಾಯಗೊಂಡಿದ್ದು, ಅವರೀಗ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಮೇಶ್ ತಮ್ಮ ಹೊಲ ಉಳುಮೆ ಮಾಡುತಿದ್ದಾಗ ಬಂದ ಮಳೆಯಿಂದ ರಕ್ಷಣೆ ಪಡೆಯಲು ತಾಳೆ ಮರದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದು ಎದೆ, ಹೊಟ್ಟೆ ಭಾಗಕ್ಕೆ ಗಾಯಗಳಾಗಿವೆ. ತಕ್ಷಣ ಅವರನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

