ಬಳ್ಳಾರಿ

ಬಿಸಿಲಿಗೆ ಬಾಡದ ಮತ ಪ್ರಮಾಣ

Published On :

ಬಳ್ಳಾರಿ: ಅತ್ಯಂತ ಕಡಿಮೆ ಮತದಾನವಾಗಿರುವ ಹಾಗೂ ಬಿಸಿಲಿನಿಂದ ಬೇಸತ್ತು ಮತದಾರರು ಮತದಾನದಿಂದ ದೂರ ಇರಬಾರದು ಎನ್ನುವ ಕಾರಣಕ್ಕೆ ಬಳ್ಳಾರಿ ಕ್ಷೇತ್ರದಲ್ಲಿ 12 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಮಾದರಿ ಮತಗಟ್ಟೆಗಳಿಂದ ಸಾಮಾನ್ಯ ಮತಗಟ್ಟೆಗಳಲ್ಲೇ ಉತ್ತಮ ಮತದಾನ ನಡೆದಿದೆ. ಉರಿ ಬಿಸಲಿನ ತಾಪ, ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಮತದಾನ ಕೇಂದ್ರ ಬರುವಂತೆ ಮಾಡಿತು.
ಕೆಲವು ಹಳ್ಳಿಗಳಲ್ಲಿ 12 ಗಂಟೆಯೊಳಗೆ ಆಯಾ ಮತಗಟ್ಟೆಗಳಲ್ಲಿ ಶೇ. 50ರಷ್ಟು ಮತದಾನವಾಗಿತ್ತು. ಆದರೆ, ಮಾದರಿ ಮತಗಟ್ಟೆಗಳನ್ನು ಆರಂಭಿಸಿದರೂ ಅದರಲ್ಲಿ ಕೆಲವೊಂದು ಮತಗಟ್ಟೆಗಳಲ್ಲಿ ಮಧ್ಯಾಹ್ನ 2 ಗಂಟೆಯಾದರೂ ಶೇ. 50ರಷ್ಟು ದಾಟಿರಲಿಲ್ಲ.
ಬಳ್ಳಾರಿಯಲ್ಲಿ ಬಿಸಿಲಿನ ತಾಪದ ಹಿನ್ನೆಲೆಯಲ್ಲಿ ಮತದಾರ ಮತದಾನದಿಂದ ದೂರು ಸರಿಯುತ್ತಾನೆಂಬ ಭೀತಿಯಲ್ಲಿಯೇ ಚುನಾವಣೆ ಆಯೋಗ ಮತದಾರರಿಗೆ ಹಲವು ಸೌಲಭ್ಯ ಕಲ್ಪಿಸಿತ್ತು. ಮತದಾರ ಬಿಸಿಲಿನ ತಾಪಕ್ಕೆ ಭಯಗೊಂಡಂತೆ ಕಂಡರೂ ಬೆಳಗ್ಗೆಯೇ ಮತದಾನ ಮಾಡಿ, ಬಿಸಿಲಿನ ತಾಪ ತಾಕದಂತೆ ಎಚ್ಚರ ವಹಿಸಿದನು. ಸ್ವೀಪ್ ಅಡಿಯಲ್ಲಿ ಅಧಿಕಾರಿಗಳು, ವೈದ್ಯರು ಮತದಾನ ಜಾಗೃತಿ ಮೂಡಿಸಿದರೆ, ಬಿಸಿಲಿನ ತಾಪ, ಬೆಳಗ್ಗೆಯೇ ಮತದಾರ ಮತದಾನ ಮಾಡುವಂತೆ ಪ್ರೇರೇಪಿಸಿತ್ತು.
ಗ್ರಾಮಗಳಲ್ಲಿ ಬಿರುಸಿನ ಮತದಾನ: ಬಳ್ಳಾರಿ ತಾಲೂಕಿನ ಗ್ರಾಮೀಣ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಬೆಳಗಿನ ಜಾವವೇ ಉತ್ತಮ ಮತದಾನವಾಗಿತ್ತು. ಕೆ. ವೀರಾಪುರ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆ ಹೊತ್ತಿಗೆ 2,225 ಮತಗಳಲ್ಲಿ 721 ಮತದಾರರು ಮತದಾನ ಮಾಡಿದ್ದರು. ಕಾರೆಕಲ್ಲು ಮತಗಟ್ಟೆಗಳಲ್ಲಿ 1,357 ಒಟ್ಟು ಮತದಾರರ ಪೈಕಿ 11 ಗಂಟೆಗೆ 506 ಮತದಾರರು ಮತದಾನ ಮಾಡಿದ್ದರು. ಜಾಲಿಬೆಂಚಿ ಗ್ರಾಮದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ 1,695 ಮತದಾರರಲ್ಲಿ 928 ಮತದಾರರು ಮತದಾನ ಮಾಡಿದ್ದರು. ಹೀಗೆ ಗ್ರಾಮೀಣ ಪ್ರದೇಶದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಕಂಡು ಬಂತು. ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯಲು ಚುನಾವಣಾಧಿಕಾರಿಗಳು ಮಾದರಿ ಮತಗಟ್ಟೆ ವ್ಯವಸ್ಥೆ ಮಾಡಿದ್ದರೂ, ಮಧ್ಯಾಹ್ನ ವೇಳೆಗೆ ಪಾರ್ವತಿ ನಗರದ ಮಾದರಿ ಮತಗಟ್ಟೆಯಲ್ಲಿ ಮತದಾನ ಕಡಿಮೆಯಾಗಿತ್ತು.
ಗಮನ ಸೆಳೆದ ಪ್ರತಿಜ್ಞಾವಿಧಿ: ಈ ಬಾರಿ ಪ್ರತಿಯೊಂದು ಮತಗಟ್ಟೆಗಳ ಮುಂದೆ ಚುನಾವಣಾಧಿಕಾರಿಗಳು ಮತದಾರರ ಪ್ರತಿಜ್ಞಾವಿಧಿಯ ಬರವಣಿಗೆ ರೂಪದ ಹಾಳೆಯನ್ನು ಗೋಡೆಗೆ ಅಂಟಿಸುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು, ಮುಕ್ತ ಮತ್ತು ನ್ಯಾಯಸಮ್ಮತ, ಶಾಂತಿಯುತ ಚುನಾವಣೆ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಗಳಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಪ್ರೇರಣೆಗಳ ದಾರ್ಕ್ಷಿಣ್ಯದಿಂದ ಪ್ರಭಾವಿರಾಗದೇ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆಂಬ ಬರವಣಿಗೆಯನ್ನು ಪ್ರತಿ ಮತಗಟ್ಟೆಗಳ ಗೋಡೆಗೆ ಅಂಟಿಸಿ ಅಧಿಕಾರಿಗಳು ಗಮನ ಸೆಳೆದಿದ್ದರು. ಮತದಾರರು ಇದನ್ನು ಓದಿ ಮತದಾನ ಮಾಡುತ್ತಿದ್ದರು.
ಬೆವರಿನಿಂದ ಬಸವಳಿದ ಸಿಬ್ಬಂದಿ: ಬಳ್ಳಾರಿಯಲ್ಲಿ ಬೇಸಿಗೆ ಎಂದರೆ ಮೈಯೆಲ್ಲ ನೀರು, ಅದರಲ್ಲೂ ಬಿರು ಬೇಸಿಗೆ ಮಧ್ಯೆ ಗುರುವಾರ ಮತದಾನದ ಸಂದರ್ಭ ಗ್ರಾಮಾಂತರ ಮತಗಟ್ಟೆಗಳಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಮತದಾನ ಸಿಬ್ಬಂದಿ ಬೆವರಿನಲ್ಲಿಯೇ ಕೆಲಸ ಮಾಡುವಂತಾಗಿತ್ತು. ಒಂದು ಕೈಯಲ್ಲಿ ಪೇಪರ್‌ನಿಂದ ಗಾಳಿ ಬೀಸಿಕೊಳ್ಳುತ್ತ, ಇನ್ನೊಂದೆಡೆ ಕೆಲಸ ನಿರ್ವಹಿಸಿದ ದೃಶ್ಯಗಳು ಕಂಡು ಬಂದವು.

ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.