ಬಳ್ಳಾರಿ

ಗಣಿನಾಡಲ್ಲಿ ಮತದಾನ ಗಗನಮುಖಿ

Published On :

ಬಳ್ಳಾರಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ. 70.31ರಷ್ಟಾದ ಮತದಾನ ಕಳೆದ ಬಾರಿಗೆ ಹೋಲಿಸಿದರೆ ಶೇ. 9.5ರಷ್ಟು ಹೆಚ್ಚಾಗಿದೆ. ಇವಿಎಂ ಯಂತ್ರಗಳನ್ನು ಬಳ್ಳಾರಿ ರಾವ್ ಬಹದ್ದೂರ್ ಎಂಜಿನಿಯರಿಂಗ್ ಕಾಲೇಜಿನ 8 ಕೊಠಡಿಗಳ ಸ್ಟ್ರಾಂಗ್ ರೂಂನಲ್ಲಿಟ್ಟು, ಭದ್ರತೆ ಕಲ್ಪಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಶುಕ್ರವಾರ ಸ್ಟ್ರಾಂಗ್ ರೂಂ ಕಲ್ಪಿಸಿದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಕಾಲೇಜಿನಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪರ ಬಂದವರ ಸಮ್ಮುಖ ಮತಯಂತ್ರಗಳನ್ನು ರೂಂನಲ್ಲಿಟ್ಟು, ಸ್ಟ್ರಾಂಗ್ ರೂಂಗೆ ಬೀಗ ಹಾಕಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದ್ದು, ಅಹಿತಕರ ಘಟನೆ ನಡೆದಿಲ್ಲ. ಸಿರಿವಾರ, ಸಿರುಗುಪ್ಪ ಒಂದು ಕಡೆ ಮಾತ್ರ ಇವಿಎಂ ಯಂತ್ರದಲ್ಲಿ ದೋಷ ಕಂಡಿದ್ದರಿಂದ ಬೇರೆ ಇವಿಎಂ ಯಂತ್ರ ನೀಡಲಾಗಿತ್ತು. ಕೆಲವೆಡೆ ಮತದಾನದಿಂದ ದೂರ ಉಳಿದವರನ್ನು ಮನವೊಲಿಸಿ, ಮತದಾನ ಮಾಡಿಸಲಾಗಿದೆ ಎಂದರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಒಟ್ಟು 14,87,661 ಮತದಾರರಲ್ಲಿ 5,42,448 ಪುರುಷರು, 5,03,534 ಮಹಿಳೆಯರು, ಇತರ 11 ಸೇರಿ ಒಟ್ಟಾರೆ 10,45,993 ಮತದಾರರು ಹಕ್ಕು ಚಲಾಯಿಸಿದ್ದರಿಂದ ಶೇ. 70.31ರಷ್ಟು ಮತದಾನವಾಗಿದೆ. ಕ್ಷೇತ್ರದ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 74.26 ಅತಿ ಹೆಚ್ಚು ಮತದಾನವಾಗಿದ್ದರೆ, ಬಳ್ಳಾರಿ ನಗರದಲ್ಲಿ ಶೇ. 62.31 ಅತ್ಯಂತ ಕಡಿಮೆ ಮತದಾನವಾಗಿದೆ. ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 69.98, ಹಗರಿಬೊಮ್ಮನಳ್ಳಿ ಕ್ಷೇತ್ರದಲ್ಲಿ ಶೇ. 74.26, ವಿಜಯನಗರ ಕ್ಷೇತ್ರದಲ್ಲಿ ಶೇ. 69.80, ಕಂಪ್ಲಿ ಕ್ಷೇತ್ರದಲ್ಲಿ ಶೇ.72.81, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶೇ. 71.67, ಬಳ್ಳಾರಿ ನಗರ ಕ್ಷೇತ್ರದಲ್ಲಿ ಶೇ. 62.31, ಸಂಡೂರು ಕ್ಷೇತ್ರದಲ್ಲಿ ಶೇ. 70.36, ಕೂಡ್ಲಿಗಿ ಕ್ಷೇತ್ರದಲ್ಲಿ ಶೇ. 71.98ರಷ್ಟು ಮತದಾನವಾಗಿದೆ. ಬಳ್ಳಾರಿ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಮ್ಮಿಂಗ್ ರಸ್ತೆಯ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 175ನೇ ಮತಗಟ್ಟೆಯಲ್ಲಿ ಅತಿ ಹೆಚ್ಚು 95.52ರಷ್ಟು ಮತದಾನವಾಗಿದ್ದರೆ, ಇದೇ ಕ್ಷೇತ್ರದ ಸತ್ಯನಾರಾಯಣಪೇಟೆ ಕೆಎಚ್‌ಬಿ ಕಾಲನಿಯಲ್ಲಿ ಶೇ. 29.44ರಷ್ಟು ಅತ್ಯಂತ ಕಡಿಮೆ ಮತದಾನವಾಗಿದೆ ಎಂದರು.
ಹಲವು ಕಾರಣಗಳಿಂದ ಮತದಾನ ಹೆಚ್ಚಳವಾಗಿದೆ. ಶೇ. 84ರಷ್ಟು ಮತದಾನದ ಸ್ಲೀಪ್‌ಗಳನ್ನು ವಿತರಿಸಲಾಗಿತ್ತು. ಮತದಾನದ ಬಳಿಕ ರಾತ್ರಿ 8.30ಕ್ಕೆ ಲೋಕಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳಿಂದ ಮತಗಟ್ಟೆ ಸಿಬ್ಬಂದಿ, ಮತಯಂತ್ರಗಳುಳ್ಳ ಬಸ್‌ಗಳು ಮತಗಟ್ಟೆಯಿಂದ ಬಿಟ್ಟಿದ್ದರೆ, ಮತಚಲಾವಣೆಗೆ ಸಾಲುಗಟ್ಟಿ ನಿಂತಿದ್ದರಿಂದ ಕ್ಷೇತ್ರದ 6 ಕಡೆ ತಡವಾಗಿ ಬಸ್‌ಗಳು ಬಿಟ್ಟಿವೆ. ಬೆಳಗ್ಗೆ 11ಕ್ಕೆ ಮತಯಂತ್ರಗಳು ಬಳ್ಳಾರಿಗೆ ಆಗಮಿಸಿವೆ. 8 ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿ ಇಟ್ಟಿದೆ. ಎಣಿಕೆ ಸಂದರ್ಭದಲ್ಲಿ ಪ್ರತಿ ಕೊಠಡಿಗೆ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಈ ಬಾರಿ ಮತಎಣಿಕೆ ಕೇಂದ್ರದಲ್ಲೂ, ಮಾದರಿ ಮತಎಣಿಕೆ ಕೇಂದ್ರದ ವ್ಯವಸ್ಥೆ ಮಾಡಲಾಗುತ್ತದೆ. ಹವಾನಿಯಂತ್ರಿತ, ಏರ್‌ಕೂಲರ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್‌ಸಿಂಗ್ ರಾಥೋಡ್ ಮಾತನಾಡಿ, ಸ್ಟ್ರಾಂಗ್ ರೂಂಗೆ 35 ಸಿಬ್ಬಂದಿಯ ಸಿಐಎಸ್‌ಎಫ್ ತುಕಡಿ, 25 ಸಿಬ್ಬಂದಿಯುಳ್ಳ ಒಂದು ಕೆಎಸ್‌ಆರ್‌ಪಿ ತುಕಡಿ, ಪ್ರತಿಶಿಫ್ಟ್‌ಗೆ 24ರಂತೆ ಡಿಎಆರ್, ಸಿವಿಲ್ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಡಿವೈಎಸ್ಪಿ ಸ್ಟ್ರಾಂಗ್ ರೂಂ ಭದ್ರತೆ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಬಾಬುಲಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣೆ ಅಡಿ ಕೇಸು ದಾಖಲಿಸಲಾಗಿದ್ದು, ತನಿಖೆ ನಡೆಸಿ, ಇನ್ನಿತರ ಕೇಸುಗಳನ್ನು ದಾಖಲಿಸಲಾಗುತ್ತದೆ. ಶ್ರೀರಾಮುಲು ಮೇಲಿನ ಚೆಕ್‌ಬೌನ್ಸ್, ಹಲ್ಲೆ ಪ್ರಕರಣ ಕುರಿತಾಗಿ ತನಿಖೆ ನಡೆಸಲಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.