ಕಬ್ಬಿಣ ಕಾರ್ಖಾನೆಯಿಂದ ಮೋಸ
ಬಳ್ಳಾರಿ: ಅದಿರು ಸಾಗಾಣಿಕೆ ಪೂರೈಸಿಕೊಂಡ ಮೈನ್ಸ್ ಲಾರಿಗಳಿಗೆ ನಿಗದಿತ ಬಾಡಿಗೆ ದರ ನೀಡದೆ ಜಿಲ್ಲೆಯ ಕೆಲ ಕಬ್ಬಿಣ ಉತ್ಪಾದನೆಯ ಕಾರ್ಖಾನೆಗಳು ಅನ್ಯಾಯ ವೆಸಗುತ್ತಿವೆ ಎಂದು ಮೈನ್ಸ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವೆಂಕಟರಾವ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಬಳ್ಳಾರಿ, ಸಂಡೂರು, ಹೊಸಪೇಟೆ ತಾಲೂಕುಗಳಲ್ಲಿರುವ ಮೈನ್ಸ್ ಬೆಟ್ಟಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇದಕ್ಕಾಗಿ ಲಕ್ಷಾಂತರ ರು. ಹಣ ವ್ಯಯಿಸಿ ಲಾರಿಗಳನ್ನು ಖರೀದಿಸಿ, ಕಾರ್ಖಾನೆಗಳಿಗೆ ಅದಿರು ಸಾಗಾಣಿಕೆಗೆಂದು ಬಿಡಲಾಗಿದೆ. ಆದರೆ, ಕೆಲ ಕಾರ್ಖಾನೆಗಳು ನಿಗದಿತ ಬಾಡಿಗೆ ದರ ನೀಡದೆ ಕಡಿಮೆ ಹಣ ನೀಡಲು ಮುಂದಾಗುತ್ತಿದ್ದು, ಈ ಹಿಂದೆ ಅದಿರು ಸಾಗಿಸಿದ ಬಾಡಿಗೆ ಹಣ ನೀಡಿಲ್ಲ ಎಂದು ಆರೋಪಿಸಿದರು.
ಮಧ್ಯವರ್ತಿಗಳ ಹಾವಳಿ ತಡೆಯಿರಿ: ಬಳ್ಳಾರಿ ಜಿಲ್ಲೆ ಹಾಗೂ ಕರ್ನಾಟ-ಆಂಧ್ರ ರಾಜ್ಯಗಳ ಗಡಿಯಲ್ಲಿರುವ ಎಸ್‌ಎಲ್‌ಆರ್ ಮೆಟಾಲಿಕ್ಸ್, ಎಕ್ಸ್-ಇಂಡಿಯಾ ಸ್ಟೀಲ್ಸ್ ಲಿ., ಬಿಎಂಎಂ ಇಸ್ಪಾತ್, ಜಾನಕಿ ಕಾರ್ಪ್, ಎಸ್‌ಕೆಎಂ ಮತ್ತು ಆಂಧ್ರಪ್ರದೇಶದ ನೇಮಕಲ್ ಬಳಿಯ ರಾಮಾಂಜನೇಯ ಇಸ್ಪಾತ್ ಲಿ., ಕಾರ್ಖಾನೆ ಸೇರಿದಂತೆ ಹಲವಾರು ಮೆದು ಕಬ್ಬಿಣ ಘಟಕಗಳು ಒಂದು ವರ್ಷದಿಂದ ತಮಗೆ ಅದಿರು ಸಾಗಾಣಿಕೆ ಮಾಡಿರುವ ಲಾರಿಗಳಿಗೆ ಸಮರ್ಪಕ ಬಾಡಿಗೆ ನೀಡುತ್ತಿಲ್ಲ. ಈ ಕುರಿತು 2013ರ ಜೂನ್‌ನಲ್ಲಿ ಡಿಸಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಿಹಾರ ನೀಡುವುದಾಗಿ ಒಪ್ಪಿಕೊಂಡ ಕಾರ್ಖಾನೆಗಳ ಮಾಲೀಕರು ಮತ್ತೆ ತಮ್ಮ ಹಿಂದಿನ ಚಾಳಿ ಮುಂದುವರಿಸಿ, ಲಾರಿಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವವರಿಗೆ ತೊಂದರೆ ನೀಡುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಮಧ್ಯವರ್ತಿಗಳ ಹಾವಳಿ ತಡೆಯಬೇಕೆಂದು ಆಗ್ರಹಿಸಿದರು.
ನಿರ್ಲಕ್ಷ್ಯ: ಲಾರಿ ಮಾಲೀಕರ ಸಂಘದ ಒಂದು ಟನ್‌ಗೆ ಒಂದು ಕಿ.ಮೀ. ದರಕ್ಕೂ ಹಾಗೂ ಕಾರ್ಖಾನೆ ಮಾಲೀಕರು ತಮ್ಮ ಹಿಡಿತದಲ್ಲಿಟ್ಟುಕೊಂಡ ಕೆಲ ಟ್ರಾನ್ಸ್‌ಪೋರ್ಟ್ ನಡೆಸುವ ಮಧ್ಯವರ್ತಿಗಳ ದರಕ್ಕೂ ತುಂಬಾ ವ್ಯತ್ಯಾಸ ಕಂಡು ಬರುತ್ತಿದ್ದು, ನಿಗದಿತ ದರಕ್ಕಿಂತ ರು. 100ಗಳನ್ನು ಕಡಿಮೆ ನೀಡಲಾಗುತ್ತಿದೆ. ಡೀಸೆಲ್ ಬೆಲೆ ಏರಿಕೆಗೆ ಅನುಗುಣವಾಗಿ ಶೇ. 3ರಷ್ಟು ಸಾಗಾಣಿಣೆ ದರದಲ್ಲಿ ಏರಿಕೆ ಮಾಡಲು ಡಿಸಿ ಸೂಚಿಸಿದ್ದರೂ ಕ್ಯಾರೆ ಎನ್ನದ ಉದ್ಯಮಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ದೂರಿದರು.
2010ರಿಂದ ಇ-ಹರಾಜಿನಲ್ಲಿ ನಿಗದಿಯಾದ ಕಬ್ಬಿಣದ ಅದಿರಿಗೆ ಜಿಂದಾಲ್ ಸಂಸ್ಥೆಯವರು ಸೂಕ್ತ ಬಾಡಿಗೆ ನೀಡುತ್ತಿದ್ದರೆ, ಉಳಿದ ಉದ್ದಿಮೆದಾರರು ಬಾಡಿಗೆ ನೀಡುವಲ್ಲಿ ದೌರ್ಜನ್ಯ ಎಸಗುತ್ತಿದ್ದಾರೆ. ಜತೆಗೆ ಈಗಾಗಲೇ ಅದಿರು ಸಾಗಾಣಿಕೆ ಮಾಡಿರುವ ಲಾರಿಗಳ ಬಾಡಿಗೆಗೆ ಚೆಕ್ ನೀಡಿದ್ದು, ಅವು ಬ್ಯಾಂಕ್‌ಗಳಿಂದ ಮಾನ್ಯವಾಗುತ್ತಿಲ್ಲ. ನಮ್ಮ ಹಣವೂ ನಮ್ಮ ಕೈ ಸೇರುತ್ತಿಲ್ಲ. ಜತೆಗೆ ಸಾಗಾಣಿಕೆಗೂ ನಮ್ಮನ್ನು ಬಳಸಿಕೊಳ್ಳದಿರುವುದರಿಂದ ನಾವು ಸಂಕಷ್ಟದಲ್ಲಿದ್ದೇವೆಂದು ಅಲವತ್ತುಕೊಂಡರು.
ಬಳ್ಳಾರಿ ಗಣಿ ಲಾರಿ ಮಾಲೀಕರ ಸಂಘದ (10 ಚಕ್ರ ವಾಹನ) ಉಪಾಧ್ಯಕ್ಷ ಮಹಮ್ಮದ್ ಫಯಾಜ್, ಕಾರ್ಯದರ್ಶಿ ಆರ್.ಟಿ. ರಾಮನಾಯಕ್, 6 ಚಕ್ರಗಳ ಗಣಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ. ಮೋಹನ್, ಹೊಸಪೇಟೆ 6 ಚಕ್ರಗಳ ಗಣಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬದ್ರುದ್ದೀನ್, ಸಂಡೂರಿನ ಮಹ್ಮದ್ ಫಯಾಜ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

