ಅಂಬೇಡ್ಕರ್ ದೇಶದ ಆತ್ಮಗೌರವ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 23
ಸಂವಿಧಾನಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಭಾರತದ ಆತ್ಮಗೌರವದ ಪ್ರತೀಕ, ಸ್ವಾಭಿಮಾನದ ಸಾಕ್ಷಿ ಪ್ರಜ್ಞೆಯ ಶಕ್ತಿಯಾಗಿದ್ದಾರೆ ಎಂದು ಹೊಸಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ್ ಹೇಳಿದರು.
ನಗರದ ಹೊಸಪೇಟೆಯ ಆಕಾಶವಾಣಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್ ಅವರ 123ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಚರಿತ್ರೆಯನ್ನು ಇತಿಹಾಸಕಾರರು ಮನ ಬಂದಂತೆ ಚಿತ್ರಿಸಿದ್ದಾರೆ. ಅಂಬೇಡ್ಕರ್ ಬಹುದೊಡ್ಡ ರಾಷ್ಟ್ರೀಯವಾದಿಯಾಗಿದ್ದರು. ಸ್ವಾತಂತ್ರ್ಯದ ಜೊತೆಗೆ ದಲಿತರು ಮತ್ತು ಮಹಿಳೆಯರ ಸ್ಥಾನಮಾನ, ಹಕ್ಕುಗಳಿಗಾಗಿ ಅವರು ದನಿ ಎತ್ತಿದರು. ಸಂವಿಧಾನ ಕರಡು ರಚನೆಯ ಸಂದರ್ಭದಲ್ಲಿ ಅವರು ನಿರ್ವಹಿಸಿದ ಹೊಣೆಗಾರಿಕೆ, ಪಟ್ಟ ಶ್ರಮ ಮಹತ್ವದ್ದು. ಬೌದ್ಧ ಧರ್ಮವನ್ನು ಪ್ರಜ್ಞಾಪೂರ್ವಕವಾಗಿ ಅವರು ಸ್ವೀಕರಿಸಿದರು. ಇದರ ಹಿಂದೆ ಸ್ವಾಭಿಮಾನ ಮತ್ತು ದೇಶಪ್ರೇಮ ಎರಡರ ಸಮೀಕರಣ ಇದೆ ಎಂದರು.
ಹೊಸಪೇಟೆ ದೂರದರ್ಶನ ಮರು ಪ್ರಸಾರ ಕೇಂದ್ರದ ಉಪನಿರ್ದೇಶಕ ಮೋಹನ ಸುಧಾಕರ, ಸಹಾಯಕ ಎಂಜಿನಿಯರ್ ಪ್ರೇಮಾನಂದ ದೇರ್ಲ, ಕಾರ್ಯಕ್ರಮ ನಿರ್ವಾಹಕ ಗಿರೀಶ್ ವಿ. ಪಾಟೀಲ್, ಎಸ್ಸಿಎಸ್ಟಿ ನೌಕರರ ಸಂಘದ ಉಪಾಧ್ಯಕ್ಷ ವಿ. ರಾಮಾಂಜನೇಯಲು, ಪ್ರಸಾರ ನಿರ್ವಾಹಕ ಮಂಜುನಾಥ ಡೊಳ್ಳಿನ್ ಸೇರಿದಂತೆ ಇತರರು ಸಭೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಕೆ. ಅರುಣ ಪ್ರಭಾಕರ ಮಾತನಾಡಿ, ಅಂಬೇಡ್ಕರ್ ಕಂಡ ಕನಸುಗಳನ್ನ ಎಲ್ಲರೂ ಸಾಕಾರಗೊಳಿಸಬೇಕು. ಸಾಮಾಜಿಕ ಸಮಾನತೆ ತರಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು.
ಆಕಾಶವಾಣಿಯ ಟಿ. ರತ್ನವೇಲು, ಪಿ.ಎಚ್. ಹುಯಿಲಗೋಳ, ಉಮಾ ವೆಂಕಟೇಶ್ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಗಾಳೆಮ್ಮ ಬಸವರಾಜ ಹಾಗೂ ಸೆಲ್ವ ಪ್ರಕಾಶ್ ಅವರನ್ನು ಇದೇ ಸಂದರ್ಭದಲ್ಲಿ ಪುರಸ್ಕರಿಸಿ ಗೌರವಿಸಲಾಯಿತು
ಚೇತನಾ ಎಂ. ಐಲಿ ಪ್ರಾರ್ಥಿಸಿದರು. ಕಾರ್ಯಕ್ರಮ ನಿರ್ವಾಹಕ ಬಿ. ಸಿದ್ದಣ್ಣ ಸ್ವಾಗತಿಸಿದರು, ಎಚ್.ಪಿ. ಕಲ್ಲಂಭಟ್ ನಿರೂಪಿಸಿದರು. ಪ್ರಸಾರ ನಿರ್ವಾಹಕ ಮಂಜುನಾಥ ಡೊಳ್ಳಿನ್ ವಂದಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಜೀವನವೇ ಸ್ವಾಭಿಮಾನದ ಪ್ರಯಾಣ. ಬುದ್ಧ, ಶರಣರು, ದಾಸರು ಕ್ರಮಿಸಿದ ಹಾದಿ, ಕಂಡ ಕನಸುಗಳಿಗೆ ಜೀವ ತುಂಬಿದವರು ಡಾ. ಅಂಬೇಡ್ಕರ್. ಅವರ ವ್ಯಕ್ತಿತ್ವ ತತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ, ಪತ್ರಿಕೋದ್ಯಮ, ಕಾನೂನು ಮುಂತಾದ ಆಯಾಮಗಳಲ್ಲಿ ಹರಡಿಕೊಂಡಿದೆ. ಅವರನ್ನು ಪೂರ್ವಗ್ರಹಗಳು ಇಲ್ಲದೇ ನೋಡಬೇಕು.
- ಡಾ. ಕೆ. ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

