ಉರುಳದಿರಲಿ ಒರಳು ತಯಾರಕರ ಬಾಳು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 23
ಆಧುನಿಕತೆಯ ಭರಾಟೆಯಲ್ಲಿ ಮನುಷ್ಯ ಸಂಪೂರ್ಣ ಯಾಂತ್ರಿಕೃತ ಬದುಕಿಗೆ ಮಾರುಹೋಗುತ್ತಿರುವುದರ ಫಲವಾಗಿ ಕುಲಕಸುಬುಗಳು ವಿನಾಶದ ಅಂಚಿಗೆ ತಲುಪಿವೆ. ಹೌದು, ಜಾಗತಿಕರಣದ ಫಲವಾಗಿ ಇಂದು ಕುಲ ಕಸುಬುಗಳು ಅವಸಾನದ ಅಂಚಿನಲ್ಲಿದ್ದು, ತಮ್ಮ ಕುಲ ಕಸುಬನ್ನೇ ನಂಬಿ ಜೀವನ ಸಾಗಿಸುತ್ತಿರುವ ಒರಳು ಮಾಡುವವರ ಬದುಕು ಇಂದು ಅರಳದೇ ಒರಳಿನಂತೆ ಒರಳುತ್ತಾ ಡೋಲಾಯಮಾನ ಸ್ಥಿತಿಯಲ್ಲಿದೆ.
ಕಲ್ಲಿನ ಕೆಲಸ ಇಂದು ನಿನ್ನೆಯದಲ್ಲ, ಅನಾದಿ ಕಾಲದಿಂದಲೂ ಹಲವು ಕುಟುಂಬಗಳು ಕುಲ ಕಸುಬುಗಳನ್ನೇ ನಂಬಿ ಬದುಕುತ್ತಿದ್ದಾರೆ. ವಿಕಾಶದ ಅಂಚಿನಿಂದ, ಇಂದಿನ ನಾಗರಿಕ ಸಮಾಜ ಬೆಳೆದು ಬಂದ ವಿವಿಧ ಮಜಲುಗಳಲ್ಲಿ ಕಲ್ಲು ಕುಟಿಕರ ಪಾತ್ರ ಪ್ರಮುಖವಾಗಿದೆ. ಆದರೆ, ಇದನ್ನೇ ನಂಬಿ ಬದುಕು ದೂಡುತ್ತಿರುವ ಸಾವಿರಾರು ಕುಟುಂಬಗಳು ಕೈ ಕೆಲಸವಿಲ್ಲದೆ, ಮಾಡಲು ಬೇರೆ ಕೆಲಸವೂ ಬಾರದೇ ಅತ್ತ ಹಾವು ಇತ್ತ ಹುಲಿ ಎಂಬಂತಾಗಿದೆ.
ನೆರೆಯ ಆಂಧ್ರಪ್ರದೇಶದ ರಾಯದುರ್ಗ ಹಾಗೂ ಕರ್ನಾಟಕದ ಸಿಂಧನೂರು ಇತರೆಡೆಗಳಿಂದ ಸುಮಾರು ಒಂದುವರೆ, ಎರಡು ಅಡಿ ಚೌಕಾಕಾರದಲ್ಲಿರುವ ಕಲ್ಲಿನ ದಿಮ್ಮಿಗಳನ್ನು ಖರೀದಿಸಿ ಇಲ್ಲಿಗೆ ತರಲಾಗುತ್ತದೆ. ನಂತರ ಅವುಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಕಲ್ಲುಕುಟಿಗರು ತೊಡಗಿಕೊಳ್ಳುತ್ತಾರೆ. ಮೊನಚಾದ ಕಬ್ಬಿಣದ ಆಯುಧಗಳನ್ನು ಒರಳು ತಯಾರಿಕೆಗೆ ಬಳಸಲಾಗುತ್ತದೆ. ಕಲ್ಲಿಗೆ ಉಳಿಪೆಟ್ಟು ನೀಡುವ ವೇಳೆ ಸ್ವಲ್ಪ ಯಾಮಾರಿದರೂ ಒರಳಿನ ಆಕಾರ ಕೆಟ್ಟು ಹೋಗುತ್ತದೆ. ಇದರಿಂದ ದಿನವಿಡೀ ಪಟ್ಟ ಶ್ರಮ ವ್ಯರ್ಥ.
ದಿನಪೂರ್ತಿ ಶ್ರಮಿಕ್ಕೆ ಎರಡು ಒರಳು: ನಗರದ ರಂಗಮಂದಿರದ ಬಳಿ 20 ವರ್ಷಗಳಿಂದಲೂ ಕಲ್ಲುಕುಟಿಗ ನಾಗಪ್ಪ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದರು ಕುಲ ಕಸುಬನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇವರ ಕುಟುಂಬವೆಲ್ಲ ಇದೇ ಕಸುಬನ್ನು ತಮ್ಮ ಜೀವನಾಧಾರವಾಗಿಸಿಕೊಂಡಿದ್ದು, ಎಲ್ಲರೂ ನಿತ್ಯ ಬೆಳಗಿನ ಜಾವ ಕೆಲಸ ಆರಂಭಿಸಿ, ಸಂಜೆವರೆಗೆ ಬಿರು ಬಿಸಿಲು ಲೆಕ್ಕಿಸದೇ ಬೆವರು ಸುರಿಸುವ ಜತೆಗೆ ಕೈಗಳನ್ನು ಗಾಯ ಮಾಡಿಕೊಂಡರೂ ದಿನಕ್ಕೆ ಎರಡು ಒರಳು ಕಲ್ಲುಗಳನ್ನು ಸಿದ್ಧಪಡಿಸುವುದು ಕಷ್ಟಕರ.
ಕಣ್ಮರೆಯಾಗುತ್ತಿರುವ ಒರಳು: ಜಾಗತೀಕರಣ ಬೆಳೆದಂತೆ ಒರಳು ಕಲ್ಲುಗಳು ಕಣ್ಮರೆಯಾಗುತ್ತಿವೆ. ಆಕರ್ಷಕ ಮಿಕ್ಸಿ, ಸೂಪರ್ ಗ್ರ್ಯಾಂಡರ್ಗಳು ಮಾರುಕಟ್ಟೆಯಲ್ಲಿ ಸ್ಪರ್ಧೆಗಿಳಿದಿವೆ. ಇವುಗಳಿಂದ ಅಡುಗೆ ತಯಾರಿಕೆಯೂ ಅಲ್ಪ ಸಮಯದಲ್ಲೇ ಆಗುವುದರಿಂದ ನಾಗರಿಕರು ಇವುಗಳತ್ತ ಮುಖ ಮಾಡುತ್ತಿದ್ದಾರೆ.
ಒರಳು ಕಲ್ಲಿನ ಅಡುಗೆ ರುಚಿಕರ: ಮಿಕ್ಸಿ, ಗ್ರ್ಯಾಂಡರ್ಗಳಲ್ಲಿ ತಯಾರಿಸಿದ ಅಡುಗೆಗಳಿಗಿಂತ ಒರಳು ಕಲ್ಲಿನಲ್ಲಿ ರುಬ್ಬಿದ ಹಿಟ್ಟು, ಚಟ್ನಿ, ಖಾರ ಮೊದಲಾದ ಅಡುಗೆ ಹೆಚ್ಚು ರುಚಿಕರ ಹಾಗೂ ಅವು ಕೆಡದೇ ದಿನವಿಡೀ ಬಳಸಲು ಯೋಗ್ಯವಾಗಿರುತ್ತವೆ. ಮನೆಯಲ್ಲೊಂದು ಒರಳು ಕಲ್ಲಿದ್ದರೆ ಗೌರಮ್ಮ ಇದ್ದಂತೆ ಎಂಬ ದೈವತ್ವದ ನಂಬಿಕೆಯೂ ಕೆಲವರಲ್ಲಿದೆ.
ಬಳಕೆಯಿಂದ ದೂರ ಬೀಸೋಕಲ್ಲು: ಹಿಂದಿನ ದಿನಗಳಲ್ಲಿ ಹಳ್ಳಿ ಮನೆಗಳಲ್ಲಿ ಬಳಕೆಯಲ್ಲಿದ್ದ ಬೀಸೋಕಲ್ಲುಗಳು ದೈಹಿಕ ಶ್ರಮದ ಸಂಕೇತವಾಗಿದ್ದವು. ಆದರೆ, ಪ್ರಸಕ್ತ ಆಧುನಿಕತೆ ಅಬ್ಬರಕ್ಕೆ ಸಿಲುಕಿ ಅವು ದೂರವಾಗುತ್ತಿವೆ. ಇದೀಗ ಏನಿದ್ದರೂ ನವಜನಾಂಗಕ್ಕೆ ತೋರಿಸುವ ಪುರಾತನ ವಸ್ತುಗಳಂತೆ ಅಲ್ಲಲ್ಲಿ ಉಳಿದುಕೊಂಡಿವೆ. ಒರಳು ಕಲ್ಲಿನ ಕಾಯಕವನ್ನೆ ನಂಬಿ ಇಂದಿಗೂ ಬದುಕು ದೂಡುತ್ತಿರುವ ಜನರ ಬದುಕು ಇನ್ನಾದರೂ ಹಸನಾಗಲು ಸರ್ಕಾರ ಇವರತ್ತ ಚಿತ್ತ ಹಾಯಿಸಬೇಕಾಗಿದೆ.
ಯಂತ್ರದ ಒರಳು ಪೈಪೋಟಿ...
ಗುಂಡು ಸಹಿತ ಒರಳಿಗೆ ರು. 950, ಸ್ವಲ್ಪ ಚಿಕ್ಕ ಗಾತ್ರದ ಒರಳು ಗುಂಡಿಗೆ ರು. 350ಗಳಂತೆ ಮಾರಾಟ ಮಾಡಲಾಗುತ್ತದೆ. ಕಲ್ಲು ಕುಟ್ಟಲು ಹೆಚ್ಚು ಸಮಯ ತೆಗೆದುಕೊಳ್ಳಲಿದ್ದು, ಮಾರಾಟವಾಗಬೇಕಾದರೆ ಹಲವು ವಾರಗಳೇ ಕಳೆಯುತ್ತವೆ. ಇತ್ತೀಚೆಗೆ ಯಂತ್ರಗಳಿಂದ ಮಾಡಿರುವ ಒರಳು ಕಲ್ಲುಗಳ ಜತೆ ತೀವ್ರ ಪೈಪೋಟಿ ಮಾಡಬೇಕಾಗುತ್ತದೆ.
- ನಾಗಪ್ಪ, ಕಲ್ಲುಕುಟಿಗ
ಮಿಕ್ಸಿ, ಗ್ರೈಂಡರ್ ಎಂಥದೇ ಹೊಸ ವಸ್ತುಗಳು ಬಂದ್ರು, ಒರಳು ಕಲ್ಲನ್ಯಾಗ ರುಬ್ಬಿದ ಹಿಟ್ಟು, ಚಟ್ನಿ ಬಹಳ ರುಚಿ ಇರ್ತೈತ್ರಿ. ಇದಕ್ಕ ಕರೆಂಟಿನ ಅಗತ್ಯನೇ ಇಲ್ರಿ, ಈಗಿನ ಹೆಣ್ಮಕ್ಳು ಒರಳು ಕಲ್ಲು ಬಳಸಿದ್ರ ದೇಹಕ್ಕೂ ಸ್ವಲ್ಪ ಕೆಲ್ಸ ನೀಡದಂಗ ಆಗ್ತೈತ್ರಿ.
- ಲತಮ್ಮ ಶ್ರೀಧರಗಡ್ಡೆ, ಗ್ರಾಹಕಿ
-ವೈ.ಎಂ. ಸಿದ್ಧಲಿಂಗಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

