ಭಾನುವಾರದ ಸಂತೆ ಸೌಲಭ್ಯ ವಂಚಿತ
- ಆರ್. ಶಿವರಾಮ ಸಂಡೂರು
ಕನ್ನಡಪ್ರಭ ವಾರ್ತೆ, ಸಂಡೂರು, ಏ. 28
ಸಂಡೂರು ಪಟ್ಟಣದಲ್ಲಿ ಭಾನುವಾರಕ್ಕೊಮ್ಮೆ ಜರುಗುವ ವಾರದ ಸಂತೆಗೆ ವಿಜಯನಗರ ಕಾಲದ ಇತಿಹಾಸವಿದೆ(ಕಬ್ಬಿಣದ ಯುದ್ದ ಸಾಮಗ್ರಿ, ರಾಗಿ, ಮಾವಿನ ಹಣ್ಣು, ಇತರೆ) ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾಣದೆ, ಸಂತೆ ಸುತ್ತಮುತ್ತಲ ಪ್ರದೇಶ ಸ್ವಚ್ಛತೆ ಮತ್ತು ಅಗತ್ಯ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.
ಸಾವಿರಾರು ಜನರು ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಸಂತೆಗೆ ಆಗಮಿಸುತ್ತಾರೆ. ಸಂತೆಯನ್ನೇ ನಂಬಿಕೊಂಡು ನೂರಾರು ಕುಂಟುಂಬಗಳು ಅನ್ನ ಕಂಡುಕೊಂಡಿವೆ. ಆದರೆ, ಅಗತ್ಯ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಅಭಿವೃದ್ಧಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದೆ.
ತಾಜಾ ತರಕಾರಿಗೆ ಬೇಡಿಕೆ: ಬೆಳ್ಳಂಬೆಳಗ್ಗೆ ಎದ್ದು ಹೊಲಗಳಲ್ಲಿ ತರಕಾರಿ, ಸೊಪ್ಪು, ಸಾಂಬಾರ ಪದಾರ್ಥಗಳನ್ನು ಬಟ್ಟೆ, ಚೀಲಗಳಲ್ಲಿ ತುಂಬಿಕೊಂಡು ಭುಜಂಗನಗರ, ಬಾವಳ್ಳಿ, ದೌಲತ್ಪುರ, ಚೋರನೂರು, ತೋರಣಗಲ್ ಗ್ರಾಮದ ಮಹಿಳೆಯರು, ಮಕ್ಕಳು ತಂದ ಸರಕುಗಳನ್ನು ಕೊಳ್ಳಲು ಜನರು, ವ್ಯಾಪಾರಸ್ಥರು ಮುಗಿಬೀಳುತ್ತಾರೆ.
ಶಾಲೆಗೆ ಹೋಗುವ ಕೆಲ ಮಕ್ಕಳು ಶಾಲೆ ಅವಧಿಯವರೆಗೂ ಇಲ್ಲಿ ಕೆಲಸ ಮಾಡಿ ತಂದೆ, ತಾಯಿಗಳಿಗೆ ನೆರವಾಗಿತ್ತಾರೆ. ತಾಜಾ ತರಕಾರಿ ಸುಲಭ ಬೆಲೆಗೆ ಸಿಗುವ ದೃಷ್ಟಿಯಿಂದ ಹಿರಿಯ ನಾಗರಿಕರು ಬೆಳಗಿನ ವಾಕಿಂಗ್ ಮುಗಿಸಿಕೊಂಡು ತರಕಾರಿಗಳ ಖರೀದಿಗೆ ಅಣಿಯಾಗುತ್ತಾರೆ.
ವಿವಿಧೆಡೆಯ ವ್ಯಾಪಾರಸ್ಥರು: ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ದೂರದ ದಾವಣಗೆರೆ ಕಡೆಗಳಿಂದ ಅಧಿಕ ಪ್ರಮಾಣದಲ್ಲಿ ತರಕಾರಿ ಹಣ್ಣು, ಹಂಪಲುಗಳು, ದಿನಸಿಗಳನ್ನು ತಂದು ಸಗಟು ರೂಪದಲ್ಲಿ ಮಾರಾಟ ಮಾಡುತ್ತಾರೆ.
ಸುಗಂಧ ಪರಿಮಳ ಬೀರುವ ದವನದ ಕಡ್ಡಿಯಿಂದ ಹಿಡಿದು ದಿನಸಾವರಿ ಸೊಪ್ಪು ತರಕಾರಿಗಳು, ವೀಳ್ಯದೆಲೆ, ಬಗೆ ಬಗೆಯ ಹೂಗಳು, ಮಸಾಲೆ ಪದಾರ್ಥಗಳನ್ನು ಒಳಗೊಂಡಂತೆ ಅವುಗಳನ್ನು ಮಾರಾಟ ಮಾಡುವ ಕೊಂಡುಕೊಳ್ಳುವ ಜನರು ಅಧಿಕ ಸಂಖ್ಯೆಯಲ್ಲಿ ಸಿಗುತ್ತಾರೆ.
ವಸತಿ, ಸಂಸ್ಕರಣ ಘಟಕದ ಸಮಸ್ಯೆ: ಭವ್ಯ ಇತಿಹಾಸವಿರುವ ಈ ಮಾರುಕಟ್ಟೆ ಪ್ರದೇಶದಲ್ಲಿ ಬಂದ ವ್ಯಾಪಾರಸ್ಥರಿಗೆ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ. ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ತಂದ ಸರಕನ್ನು ಶೇಖರಿಸಲು ಸಂಸ್ಕರಣ ಘಟಕದ ಅವಶ್ಯಕತೆ ಇದೆ. ಪರಸ್ಥಳದ ವ್ಯಾಪಾರಸ್ಥರಿಗೆ ವಸತಿ ಕೊರತೆ ಅತಿಯಾಗಿದೆ. ಇಲ್ಲಿ ನಿರ್ಮಿಸಿರುವ ಕೆಲ ಶೆಡ್ಗಳನ್ನು ಬಿಟ್ಟರೆ ಹೆಚ್ಚಿನ ವ್ಯವಸ್ಥೆ ಇಲ್ಲವಾಗಿದೆ.
ಎಪಿಎಂಸಿ ಬಳಿ ಜರುಗುವ ವಾರದ ಸಂತೆ ಅಭಿವೃದ್ಧಿಗೆ ನೂತನವಾಗಿ ಆಡಳಿತ ವಹಿಸಿಕೊಂಡಿರುವ ಪುರಸಭೆ ಆಡಳಿತ ಮನಸ್ಸು ಮಾಡುವುದೆಂಬ ನಿರೀಕ್ಷೆ ಸಾರ್ವಜನಿಕರದ್ದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

