ಅವಧಿಗೆ ಮುನ್ನ ಆಂಧ್ರಕ್ಕೆ ನೀರು: ರೈತರಲ್ಲಿ ಆತಂಕ
ಕನ್ನಡಪ್ರಭ ವಾರ್ತೆ, ಕಾರಟಗಿ, ಫೆ. 2
ಆಂಧ್ರ ಪ್ರದೇಶದ ಕುತಂತ್ರಕ್ಕೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಬತ್ತ ಬೆಳೆಗಾರರಲ್ಲಿ ಆತಂಕ ಉಂಟಾಗಿದೆ.
ಬೇಸಿಗೆ ಬೆಳೆ ಬಿತ್ತನೆ ಮುನ್ನವೇ ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಗೆ ಕುಡಿಯುವ ನೀರಿನ ನೆಪ ಹೇಳಿ ನದಿ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿಕೊಂಡಿದೆ ಎಂಬ ಸುದ್ದಿ ರೈತರಲ್ಲಿ ಕಳವಳ ಮೂಡಿಸಿದೆ.
ಹದಿನೈದು ದಿನಗಳಿಂದ ತುಂಗಭದ್ರಾ ಅಣೆಕಟ್ಟೆ ಮೂಲಕ ನೀರು ಕದಿಯಲು ಆಂಧ್ರ ಕಣ್ಣಾಮುಚ್ಚಾಲೆ ಆಡುತ್ತಿದೆ. ತುಂಗಭದ್ರಾ ಮಂಡಳಿಯ ಪ್ರಮುಖ ಹುದ್ದೆಗಳಲ್ಲಿ ಆಂಧ್ರದವರೇ ತುಂಬಿದ್ದು, ರಾಜ್ಯದ ರೈತರ ಹಿತವನ್ನು ಅವರು ಕಾಯುತ್ತಿಲ್ಲ.
ಶನಿವಾರ ಆರಂಭಿಸಿ ಭಾನುವಾರ ಸಂಜೆಯ ವರೆಗೂ ನದಿ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದ್ದು, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರಿನ ರೈತರಲ್ಲಿ ಅಚ್ಚರಿ ಮೂಡಿಸಿದೆ. ಬೇಸಿಗೆ ಬೆಳೆಗಾಗಿ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯವನ್ನೇ ಉಲ್ಲಂಘಿಸಲಾಗಿದೆ ಎಂದು ರೈತ ಸಮೂಹ ಆರೋಪಿಸಿದೆ.
ಕಳೆದ ನ. 23ರಂದು ಮುನಿರಾಬಾದ್ನಲ್ಲಿ ನಡೆದ 98ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಬಿಡುಗಡೆ ಕುರಿತು ಕೆಲವೊಂದು ನಿರ್ಣಯ ಕೈಗೊಳ್ಳಲಾಗಿತ್ತು. ಜನವರಿಯಲ್ಲಿ ಎಡದಂಡೆ ನಾಲೆಗೆ ನಿತ್ಯ 3000 ಕ್ಯುಸೆಕ್ ನೀರು ಹರಿಸಬೇಕಿತ್ತು. ಕಾಲುವೆಗಳಿಗೆ ಸಾಕಷ್ಟು ನೀರು ಬಾರದಿದ್ದರೂ ನದಿಯಲ್ಲಿ ಯಥೇಚ್ಛವಾಗಿ ಹರಿದಿದೆ. ಆಂಧ್ರ ಪ್ರದೇಶ ನದಿ ಮೂಲಕ 11 ಟಿಎಂಸಿ ನೀರು ಹರಿಸಿಕೊಳ್ಳಬೇಕಾಗಿದೆ. ಈಗಾಗಲೇ 8 ಟಿಎಂಸಿ ನೀರು ಹರಿದಿದೆ. ಉಳಿದ 3 ಟಿಎಂಸಿ ನೀರನ್ನು ಇದೇ ವಾರದಲ್ಲಿ ಹರಿಸಿಕೊಳ್ಳುವ ಧಾವಂತದಲ್ಲಿರುವ ಆಂಧ್ರ ಕರ್ನೂಲ್ಗೆ ನೀರು ಪೂರೈಸುವ ನೆಪ ಹುಡುಕಿದೆ.
ಅಸಲಿಗೆ, ಮಾರ್ಚ್ ಅಂತ್ಯಕ್ಕೆ ಆಂಧ್ರ ಪ್ರದೇಶ ತನ್ನ ಪಾಲಿನ ನೀರನ್ನು ಪಡೆಯುತ್ತದೆ. ಆಗ ನೀರು ಹರಿಸಿದ್ದರೆ ಸಾಕಿತ್ತು ಎನ್ನುತ್ತಾರೆ, ನೀರಾವರಿ ತಜ್ಞ ಬೆಳಗುರ್ಕಿ ಹನುಮನಗೌಡ ಹಾಗೂ ರೈತ ಮುಖಂಡ ಮಹಿಪಾಲ್ ರೆಡ್ಡಿ. ರೈತರು ಭಾನುವಾರ ಕಾರಟಗಿಯ ಕೆರೆಬಸವೇಶ್ವರ ದೇವಸ್ಥಾನದಲ್ಲಿ ಸಚಿವ ಶಿವರಾಜ ತಂಗಡಗಿ ಅವರನ್ನು ಭೇಟಿಯಾಗಿ, ನೀರು ಹರಿಸುವುದನ್ನು ಕೂಡಲೇ ತಡೆಯುವಂತೆ ಒತ್ತಾಯಿಸಿದ್ದಾರೆ. ಮತ್ತೊಂದು ಕಡೆ ರೈತರ ಗುಂಪು ನೀರು ತಡೆಯಲು ತಾಕೀತು ಮಾಡಿ, ಅಣೆಕಟ್ಟಿಗೆ ಮುತ್ತಿಗೆ ಹಾಕಿದೆ. ಸಿಂಧನೂರು, ಸಿರುಗುಪ್ಪಾ ಭಾಗದ ರೈತರು ನೀರಾವರಿ ಮಂಡಳಿ ಕಚೇರಿಗೆ ತೆರಳಿದೆ ಎಂದು ಮುಖಂಡರು ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದಿಂದ ಆಂಧ್ರಕ್ಕೆ ನೀರು
ಮುನಿರಾಬಾದ್: ತುಂಗಭದ್ರಾ ಜಲಾಶಯದಿಂದ ನಿತ್ಯ 1,285 ಕ್ಯುಸೆಕ್ ನೀರನ್ನು ಆಂಧ್ರಪ್ರದೇಶಕ್ಕೆ ಹರಿಸಲಾಗುತ್ತಿದೆ. ಈ ಕುರಿತು ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತ ಶಿವಕುಮಾರ ಮಾಹಿತಿ ನೀಡಿದ್ದು, ನದಿ ಮೂಲಕ ಆಂಧ್ರ ಹಾಗೂ ಕರ್ನಾಟಕಕ್ಕೆ ಇಂತಿಷ್ಟು ನೀರಿನ ಕೋಟಾ ನಿಗದಿಪಡಿಸಲಾಗುತ್ತದೆ. ಆಂಧ್ರದ ಪಾಲಿನ ನೀರನ್ನು ಬಿಡಲಾಗಿದೆ ಎಂದರು. ಆಂಧ್ರ ಕೋಟಾ 2 ಟಿಎಂಸಿ: ಪ್ರಸಕ್ತ ಸಾಲಿನಲ್ಲಿ ನದಿ ನೀರಿನ ಆಂಧ್ರ ಪ್ರದೇಶ ಪಾಲಿನ ಕೋಟಾ 2 ಟಿಎಂಸಿ. ಶುಕ್ರವಾರದಿಂದ ಪ್ರತಿನಿತ್ಯ 1,285 ಕ್ಯುಸೆಕ್ ನೀರನ್ನು ಆಂಧ್ರ ಪ್ರದೇಶ ಪಡೆಯುತ್ತಿದೆ. ಆಂಧ್ರ ಪ್ರದೇಶ ಫೆಬ್ರವರಿ, ಮಾರ್ಚ್ ತಿಂಗಳ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿದೆ ಎಂಬ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.
ಇಂದು ವಿಶೇಷ ಸಭೆ
ಆಂಧ್ರಪ್ರದೇಶಕ್ಕೆ ನದಿ ಮೂಲಕ ಅವಧಿಗೆ ಮುನ್ನವೇ ನೀರು ಹರಿಸುತ್ತಿರುವುದರ ಸತ್ಯಾಸತ್ಯತೆ ಅರಿಯಲು ಹಾಗೂ ಅಕ್ರಮ ತಡೆಗಟ್ಟಲು ಸೋಮವಾರ ಮುನಿರಾಬಾದ್ನ ಕಾಡಾ ಕಚೇರಿಯಲ್ಲಿ ವಿಶೇಷ ಸಭೆ ಕರೆಯಲಾಗಿದೆ. ಅಕ್ರಮವಾಗಿ ನೀರು ಹರಿಸಲಾಗಿದೆಯೋ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿರುವುದಾಗಿ ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ರೈತರಿಗೆ ತಿಳಿಸಿದ್ದಾರೆ. ಆಯಾ ತಿಂಗಳ ಕೋಟಾದಲ್ಲಿ ಆಂಧ್ರದ ಪಾಲಿನ ನೀರನ್ನು ಪಡೆಯುವಂತೆ ನಿರ್ಣಯಿಸಲಾಗಿದೆ. ನದಿ ಮೂಲಕ ಅಕ್ರಮವಾಗಿ ನೀರು ಹರಿಯುತ್ತಿದೆ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಕೇಳಲಾಗಿದೆ. ಸೋಮವಾರದ ವಿಶೇಷ ಸಭೆಯಲ್ಲಿ ರೈತ ಮುಖಂಡರೂ ಭಾಗವಹಿಸಲಿದ್ದಾರೆ. ಆತಂಕ ಬೇಡ. ನಮ್ಮ ಪಾಲಿನ ನೀರು ನಮಗೆ ಸಿಗಲಿದೆ ಎಂದರು.
ಮಾರ್ಚ್ವರೆಗೆ ಎಲ್ಎಲ್ ಕಾಲುವೆಗೆ ನೀರು ಬಿಡಲಿ
ಬಳ್ಳಾರಿ: ಮಾರ್ಚ್ವರೆಗೆ ಎಲ್ಎಲ್ ಕಾಲುವೆಗೆ ನೀರು ಬಿಡದಿದ್ದರೆ ರೈತ ಸಂಘದಿಂದ ಬಳ್ಳಾರಿಯಲ್ಲಿ ಲೋಕಸಭೆ ಚುನಾವಣೆ ನಡೆಯಲು ಬಿಡುವುದಿಲ್ಲ ಎಂದು ರೈತ ಸಂಘದ ಕಾರ್ಯಾಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶವು ಕಾಲುವೆ ಮೂಲಕ ತೆಗೆದುಕೊಳ್ಳುವ ನೀರನ್ನು ಹೊಳೆ ಮೂಲಕ ಪಡೆಯುತ್ತಿದೆ. ಹೊಳೆಯ ಮೂಲಕ ಮೇ ತಿಂಗಳವರೆಗೆ ಕೇವಲ 2 ಟಿಎಂಸಿ ನೀರು ಪಡೆಯಬೇಕು. ಅದರ ಬದಲು ಶನಿವಾರ ರಾತ್ರಿಯಿಂದಲೆ 1200 ಕ್ಯುಸೆಕ್ ನೀರನ್ನು ಕಾಲುವೆ ಬದಲಾಗಿ ಹೊಳೆ ಮೂಲಕ ಆಂಧ್ರದವರು ಪಡೆಯುತ್ತಿದ್ದಾರೆ. ಇದರಿಂದಾಗಿ ಮಾರ್ಚ್ವರೆಗೆ ಕರ್ನಾಟಕ ರೈತರಿಗೆ ತೀವ್ರ ಸಮಸ್ಯೆ ಆಗುತ್ತದೆ. ಒಂದು ವೇಳೆ ಮಾರ್ಚ್ವರೆಗೆ ಕರ್ನಾಟಕ ರೈತರಿಗೆ ಎಲ್ಎಲ್ ಕಾಲುವೆಯಿಂದ ನೀರು ಬಿಡದಿದ್ದರೆ, ಬಳ್ಳಾರಿಯಲ್ಲಿ ಲೋಕಸಭೆ ಚುನಾವಣೆಯನ್ನು ನಡೆಸುವುದಕ್ಕೆ ರೈತ ಸಂಘ ಬಿಡುವುದಿಲ್ಲ ಹಾಗೂ ಮಾರ್ಚ್ನಿಂದ ಕಾಲುವೆಯನ್ನು ಹೊಡೆದು ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಮನ್ವಯ ಸಭೆ ಕರೆಯಲಿ: ಮಾರ್ಚ್ವರೆಗೆ ಎಲ್ಎಲ್ ಕಾಲುವೆಗೆ ನೀರು ಬಾರದಿದ್ದರೆ ನಮ್ಮ ಜಿಲ್ಲೆಯಲ್ಲಿ ರೈತರು ಬೆಳೆದ 1.26 ಲಕ್ಷ ಎಕರೆ ಪ್ರದೇಶದ ಬತ್ತ ಹಾನಿಯಾಗಿ ರು. 375 ಕೋಟಿ ರೈತರಿಗೆ ಹಾನಿಯಾಗಲಿದೆ. ಕೂಡಲೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಎರಡು ರಾಜ್ಯಗಳ ಅಧಿಕಾರಿಗಳ ಸಮನ್ವಯ ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಮುಂದಾಗುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕಾಲುವೆ ಮೂಲಕ ಪಡೆಯುವ ನೀರನ್ನು ಹೊಳೆ ಮೂಲಕ ಪಡೆಯುತ್ತ ನಿಯಮಗಳನ್ನು ಆಂಧ್ರಪ್ರದೇಶದವರು ಉಲ್ಲಂಘನೆ ಮಾಡುತ್ತಾರೆ. ಈಗಾಗಲೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಲಾಗಿದೆ. ಆದರೂ ಎಚ್ಚೆತ್ತುಕೊಂಡಿಲ್ಲ. ಹೊಳೆ ಮೂಲಕ 2 ಟಿಎಂಸಿ ನೀರನ್ನು ಆಂಧ್ರಪ್ರದೇಶದವರು ಮೇ ವರೆಗೆ ಪಡೆಯಬೇಕು, ಶನಿವಾರದಿಂದಲೆ 1200 ಕ್ಯುಸೆಕ್ ನೀರನ್ನು ಹೊಳೆ ಮೂಲಕ ಬಿಡುವುದರಿಂದ 10 ದಿನಗಳಲ್ಲಿ 2 ಟಿಎಂಸಿ ನೀರು ಆಂಧ್ರಕ್ಕೆ ಹೋಗುತ್ತದೆ. ಇದರಿಂದಾಗಿ ರಾಜ್ಯದ ರೈತರಿಗೆ ಅನ್ಯಾಯವಾಗುತ್ತದೆ ಎಂದರು.
ಎರಡು ರಾಜ್ಯದ ರೈತರಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ಸಮನ್ವಯ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಶಾನವಾಸಪುರದ ಚನ್ನನಗೌಡ, ರೈತರಾದ ಮಂಜುನಾಥಗೌಡ, ನಾಗರುದ್ರಗೌಡ, ಗುತ್ತಿಗನೂರು ಕೊಟ್ರೇಶ್ಗೌಡ, ಶರಣಪ್ಪ, ತಿಮ್ಮನಗೌಡ, ದರೂರು ಶಾಂತನಗೌಡ, ಕುಂದಾಪುರ ನಾಗರಾಜ್ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

