ಎತ್ತ ಸಾಗಿದೆ ಹೊಸ ಮರಳು ನೀತಿ?
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 4
ಸರ್ಕಾರ ಜಾರಿಗೊಳಿಸಿರುವ ಹೊಸ ಮರಳು ನೀತಿ ನೆಪವಾಗಿಟ್ಟುಕೊಂಡು ಮರಳು ಅಕ್ರಮ ದಂಧೆಕೋರರು ತುಂಗಭದ್ರಾ ನದಿ ತೀರದಲ್ಲಿ ಮತ್ತೆ ಅಟ್ಟಹಾಸ ಮರೆಯುತ್ತಿದ್ದು, ನೀತಿ ನಿಯಮಗಳನ್ನು ಗಾಳಿಗೆ ತೂರಿ ಮರಳು ಮಾಫಿಯಾ ತಲೆ ಎತ್ತಿ ನಿಂತಿದೆ.
ಹೌದು, ತಾಲೂಕಿನ ತುಂಗಭದ್ರಾ ನದಿ ತೀರದ ನವಲಿ ಗ್ರಾಮದ ಹತ್ತಿರ ಗುಣಮಟ್ಟದ ಮರಳು ಸಂಗ್ರಹವಾಗಿದ್ದು, ಈಗ್ಗೆ ಕೆಲ ದಿನಗಳ ಹಿಂದೆ ಹೊನ್ನೂರು-ನವಲಿ ಸೇರಿದಂತೆ 6 ಮರಳಿನ ಬ್ಲಾಕ್ಗಳ ಟೆಂಡರ್ ಮಾಡಲಾಗಿತ್ತು. ಹೊನ್ನೂರು ಹಳ್ಳದ ದಂಡೆ ಮೇಲಿನ ಸರ್ಕಾರಿ ಸ್ಟಾಕ್ಯಾರ್ಡ್ಗಳಿಗೆ ರವಾನೆ ಮಾಡಬೇಕಿತ್ತು. ಆದರೆ ಮರಳು ತುಂಬಿದ ಹತ್ತಾರು ಲಾರಿಯಲ್ಲಿದ್ದ ಮರಳನ್ನು ಸ್ಟಾಕ್ಯಾರ್ಡ್ನಲ್ಲಿ ಮರಳು ಹಾಕದೆ ಕಳ್ಳ ದಾರಿಯಲ್ಲಿ ನಿತ್ಯ ಲೂಟಿಯಾಗುತ್ತಿತ್ತು.
ಹೊಸ ಮರಳು ನೀತಿ ಟೆಂಡರ್ ನಿಯಮಗಳ ಕರಾರು ಪತ್ರದಲ್ಲಿ 8 ಲಾರಿಗಳು, ತಲಾ ಒಂದು ಹಿಟಾಚಿ, ಜೆಸಿಬಿ ಮಾತ್ರ ಬಳಕೆ ಮಾಡಬೇಕೆಂಬ ನಿಯಮವಿದೆ. ಆದರೆ ನೋಂದಣಿ ಸಂಖ್ಯೆ ಬೇರೆಯಾಗಿರುವ ಲಾರಿಗಳು, 3-4 ಹಿಟಾಚಿಗಳ ಬಳಕೆ ಮಾಡಿರುವ ಗುತ್ತಿಗೆದಾರರು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದನ್ನು ಗಮನಿಸಿದ ನವಲಿ ಗ್ರಾಮಸ್ಥರು ಮರಳು ತುಂಬಿರುವ ಲಾರಿಗಳನ್ನು ತಡೆದು ಆಡಳಿತ ವ್ಯವಸ್ಥೆ ವಿರುದ್ಧ ಸೋಮವಾರ ಪ್ರತಿಭಟನೆ ಮಾಡಿದರು.
ಸಂದೇಹ: ಹೊಸ ಮರಳು ನೀತಿ- 2014ರ ಪ್ರಕಾರ ಅಕ್ರಮ ಮರಳು ದಂಧೆ ಮಾಡುವವರ ವಿರುದ್ಧ ಕಾನೂನನ್ನು ಎಷ್ಟೇ ಬಿಗಿಗೊಳಿಸಿದರೂ ಅಕ್ರಮ ಸಾಗಣೆಗೆ ಬ್ರೇಕ್ ಬಿದ್ದಿಲ್ಲ. ಬೇಲಿಯೆ ಎದ್ದು ಹೊಲ ಮೇಯ್ದಂತೆ ಅಧಿಕಾರಿಗಳು, ಜನಪ್ರತಿನಿಗಳು ಮರಳು ಅಕ್ರಮ ದಂಧೆಯಲ್ಲಿ ತೊಡಗಿರುವ ವ್ಯಾಪಕ ಸಂದೇಹ ವ್ಯಕ್ತವಾಗುತ್ತಿದೆ. ಲೋಕೋಪಯೋಗಿ ಇಲಾಖೆ ಅಗತ್ಯ ಸಿಬ್ಬಂದಿ ನೇಮಕ ಮಾಡದೆ ನೆಪಕ್ಕೆ ಮಾತ್ರ ಸ್ಟಾಕ್ಯಾರ್ಡ್ ನಿರ್ಮಿಸಿದೆ.
ಈ ಕುರಿತು ಲೋಕೋಪಯೋಗಿ ಎಇಇ ಮಹಾಂತೇಶಗೌಡ, ಅಕ್ರಮ ದಂಧೆ ತಡೆಯುವ ಅಧಿಕಾರ ತಮಗಿಲ್ಲ. ಬರೀ ನದಿ ದಂಡೆಯಿಂದ ಸ್ಟಾಕ್ಯಾರ್ಡ್ಗೆ ಮರಳು ಸಾಗಿಸುವುದಷ್ಟೆ ನಮ್ಮ ಕೆಲಸ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಇತ್ತ ಟಾಸ್ಕ್ಫೋರ್ಸ್ ಸಮಿತಿಯಲ್ಲಿರುವವರು ಪೊಲೀಸ್ ಇಲಾಖೆ ದೂರು ನೀಡಿದರೆ ಮಾತ್ರ ತಾವು ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳುತ್ತಾರೆ. ಅತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈವರೆಗೆ ಇತ್ತ ತಿರುಗಿಯೂ ನೋಡಿಲ್ಲ. ಮರಳು ಅಕ್ರಮ ದಂಧೆ ತಡೆಯಲು ರಚನೆಯಾದ ಟಾಸ್ಕ್ಫೋರ್ಸ್ ಸಮಿತಿಯ ಎಲ್ಲ ಅಧಿಕಾರಿಗಳು ಒಬ್ಬರು ಮತ್ತೊಬ್ಬರ ಕಡೆ ಬೆರಳು ತೋರಿಸುತ್ತ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇದರಿಂದ ನದಿ ತೀರದ ಮರಳು ಲೂಟಿಯಾದರೂ ಕೇಳೋರೆ ಇಲ್ಲದಂತಾಗಿದೆ.
ನಮ್ಮ ಕೆಲಸವಲ್ಲ: ಲಾರಿಗಳನ್ನು ತಡೆಯುವುದು ನಮ್ಮ ಕೆಲಸವಲ್ಲ. ತಹಸೀಲ್ದಾರರು ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷರು. ಕನಿಷ್ಠ ಸಮಿತಿ ಸಭೆ ಕರೆದು ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ನಮ್ಮೊಬ್ಬರಿಗೆ ಯಾಕೆ ಹಿಂಸೆ? ನಮ್ಮಲ್ಲಿ ಇಲಾಖೆಯ ಸಾಕಷ್ಟು ಕೆಲಸಗಳು ಬಾಕಿಯಿವೆ. ಅಲ್ಲದೆ ಸಿಬ್ಬಂದಿ ಕೊರತೆಯಿದೆ. ಆದರೂ ತಾವು ಸ್ಟಾಕ್ಯಾರ್ಡ್ ನಿರ್ಮಿಸಿ ಮರಲು ಸಂಗ್ರಹಿಸುತ್ತಿದ್ದೇವೆ ಎನ್ನುತ್ತಾರೆ ಲೋಕೋಪಯೋಗಿ ಎಇಇ ಮಹಾಂತೇಶಗೌಡ.
ಮರಳು ಅಕ್ರಮ ಸಾಗಾಟದಲ್ಲಿ ತೊಡಗಿದ್ದ ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಹಿಂದಿನ ರಹಸ್ಯವಾದರೂ ಏನು? ಮರಳು ದಂಧೆಕೋರರ ಕಾಣದ ಕೈಗಳು ಎಷ್ಟು ಪ್ರಭಾವಿಗಳಾಗಿರಬಹುದು? ದಕ್ಷ, ಪ್ರಾಮಾಣಿಕ ಜಿಲ್ಲಾಧಿಕಾರಿಯೆಂಬ ಹೆಗ್ಗಳಿಕೆ ಹೊಂದಿರುವ ಬಳ್ಳಾರಿ ಜಿಲ್ಲಾಧಿಕಾರಿ ಒಮ್ಮೆಯೂ ಇತ್ತ ಭೇಟಿ ನೀಡಿಲ್ಲ. ಗಣಿಗಾರಿಕೆಯಷ್ಟೆ ಅಪಾಯಕಾರಿಯಾಗಿರುವ ಮರಳು ಮಾಫಿಯಾ ದಂಧೆಗೆ ಕಡಿವಾಣ ಹಾಕುವವರ್ಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

