ಉತ್ಸವ: ಶೋಭಾಯಮಾನಯಾತ್ರೆ
ಹಂಪಿ: ಜನಪದ ಕಲೆಯ ವಿವಿಧ ಪ್ರಕಾರಗಳು, ಸಕಲ ವಾದ್ಯ ಮೇಳ, ಹಸಿರು ಸೀರೆಯುಟ್ಟು ತಲೆಮೇಲೆ ಕುಂಭ ಹೊತ್ತ ಹೆಂಗಳೆಯರು, ಗಜಗಾತ್ರದ ಹಾಸ್ಯ ಗೊಂಬೆಗಳು, ಮಹಿಳಾ, ಪುರುಷರ ಡೊಳ್ಳು ಕುಣಿತಗಳು ವಿಜಯನಗರ ಹಂಪಿ ಉತ್ಸವದ ಶೋಭಾಯಾತ್ರೆಗೆ ಮೆರಗು ತಂದವು.
ಇಳಿಹೊತ್ತಿನಲ್ಲಿ ಸೂರ್ಯ ಮುಳುಗುವ ಮುನ್ನ ಹಂಪಿ ಆರಾದ್ಯದೈವ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆಯು ಶ್ರೀಕೃಷ್ಣದೇವರಾಯ ಮುಖ್ಯ ವೇದಿಕೆವರೆಗೆ ಜನತೆಯ ಸಂಭ್ರಮದಿಂದಲೆ ನಡೆಯಿತು.
ಶೋಭಾಯಾತ್ರೆ ಮಾತ್ರ ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕದ ಸಂದರ್ಭವನ್ನು ನೆನಪಿಸುವ ಹಬ್ಬದ ವಾತವರಣ ಸೃಷ್ಟಿ ಮಾಡಿತ್ತು. ರಾಮ, ಲಕ್ಷ್ಮಣ, ಹನುಮಂತ, ಸೂರ್ಪನಖಿ ಮುಖವಾಡ, ಹೊಸಪೇಟೆಯ ಮರಗಾಲು ಕುಣಿತ, ಹುಬ್ಬಳ್ಳಿ ಸಿದ್ಧಾರೂಢ ಮಠದ ವಾದ್ಯ, ಜನಪದ ಕಲಾತಂಡ, ವರಲಹಳ್ಳಿಯ ವಿಶಿಷ್ಟ ಕುದುರೆ ಕುಣಿತ, ತುಮಕೂರಿನ ವಿಶೇಷ ವಾದ್ಯಗಳಿಗೆ ಕೋಮನ ಕುಣಿತ, ನಂದಿ ಕೋಲು, ಸಮಾಳ, ಡೊಳ್ಳು, ಗೋಕಾಕ್ನ ಕನ್ನಡ ಜನಪದ ಸಂಸ್ಥೆಯ ದುರುಮುರಿ ವಾದ್ಯಯ ನಾದಕ್ಕೆ ಕುಣಿತ, ಹಲಗೆ ವಾದ್ಯಕ್ಕೆ ಹೂವಿನಿಂದ ಅಲಂಕಾರಗೊಂಡಿದ್ದ ಗೋಪುರಗಳನ್ನು ತಲೆ ಮೇಲೆ ಹೊತ್ತು ಕುಣಿಯುವ ದೃಶ್ಯ ಮನ ಸೆಳೆಯಿತು.
ಉತ್ಸವಕ್ಕೆ ಮೆರುಗು: ಮೈ ಮೇಲೆ ಕವಡಿ ಅಂಗಿ, ತಲೆ ಮೇಲೆ ಕರಡಿ ಕೂದಲು, ಕೈಯಲ್ಲಿ ಢಮರುಗಳ ನಾದಕ್ಕೆ ಹೆಜ್ಜೆ ಹಾಕುತ್ತಿರುವ ಗೂರವರು, ಅರಸರ ಕಾಲದಲ್ಲಿ ಬಳಕೆಯಾಗುತ್ತಿದ್ದ ಕಹಳೆ ನಾದ, ಕೈಯಲ್ಲಿ ನಂದಿಕೋಲು ಹೋಲುವ ವಿಶಿಷ್ಟ ಜನಪದ ಬಣ್ಣ ಬಣ್ಣದ ಬಟ್ಟೆಯಿಂದ ಅಲಂಕೃತವಾಗಿದ್ದ ಅರಸಿಕೇರೆಯ ಪಟ್ಟಾ ಕುಣಿತ, ಮತ್ತಿಹಳ್ಳಿಯ ಕೋಲಾಟ, ಹಳೆ ದರೋಜಿಯ ಹುಲಿ ಕುಣಿತ, ಶಹನಾಯಿ ವಾದ್ಯ, ಯಕ್ಷಗಾನ ಕಲೆಯ ಮುಖವಾಡಗಳನ್ನು ಹೊತ್ತು ಜನರಿಗೆ ಕಿಟಲೆ ಮಾಡುತ್ತಾ ಹಾಸ್ಯ ಸೃಷ್ಟಿಸುತ್ತಿದ್ದ ವಿಭಿನ್ನ ರೀತಿಯ ಗೊಂಬೆಗಳ ಕುಣಿತ ಹಂಪಿ ಉತ್ಸವದ ಶೋಭಾಯಾತ್ರೆಗೆ ಮೆರಗು ತಂದವು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಜನಪದ ಕಲಾ ಪ್ರಕಾರದ ವಿಶಿಷ್ಟತೆ ಹೊಂದಿರುವ ಕಲೆ, ನೃತ್ಯಗಳನ್ನು ವಿದೇಶಿಯರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ತಮ್ಮ ಕ್ಯಾಮೆರಾ, ಮೊಬೈಲ್ಗಳಲ್ಲಿ ಕ್ಲಿಕ್ಸುತ್ತಿರುವ ದೃಷ್ಯ ಸಾಮಾನ್ಯವಾಗಿತ್ತು. ಜನಪದ ನೃತ್ಯ ಹಾಗೂ ಸಂಗೀತಕ್ಕೆ ವಿದೇಶಿಯರು, ಪ್ರವಾಸಿಗರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಕಲ್ಲು ಬಂಡೆಗಳಿಂದ ಆವೃತ್ತವಾಗಿರುವ ಹಂಪಿಯಲ್ಲಿನ ದೊಡ್ಡ ಬಂಡೆಯ ಮೇಲೆ ಶೂರ್ಪನಖಿ ಹಾಗೂ ಹನುಮಂತ ವೇಷ ಧರಿಸಿದ್ದ ಕಲಾವಿದರ ನೃತ್ಯ ಮತ್ತು ಕೇಕೆ ಹಾಕಿ ಜನರ ಚಿತ್ತವನ್ನು ತಮ್ಮತ್ತ ಸೆಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

