ಹಂಪಿ ಉತ್ಸವ: ಜನಾಭಿಪ್ರಾಯ
ಜಿಲ್ಲಾಡಳಿತದ ಬೇಜವಾಬ್ದಾರಿತನ
ಜಿಲ್ಲಾಡಳಿತ ಹಂಪಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಸ್ಥಳೀಯ ಸಂಘಟನೆ, ಸಂಘ-ಸಂಸ್ಥೆಗಳನ್ನು ಆಹ್ವಾನಿಸಿಲ್ಲ. ಪ್ರತಿ ವರ್ಷ ಕ್ರೀಡೆಗಳನ್ನು ತಾಪಂ ಹೊಸಪೇಟೆ ಇವರಿಗೆ ವಹಿಸಲಾಗುತ್ತಿತ್ತು. ಆದರೆ, ಈ ಬಾರಿ ಯುವಜನ ಮತ್ತು ಕ್ರೀಡಾ ಇಲಾಖೆಗೆ ವಹಿಸಿದ್ದರಿಂದ ಸಾಕಷ್ಟು ಅವ್ಯವಸ್ಥೆಯಾಗಿದೆ.
- ದುರುಗೋಜಿ ಹೊಸಪೇಟೆ
ಅವ್ಯವಸ್ಥೆ ಆಗರ
ನೂರಾರು ವರ್ಷಗಳ ಇತಿಹಾಸ ಹೊಂದಿರುವ ವಿಜಯನಗರ ಅರಸರು ಫೈಲ್ವಾನರಿಗೆ ಬೆಳ್ಳಿ, ಬಂಗಾರ, ಮುತ್ತು ರತ್ನಗಳನ್ನು ದಾನ ಮಾಡಿದ್ದಾರೆ. ಪ್ರಸಕ್ತ ಉತ್ಸವದಲ್ಲಿ ರಾಜಕಾರಾಣಿಗಳು ಎಲ್ಲದಕ್ಕೂ ಶುಲ್ಕ ವಿಧಿಸಿದ್ದು ನೋಡಿದರೆ ಉತ್ಸವ ಜನೋತ್ಸವವಾಗದೆ ಅವ್ಯವಸ್ಥೆಯಾಗಿದೆ. 9 ಕಿ.ಮೀ ದೂರ ವಾಹನ ಬಿಟ್ಟು ಬಸ್ನಲ್ಲಿ ಬರಬೇಕು. ಇದರಿಂದ ಸಾಕಷ್ಟು ತೊಂದರೆಯಾಗಿದೆ.
- ಇಬ್ರಾಹಿಂಸಾಬ್ ಅರಬ್, ಜಮಖಂಡಿ
ಅಧಿಕಾರಿಗಳ, ಪೊಲೀಸರ ಉತ್ಸವ
ಕಳೆದ ಉತ್ಸವದಲ್ಲಿ ಜನಾರ್ದನ ರೆಡ್ಡಿ, ಶ್ರೀರಾಮುಲು ಅದ್ಧೂರಿಯಿಂದ ಕಲಾವಿದರು, ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಸಹಕಾರ, ಸೌಕರ್ಯ ಒದಗಿಸಿದ್ದರು. ಈ ಬಾರಿ ಆಗಿರುವ ಅವ್ಯವಸ್ಥೆ ನೋಡಿದರೆ ಯಾವ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಒಟ್ಟಾರೆ ಹಂಪಿ ಉತ್ಸವ ಅಧಿಕಾರಿಗಳ, ಪೊಲೀಸರ ಉತ್ಸವವಾಗಿದೆ.
- ಶ್ರೀಶೈಲ, ಮಹಾಲಿಂಗಪುರ
ಸರ್ವಾಧಿಕಾರತ್ವ ಧೋರಣೆ
ಹಂಪಿ ಉತ್ಸವವನ್ನು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನೇರವಾಗಿ ವೇದಿಕೆಗೆ ಬಂದು ಹೂ ಮಾಲೆ ಹಾಕಿಕೊಂಡು ಜನರಿಂದ ಜೈಕಾರ ಹಾಕಿಸಿಕೊಂಡರೆ ಸಾಲದು. ಉತ್ಸವದಲ್ಲಿ ಯಾವ ಕಡೆಗೂ ಹೋಗಲು ಪೊಲೀಸರು ಬಿಡುತ್ತಿಲ್ಲ. ಈ ಉತ್ಸವದಲ್ಲಿ ಜನಪ್ರತಿನಿಧಿಗಳೇ ಸರ್ವಾಧಿಕಾರಿಗಳಾಗಿದ್ದಾರೆ.
- ಟಿ. ವೀರೇಶ ಶಿರಗುಪ್ಪ
ಪ್ರವಾಸಿಗರಿಗೆ ಮಾರ್ಗಸೂಚಿ ಇಲ್ಲ
ಹಂಪಿ ಉತ್ಸವದ ಮೂಲಕ ಮತ್ತೆ ನಮ್ಮ ನಾಡಿನ ಕಲೆಗಳಿಗೆ ಪ್ರೋತ್ಸಾಹ ಸಿಗ್ತದೆ. ಆದ್ರೆ ಆಡಳಿತ ಪ್ರವಾಸಿಗರಿಗೆ ಸರಿಯಾದ ಮಾರ್ಗದರ್ಶನ ಇಲ್ಲ. ಸೂಕ್ತ ಸೌಲಭ್ಯಗಳಿಲ್ಲ. ಹೀಗಾಗಿ ಹಂಪಿ ಉತ್ಸವ ನೋಡಲು ಬಂದ ನಮ್ಮಂತ ಪ್ರವಾಸಿಗರು ಅಲೆದಾಡಬೇಕಾದ ಪ್ರಸಂಗ ಬಂದಿದೆ. ಜನರಿಗೆ ಮಾರ್ಗಸೂಚಿ ಇಲ್ಲ. ಸರಿಯಾದ ಸಮಯಕ್ಕೆ ಕಾರ್ಯಕ್ರಮ ನಡೆಯುತ್ತಿಲ್ಲ. ಹೀಗಾಗಿ ಸಾಹಸಕ್ರೀಡೆಗಳು, ಮನೋರಂಜನಾ ಕ್ರೀಡೆಗಳು ಯಾವಾಗ ನಡೀತಾವೆ, ಎಲ್ಲಿ ಹೋಗಬೇಕು, ಎಲ್ಲಿ ಇಳಿಯಬೇಕು ಎಂಬುದನ್ನು ಅಧಿಕಾರಿಗಳು ತಿಳಿಸ್ತಿಲ್ಲ. ಹೀಗಾಗಿ ಉತ್ಸವ ಸವಿಯಲು ಬಂದವರಿಗೆ ಈ ಬಾರಿ ನಿರಾಸೆ ಆಗಿದೆ.
-ರಾಮಣ್ಣ, ಕೊಪ್ಪಳ ಜಿಲ್ಲೆ ಕುಷ್ಟಿಗಿ ತಾಲೂಕಿನ ತಾವರಗೇರಾ ಗ್ರಾಮದ ನಿವಾಸಿ
ಸೌಲಭ್ಯವಿದ್ದರೆ ಉತ್ಸವಕ್ಕೆ ಮೆರಗು
ಹಂಪಿ ಉತ್ಸವ ನೋಡಾಕ ಬಂದ ನಮ್ಮಂತವರಿಗೆ ಮಧ್ಯಾಹ್ನ ಊಟ, ಕುಡಿಯಲು ನೀರೂ ಸಿಗುತ್ತಿಲ್ಲ. ಆದ್ರೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಚೆನ್ನಾಗಿ ನಡೀತಾವೆ. ನಮ್ಮ ಕಲೆಗಳನ್ನು ನೋಡ್ಲಿಕ್ಕೆ ಕಷ್ಟಪಟ್ಟಾದ್ರೂ ಬರ್ತೀವಿ. ಸರ್ಕಾರದಿಂದ ಕೋಟಿಗಟ್ಟಲೇ ಹಣ ಖರ್ಚಾದ್ರೂ ಸಾಮಾನ್ಯ ಜನತೆಗೆ ಸೌಲಭ್ಯ ಸಿಗದಿದ್ರೆ ಹೇಗೆ? ಅಧಿಕಾರಿಗಳು ಸಾಮಾನ್ಯ ಜನತೆ ಹಿತ ಗಮನದಲ್ಲಿಟ್ಟುಕೊಂಡು ಜನರ ಉತ್ಸವ ಮಾಡಿದ್ರೆ ಮಾತ್ರ ಹಂಪಿ ಉತ್ಸವಕ್ಕೆ ಮತ್ತಷ್ಟು ಮೆರಗು ಬರ್ತದೆ.
- ಸುದರ್ಶನ, ಕೂಡ್ಲಿಗಿ ತಾಲೂಕು ಹೊಸಹಳ್ಳಿ
ಹೆಚ್ಚು ಪುಸ್ತಕ ಮಳಿಗೆಗಳೇ ಇಲ್ಲ
ಹಂಪಿ ಉತ್ಸವ ಅತ್ಯಂತ ವೈವದಿಂದ ನಡೆದುಕೊಂಡು ಬಂದಿತ್ತು. ಆದರೆ ಈ ವರ್ಷ ಉತ್ಸವ ಬಹಳಷ್ಟು ನಿರಾಸೆ ಮೂಡಿಸಿದೆ. ಉತ್ಸವದ ಪ್ರದರ್ಶನದಲ್ಲಿ ಹೆಚ್ಚಾಗಿ ಪುಸ್ತಕ ಮಳಿಗೆಗಳು ಬಂದಿಲ್ಲ. ಪ್ರತಿವರ್ಷ ಸಾಕಷ್ಟು ಪುಸ್ತಕಗಳನ್ನು ಖರೀದಿಸುತ್ತಿದ್ದೆ. ಈ ವರ್ಷವೂ ಸುಮಾರು ರು. 10 ಸಾವಿರದಷ್ಟು ಪುಸ್ತಕಗಳನ್ನು ಖರೀದಿಸಬೇಕು ಎಂದು ಉತ್ಸವಕ್ಕೆ ಬಂದರೆ, ಇಲ್ಲಿ ಪುಸ್ತಕ ಮಳಿಗೆಗಳೆ ಬಂದಿಲ್ಲ. ಪುಸ್ತಕ ಖರೀದಿ ಮಾಡಬೇಕು ಎಂದು ಬಂದ ನಮ್ಮಂತವರಿಗೆ ಹೆಚ್ಚು ನಿರಾಸೆಯಾಗಿದೆ.
- ಕಾಸಿಂಸಾಬ್, ಕೊಟ್ಟೂರು.
ಧ್ವನಿ-ಬೆಳಕು ಕಾರ್ಯಕ್ರಮ 7 ದಿನ ನಡೆಯಲಿ
ಉತ್ಸವದಲ್ಲಿ ಈ ವರ್ಷ ಆರಂಭಿಸಿರುವ ವಿಜ್ಞಾನ ವಸ್ತುಪ್ರದರ್ಶನ ಆಕರ್ಷಣೆ ಮತ್ತು ಜ್ಞಾನ ಸಂಪಾದನೆಗೆ ಅನುಕೂಲವಾಗಿದೆ. ವಿಜ್ಞಾನ ವಸ್ತುಪ್ರದರ್ಶವನ್ನು ಹಂಪಿಯಲ್ಲಿ ಈ ಹಿಂದೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವ್ಯವಸ್ಥೆಗೊಳಿಸಿದಂತೆ 7 ದಿನ ಹಂಪಿಯಲ್ಲಿ ಮುಂದುವರಿಸಿದರೆ ಹೆಚ್ಚು ಅನುಕೂಲ. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವಿಜ್ಞಾನ ಶಿಕ್ಷಕರು ಕಡ್ಡಾಯವಾಗಿ ವೀಕ್ಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದರೆ ಎಲ್ಲರಿಗೂ ನೋಡುವ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.
- ಪ್ರಭುರಾಜ್ ಪಾಟೀಲ್, ಶಿಕ್ಷಕ, ಹೊಸಪೇಟೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

