ಯಮಲೋಕಕ್ಕೆ ಇದೇ ದಾರಿ!
ಬಳ್ಳಾರಿ: ಅದಿರು ಸಾಗಾಣಿಕೆ ಲಾರಿಗಳಿಗೆ ಕೆಟ್ಟರೂ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಗಣಿ ನಿಂತು ಸಿಬಿಐ, ಸಿಇಸಿ ತನಿಖೆ ನಡೆಸಿ, ಗಣಿ ಲಾರಿಗಳು ಕೆಲಸ ಕಳೆದುಕೊಂಡು, ಇದೀಗ ತಾನೆ ಕೆಲ ಗಣಿಗಾರಿಕೆ ಕಂಪನಿಗಳು ಗಣಿಗಾರಿಕೆ ಆರಂಭಿಸುವ ಮೂಲಕ ನಿಟ್ಟುಸಿರು ಬಿಡುತ್ತಿವೆ. ಆದರೆ, ಗಣಿ ಲಾರಿಗಳ ಚಾಲಕರು ಮಾತ್ರ ಪಾಠ ಕಲಿತಿಲ್ಲ. ಅದಿರನ್ನು ಬೇಗನೆ ಸಾಗಿಸಬೇಕೆಂಬ ಧಾವಂತದಲ್ಲಿ ರಸ್ತೆಯಲ್ಲಿ ಹೋಗುವ ಇತರ ವಾಹನಗಳು, ಜನರ ಪ್ರಾಣಗಳಿಗೆ ಎರವಾಗುತ್ತಿದ್ದಾರೆ.
ಒಮ್ಮೆ ಹೊಸಪೇಟೆಯಿಂದ ಸಂಡೂರಿಗೆ, ಸಂಡೂರಿನಿಂದ ತೋರಣಗಲ್ ರಸ್ತೆಯಲ್ಲಿ ಸಂಚರಿಸಿದರೆ ಜೀವ ಹೋಗಿ ಬಂದಂತಹ ಅನುಭವವಾಗದೆ ಇರಲಾರದು. ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದರೆ ಮಾತ್ರ, ಈ ಭಾಗದ ಜನರು ಹಾಗೂ ಪ್ರಯಾಣಿಕರಿಗೆ ನೆಮ್ಮದಿ ಸಾಧ್ಯ. ಯಮನನ್ನು ಯಾರು ಕಾಣದೆ ಇರಬಹುದು, ಆದರೆ ಸಂಡೂರು ಭಾಗಕ್ಕೆ ಹೋದರೆ ಗಣಿ ಲಾರಿಗಳ ರೂಪದಲ್ಲಿ ಯಮನ ಸ್ವರೂಪವನ್ನು ಕಾಣುತ್ತೇವೆ. ಇದು ಉತ್ಪ್ರೇಕ್ಷೆಯ ಮಾತಲ್ಲ.
ಇನ್ನು ಸಂಡೂರು ತೋರಣಗಲ್ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಆದರೆ ಕೆಲವೆಡೆಗಳಲ್ಲಿ ರಸ್ತೆಯಲ್ಲಿ ಮೊಣಕಾಲುದ್ದದ ಗುಂಡಿಗಳಿದ್ದರೂ ಅವು ಅದಿರು ಲಾರಿಗಳಿಗೆ ಕಾಣುವುದಿಲ್ಲ. ಇಂತಹ ಗುಂಡಿಗಳಲ್ಲಿ ಚಲಿಸುವಾಗ ಲಾರಿ ಆಯ ತಪ್ಪಿ ಇತರ ವಾಹನಗಳಿಗೆ ತಾಕಿದರೂ, ಅಪಘಾತ ಸಂಭವಿಸಿ, ಪ್ರಾಣ ಹೋಗುವುದಂತೂ ಗ್ಯಾರೆಂಟಿ.
ಬಸ್ಗಳಲ್ಲಿ ಹೋಗುವವರಿಗೆ ಗಣಿ ಲಾರಿಗಳಿಂದ ಕೆಂಧೂಳಿನ ಮಜ್ಜನವಾಗುತ್ತದೆ. ಇನ್ನು ಬೈಕ್ಗಳು ಈ ರಸ್ತೆಯಲ್ಲಿ ಹೋದರೆ, ಬೈಕ್ ಸವಾರರು ಗುರುತು ಸಿಗುವುದು ಕಷ್ಟ ಎನ್ನುವಷ್ಟರಮಟ್ಟಿಗೆ ಕೆಂಧೂಳು ಮೈಗೆ ಅಂಟಿಕೊಂಡಿರುತ್ತದೆ. ಅದಿರಲಿ, ಬೈಕ್ನಲ್ಲಿ ಹೋದವರು ಮರಳಿ ಬರುತ್ತಾರೆ ಎಂಬುದು ಕಷ್ಟಸಾಧ್ಯ ಎನ್ನುವರ ಮಟ್ಟಿಗೆ ಅಲ್ಲಿನ ರಸ್ತೆಯಲ್ಲಿ ಅದಿರು ಲಾರಿಗಳ ಅಬ್ಬರ ಇದೆ.
ಜನರ ಪ್ರಾಣಕ್ಕೆ ಬೆಲೆಯೇ ಇಲ್ಲ: ಅಕ್ರಮ ಗಣಿಗಾರಿಕೆ ಆರೋಪ ರಾಜ್ಯ ಹಾಗೂ ದೇಶಾದ್ಯಂತ ವಿವಾದ ಸೃಷ್ಟಿಸಿ, ಘಟಾನುಘಟಿಗಳು ಜೈಲಿಗೆ ಹೋಗಿದ್ದಾರೆ. ಇನ್ನು ಸಿಬಿಐ, ಸಿಇಸಿ ತನಿಖೆ ನಡೆಸುತ್ತಿವೆ. ಆದರೂ ಲಾರಿಗಳು ತಮ್ಮ ಹಳೆಯ ಚಾಳಿ ಬಿಟ್ಟಿಲ್ಲ. ಪ್ರಯಾಣಿಕರ ವಾಹನಗಳಾದ ಬಸ್ಗಳು ಹಾಗೂ ಕಾರುಗಳು ಆ ರಸ್ತೆಯಲ್ಲಿ ಹೋಗುವುದಾದರೆ ಅದಿರು ಲಾರಿ ಎದುರಿಗೆ ಬಂದರೆ ಸೈಡ್ ನಿಂತು, ಅವುಗಳಿಗೆ ದಾರಿ ಬಿಟ್ಟು ಮುಂದೆ ಹೋಗಬೇಕಾಗದ ಪರಿಸ್ಥಿತಿ ಇಲ್ಲಿದೆ. ಅಪಘಾತಗಳ ಸಂಖ್ಯೆಗಂತೂ ಲೆಕ್ಕವಿಲ್ಲ. ಒಟ್ಟಿನಲ್ಲಿ ಈ ರಸ್ತೆಗಳಲ್ಲಿ ಜನರ ಪ್ರಾಣಕ್ಕೆ ಬೆಲೆಯೇ ಇಲ್ಲ.
ನಿಯಂತ್ರಣ ವಿಫಲ: ಈಗಾಗಲೇ ಅಕ್ರಮ ಗಣಿಗಾರಿಕೆ ಆರೋಪದಿಂದ ಅಪಪ್ರಚಾರಕ್ಕೆ ಕಾರಣವಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಅದಿರು ಲಾರಿಗಳ ವೇಗದ ಮೇಲೆ, ಆರ್ಭಟಕ್ಕೆ ನಿಯಂತ್ರಣ ಹಾಕುವಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಸೇರಿದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.
ಹೊಸಪೇಟೆಯಿಂದ ಸಂಡೂರಿಗೆ ಉತ್ತಮ ರಸ್ತೆ ನಿರ್ಮಾಣವಾಗಿದ್ದರೂ, ಆ ರಸ್ತೆಯಲ್ಲಿ ಬೈಕ್ ಸೇರಿದಂತೆ ಕಾರ್ಗಳು, ಬಸ್ಸ್ಗಳು ಹೋಗಬೇಕೆಂದರೆ ಗಣಿ ಅದಿರಿನ ಲಾರಿಗಳಿಂದ ಭಯ ಪಡುವಂತಾಗಿದೆ. ಕಾರಣ ಅದಿರು ಲಾರಿಗೆ ವೇಗದ ಮೀತಿಯೇ ಇಲ್ಲ. ಪ್ರಯಾಣಿಕರ ವಾಹನ ಸ್ವಲ್ಪ ಯಾಮಾರಿದರೆ ಸಾಕು, ಅಪಘಾತವಂತೂ ಕಟ್ಟಿಟ್ಟ ಬುತ್ತಿ. ಅದಿರು ಲಾರಿಗಳು ರಸ್ತೆಗಳಲ್ಲಿ ಓಟದ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ ಎನ್ನುವಂತೆ ಒಂದಕ್ಕಿಂತ ಒಂದು ವೇಗವಾಗಿ ಚಲಿಸುತ್ತವೆ. ರಸ್ತೆ ಸರಿ ಇದ್ದರೂ ಕಷ್ಟ, ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದರೂ ಕಷ್ಟ ಎನ್ನುವಂತಹ ಅನುಭವ ಸಂಡೂರು ತಾಲೂಕು ಹಾಗೂ ಹೊಸಪೇಟೆ ತಾಲೂಕಿನ ಕೆಲ ಹಳ್ಳಿಗಳ ಜನರಿಗೆ ಆಗುತ್ತಿದೆ.
25 ಕಿಮೀಗೆ ಕ್ರಮಿಸಲು 2-3 ಗಂಟೆ: ತೋರಣಗಲ್ನಿಂದ ಸಂಡೂರಿಗೆ ಅಥವಾ ಸಂಡೂರಿನಿಂದ ತೋರಣಗಲ್ಗೆ ಕೇವಲ 25 ಕಿ.ಮೀ ಅಂತರವಿದ್ದರೆ, ಕೇವಲ ಅರ್ಧಗಂಟೆ ಅಥವಾ ಒಂದುಗಂಟೆಯಲ್ಲಿ ಹೋಗಲು ಕಷ್ಟಸಾಧ್ಯ. ಹಲವು ಸಂದರ್ಭದಲ್ಲಿ 2-3 ಗಂಟೆಗಳು ಬೇಕಾಗುತ್ತದೆ. ಒಮ್ಮೆ ಐದಾರು ತಾಸುಗಳು ಹಿಡಿದಿರುವ ಪ್ರಸಂಗಗಳು ನಡೆದಿವೆ ಎನ್ನುತ್ತಾರೆ ಪ್ರಯಾಣಿಕರು. ರಸ್ತೆಯು ಹದೆಗೆಟ್ಟು ಹೋಗಿರುವುದರಿಂದ (ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ) ಅಡ್ಡಾದಿಡ್ಡಿಯಾಗಿ ಮೈನ್ಸ್ ಲಾರಿಗಳು ಬಂದು ಟ್ರಾಫಿಕ್ ಜಾಮ್ ಆಗುವುದು ಈ ರಸ್ತೆಯಲ್ಲಿ ಸರ್ವೇ ಸಾಮಾನ್ಯ. ನಾಲ್ಕೈದು ನಿಮಿಷ ಟ್ರಾಫಿಕ್ ಜಾಮ್ ಆದರೆ ಸಾಕು ನೂರಾರು ಲಾರಿಗಳು ರಸ್ತೆ ತುಂಬ ನಿಂತುಕೊಳ್ಳುತ್ತವೆ. ಇದರಿಂದಾಗಿ ಟ್ರಾಫಿಕ್ ಜಾಮ್ ಕಿರಿಕಿರಿ ಹೇಳತೀರದು. ಕೆಲ ಸಂದರ್ಭದಲ್ಲಿ ಈ ಟ್ರಾಫಿಕ್ ಜಾಮ್ನಲ್ಲಿ ಆ್ಯಂಬುಲೆನ್ಸ್ಗಳು ಸಿಕ್ಕಿ ಹಾಕಿಕೊಂಡು ರೋಗಿಗಳು ಪರದಾಡಿದ ಪ್ರಸಂಗಗಳು ನಡೆದಿವೆ ಎನುತ್ತಾರೆ ಪ್ರಯಾಣಿಕರು.
ಶುಭ್ರ ಬಟ್ಟೆ ಹಾಕುವಂತಿಲ್ಲ: ಒಂದು ದಿನದ ಮಟ್ಟಿಗೆ ಬೇರೆ ತಾಲೂಕಿನವರು ಹಾಗೂ ಬೇರೆ ಜಿಲ್ಲೆಯವರು ಆ ರಸ್ತೆಗೆ ಹೋದರೆ ಸಾಕು ಸಾಕಾಗಿ ಹೋಗುತ್ತದೆ. ಇನ್ನು ನಿತ್ಯವು ಸಂಡೂರು ತಾಲೂಕಿನ ಹಳ್ಳಿಗಳ ಜನರ ಪಾಡು ಹೇಳತೀರದು. ಸಂಡೂರಿನಿಂದ ತೋರಣಗಲ್ಗೆ ಹೋಗುವ ಮಾರ್ಗದಲ್ಲಿ ಬರುವ ಬಾಬಯ್ಯಕ್ರಾಸ್, ತಾರಾನಗರ, ಬನ್ನಿಹಟ್ಟಿ, ಮುರಾರಿಪುರ ಕ್ರಾಸ್, ನಾಗಲಾಪುರ, ವಡ್ಡು, ಸಂಡೂರನಿಂದ ಹೊಸಪೇಟೆಗೆ ಹೋಗುವ ಮಾರ್ಗದಲ್ಲಿ ಬರುವ ಕಲ್ಲಳ್ಳಿ, ರಾಜಾಪುರ, ವಂಕಟಗಿರಿ, ಸಿದ್ದಾಪುರ, ಸುಶೀಲನಗರ, ಇನ್ನು ಸಂಡೂರು ತಾಲೂಕಿನ ಒಳಭಾಗದಲ್ಲಿ ಬರುವ ಹೊಸಹಳ್ಳಿ, ಲಕ್ಷ್ಮೀಪುರ, ಧರ್ಮಾಪುರ, ನಾರಾಯಣಪುರ ಸೇರಿದಂತೆ ಇತರ ಹಳ್ಳಿಗಳ ಪರಿಸ್ಥಿತಿ ಹೇಳತೀರದು. ಯಾರಾದರೂ ಮದುವೆ, ಶುಭ ಕಾರ್ಯಕ್ರಮಗಳಿಗೆ ಹೊಸ ಅಥವಾ ಸ್ವಚ್ಛ ಬಟ್ಟೆ ಹಾಕಿಕೊಂಡು ರಸ್ತೆಯಗಳಲ್ಲಿ ಬಸ್ಸಿಗೆ ಕಾಯುವಂತಿಲ್ಲ. ಕಾದರೆ ಸ್ವಲ್ಪ ಹೊತ್ತಿಗೆ ಬಟ್ಟೆಗಳ ತುಂಬ ಕೆಂಧೂಳು ತುಂಬಿಕೊಂಡಿರುತ್ತದೆ. ಇನ್ನು ಬಸ್ಸಿನಲ್ಲಿದ್ದರೂ, ಧೂಳು ಬರುತ್ತದೆ. ಅದರಿಂದಾಗಿ ಈ ಭಾಗಕ್ಕೆ ಶುಭ ಕಾರ್ಯಕ್ಕೆ ಹೋಗುವ ಜನರು ಒಂದು ಜೊತೆ ಬಟ್ಟೆಯನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗುತ್ತಾರೆ. ಇಷ್ಟರ ಮಟ್ಟಿಗೆ ಇಲ್ಲಿನ ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ.
ನಿಯಂತ್ರಣ ಅಸಾಧ್ಯವೇ?: ಯಮಸ್ವರೂಪಿಯಾಗಿ ಸಂಚರಿಸುವ ಅದಿರು ಲಾರಿಗಳ ಮೇಲೆ ನಿಯಂತ್ರಣ ಹಾಕುವುದು ಅಧಿಕಾರಿಗಳಿಗೆ ಕಷ್ಟದ ಕೆಲಸವೇ? ಕಷ್ಟವಿಲ್ಲದಿದ್ದರೆ ಲಾರಿಗಳನ್ನು ಯಾಕೆ ನಿಯಂತ್ರಿಸುತ್ತಿಲ್ಲ? ಗಣಿ ಲಾಭಿಯ ಒತ್ತಡವಿದೆಯೇ? ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆಯೇ? ನಿಯಮ ಮೀರಿ ವರ್ತಿಸುವ ಅದಿರು ಲಾರಿಗಳಿಗೆ ಕೊನೆ ಇಲ್ಲವೇ? ಅದಿರು ಲಾರಿಗಳ ಸಂಚಾರ ಬೇಡವೆಂದಲ್ಲ, ಆದರೆ ಸಂಚಾರಿ ನಿಯಮಗಳ ಪಾಲನೆ ಅಧಿಕಾರಿಗಳಿಗೆ ಕಷ್ಟವೇ?
ಬೇಜವಾಬ್ದಾರಿ: ಅಡ್ಡಾದಿಡ್ಡಿಯಾಗಿ ಸಂಚರಿಸುವ ಲಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾದ ಒಬ್ಬ ಜವಾಬ್ದಾರಿಯುತ ಆರ್ಟಿಒ ಅಧಿಕಾರಿಯೇ ಫೈನ್ ಹಾಕುವುದು ಬಿಟ್ಟು ಏನು ಮಾಡುವುದಕ್ಕೆ ಬರುವುದಿಲ್ಲ ಎನ್ನುತ್ತಾರೆ. ಅಸಮರ್ಥತೆ ತೋರಿಸಿದರೆ ಈ ಬಗ್ಗೆ ಯಾರು ತಾನೇ ಏನು ಮಾಡಬಲ್ಲರು. ಅಧಿಕಾರಿಗಳು ನಿರಂತರವಾಗಿ ಅದಿರು ಲಾರಿಗಳ ಓಡಾಟದ ಮೇಲೆ ಕಣ್ಣಿಟ್ಟರೆ, ಫೈನ್ ಹಾಕಿದರೆ, ಈ ರೀತಿಯಾಗಿ ನಿಯಮ ಮೀರಿ ಓಡಾಡಲು ಸಾಧ್ಯವೇ? ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ ಎಂಬ ಉದ್ದೇಶಕ್ಕೆ ಫೈನ್ ಹಾಕುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಈ ರೀತಿ ನಿಯಮ ಮೀರಿ ವರ್ತಿಸಲು ಸಾಧ್ಯವೇ ಎಂಬುದು ಅಧಿಕಾರಿಗಳೇ ಆಲೋಚಿಸಬೇಕು.
ಮೊದಲು ರಸ್ತೆ ಸರಿಯಿಲ್ಲದ್ದರಿಂದ ಅದಿರು ಲಾರಿಗಳ ಧೂಳಿನಿಂದ ಬೇಸತ್ತು ಹೋಗಿದ್ದೆವು. ಇದೀಗ ಹೊಸಪೇಟೆಯಿಂದ ಸಂಡೂರು ವರೆಗಿನ ರಸ್ತೆ ಅಭಿವೃದ್ಧಿ ಪಡಿಸಿದ್ದರೂ ಅದಿರು ಲಾರಿಗಳ ಓಡಾಟ, ಧೂಳು ಮಾತ್ರ ನಿಂತಿಲ್ಲ. ಹಗಲೆಂಬುದಿಲ್ಲ, ರಾತ್ರಿ ಎಂಬುದಿಲ್ಲ. ದಿನದ ಎಲ್ಲ ಹೊತ್ತಿನಲ್ಲಿ ಲಾರಿಗಳು ಓಡಾಡುತ್ತಿರುತ್ತವೆ. ಮನೆಯು ರಸ್ತೆಯ ಪಕ್ಕದಲ್ಲಿರುವುದರಿಂದ ನಿತ್ಯವು ಧೂಳು ಹಾಗೂ ಲಾರಿಗಳ ಓಡಾಟಕ್ಕೆ ಬೇಸತ್ತು ಹೋಗಿದ್ದೇವೆ.
- ಗುಬ್ಬಮ್ಮ, ಸಿದ್ದಾಪುರದ ಅಜ್ಜಿ
ಸಂಡೂರಿನಿಂದ ತೋರಣಗಲ್ಗೆ ನಿಗದಿತ ಸಮಯಕ್ಕೆ ಹೋಗುವುದು ಸುಳ್ಳು. ಒಂದು ದಿನ ತೋರಣಗಲ್ನಲ್ಲಿ ಕೆಲಸ ಮುಗಿಸಿಕೊಂಡು ಸಂಡೂರಿಗೆ ಹೋಗುವುದಕ್ಕೆ ಸಂಜೆ ಬಿಟ್ಟು, ರಾತ್ರಿ 11.30ಕ್ಕೆ ಹೋಗಬೇಕಾಗಿತ್ತು. ಅದಿರು ಲಾರಿಗಳ ಟ್ರಾಫಿಕ್ ಜಾಮ್ನಿಂದ ಬೆಳಗ್ಗೆ ಹೋಗಬೇಕಾಯಿತು. ಟ್ರಾಫಿಕ್ ಜಾಮ್ ಆದರೆ ಪೊಲೀಸರು ಬಂದ ಕ್ಲಿಯರ್ ಮಾಡುವುದು ಕಷ್ಟ. ಬಸ್ಸಿನಲ್ಲಿರುವ ಪ್ರಯಾಣಿಕರೇ ಟ್ರಾಫಿಕ್ ಕ್ಲಿಯರ್ ಮಾಡಿಕೊಂಡು ಹೋಗಬೇಕು. ಹಲವು ಸಂದರ್ಭದಲ್ಲಿ ಇಂತಹ ಅನುಭವಗಳಾಗಿವೆ.
- ರಾಜಾಭಕ್ಷಿ, ಸಂಡೂರು ನಿವಾಸಿ
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

