7.74 ಲಕ್ಷ ಟನ್ ಅದಿರು ರಫ್ತು
ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 22
ಗಣಿ ಅಕ್ರಮದ ಬಗ್ಗೆ ಸಿಬಿಐ ತನಿಖೆ ಆಳಕ್ಕೆ ಹೋದಂತೆಲ್ಲ ಆಶ್ಚರ್ಯಕರ ಮಾಹಿತಿಗಳು ಹೊರ ಬರುತ್ತಿವೆ. ಕೇವಲ ಒಂದು ಕಂಪನಿ 15 ತಿಂಗಳ ಅವಧಿಯಲ್ಲಿ 7,74,058 ಮೆಟ್ರಿಕ್ ಟನ್ ಅದಿರನ್ನು ರಫ್ತು ಮಾಡುವ ಮೂಲಕ ಆಶ್ಚರ್ಯ ಮೂಡಿಸಿದೆ. 17 ಶಿಪ್ಮೆಂಟ್ ಮೂಲಕ ವಿದೇಶಕ್ಕೆ ರಫ್ತು ಮಾಡಿದ್ದು, ಅದರಲ್ಲಿ ಅಕ್ರಮತೆ ಹೆಚ್ಚಾಗಿದೆ ಎಂಬ ಅಂಶ ಸಿಬಿಐ ತನಿಖೆಯಿಂದ ಗೊತ್ತಾಗಿದೆ. ಈಗಾಗಲೆ ಎಸ್ಬಿ ಲಾಜಿಸ್ಟಿಕ್ ವಿರುದ್ಧ ಸಿಬಿಐ ಅಧಿಕಾರಿಗಳು ಎರಡು ಪೂರಕ ಚಾರ್ಜ್ಶೀಟ್ನಲ್ಲಿ ಈ ವಿಷಯ ತಿಳಿಸಿದ್ದಾರೆ.
ಕೇವಲ ಅದಿರನ್ನು ಭೂಮಿಯಿಂದ ಹೊರ ತೆಗೆಯುವಲ್ಲಿ ಮಾತ್ರ ಗಣಿ ಅಕ್ರಮದ ಕರಾಳ ಬಾಹುಗಳು ಕೆಲಸ ಮಾಡಿಲ್ಲ, ಅದಿರನ್ನು ವಿದೇಶಕ್ಕೆ ಸಾಗಿಸುವಲ್ಲಿ ತನ್ನ ಕಬಂಧ ಬಾಹುವನ್ನು ಚಾಚಿದೆ ಎನ್ನುವುದು ಇಲ್ಲಿ ಬಯಲಾಗುತ್ತದೆ. ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಐದು ಎಫ್ಐಆರ್ಗಳನ್ನು ದಾಖಲಿಸಿತ್ತು, ಅದರಲ್ಲಿ ಎಸ್ಬಿ ಲಾಜಿಸ್ಟಿಕ್ ಒಂದಾಗಿತ್ತು. ಈ ಕಂಪನಿಯೊಂದೆ ಜ. 1, 2009ರಿಂದ ಮೇ 31, 2010ರ ಅವಧಿಯಲ್ಲಿ 17 ಶಿಪ್ಮೆಂಟ್ನಲ್ಲಿ 7,74,058 ಮೆಟ್ರಿಕ್ ಟನ್ ಅದಿರನ್ನು ಬೇಲೆಕೇರಿ ಬಂದರಿನಿಂದ ರಫ್ತು ಮಾಡಿ ಅಕ್ರಮ ಎಸಗಿದೆ ಎಂಬ ಅಂಶ ಸಿಬಿಐ ತನಿಖೆ ನಡೆಸುವಾಗ ತಿಳಿದಿದೆ. ಈ ಅಂಶವನ್ನು ಸಿಬಿಐ ಅಧಿಕಾರಿಗಳು ಪೂರಕ ದೋಷಾರೋಪಣ ಪಟ್ಟಿಯಲ್ಲಿ ತಿಳಿಸಿದ್ದಾರೆ.
ಪೂರಕ ಚಾರ್ಜ್ಶೀಟ್: ಈಗಾಗಲೆ ಸಿಬಿಐ ಅಧಿಕಾರಿಗಳು ಎಸ್ಬಿ ಲಾಜಿಸ್ಟಿಕ್ಗೆ ಸಂಬಂಧಿಸಿದಂತೆ ಮೊದಲ ಚಾರ್ಜ್ಶೀಟ್ನಲ್ಲಿ ಜನಾರ್ದನ ರೆಡ್ಡಿ ಅವರನ್ನು 1ನೇ ಆರೋಪಿ ಎಂದು ಗುರುತಿಸುವ ಜತೆಗೆ ಅರಣ್ಯಾಧಿಕಾರಿಗಳಾದ ಮುತ್ತಯ್ಯ, ಮನೋಜ್ಕುಮಾರ್ ಶುಕ್ಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರಾಜು ಹಾಗೂ ಜನಾರ್ದನ ರೆಡ್ಡಿ ಆಪ್ತರಾದ ಅಲಿಖಾನ್, ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್ ಸೇರಿದಂತೆ ಇತರ ಆರೋಪಿಗಳನ್ನು ಗುರುತಿಸಿತ್ತು. ಆರೋಪಿಗಳನ್ನು ಸಿಬಿಐ ಬಂಧಿಸಿ ವಿಚಾರಣೆ ನಡೆಸಿ, ಮತ್ತಷ್ಟು ಮಾಹಿತಿ ಕಲೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ಎರಡು ಪೂರಕ ದೋಷಾರೋಪಣ ಪಟ್ಟಿಯನ್ನು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಜನಾರ್ದನ ರೆಡ್ಡಿ ಅನುಮತಿ: ವಿದೇಶಕ್ಕೆ ರಫ್ತು ಮಾಡಿದ್ದ 7.47 ಲಕ್ಷ ಟನ್ ಅದಿರಿನಲ್ಲಿ 6.05 ಲಕ್ಷ ಟನ್ ಅದಿರನ್ನು ಈಗಲ್ ಟ್ರೇಡರ್ಸ್ನಿಂದ ಪಡೆದಿದ್ದಾರೆ. ಜನಾರ್ದನ ರೆಡ್ಡಿ ಅವರ ಅನುಮತಿಯೊಂದಿಗೆ ಅದಿರು ಮಾರಾಟ ಮಾಡಿದ್ದು, ಬಂದ ಹಣವನ್ನು ಚಿತ್ತಾಲ ಶ್ರೀನಿವಾಸ ರೆಡ್ಡಿ ಹಾಗೂ ಇನ್ನೋರ್ವನಿಂದ ಜನಾರ್ದನ ರೆಡ್ಡಿಗೆ ಸೇರುತ್ತಿತ್ತು ಎಂಬ ಅಂಶ ತಿಳಿಸಲಾಗಿದೆ. ಇನ್ನು ಅದಿರನ್ನು ವಿವಿಧ ಕಂಪನಿಗಳಿಂದ ಲೋಡಿಂಗ್ ಮಾಡುವ ಜವಾಬ್ದಾರಿ ಅಲಿಖಾನ್, ಚಂದ್ರಶೇಖರ್, ಆನಂದ್ರೆಡ್ಡಿ ಅವರು ವಹಿಸಿಕೊಳ್ಳುತ್ತಿರುವ ಅಂಶವನ್ನು ಸೇರಿಸಲಾಗಿದೆ. ಕುರುಬ ನಾಗರಾಜ್ ಎಂಬುವವರು ಮುಂಗಡ ಹಣ ಪಡೆದು ಬ್ಯಾಂಕ್ ಖಾತೆಗಳ ಮೂಲಕ ಕೋಟ್ಯಂತರ ರು. ಪಾವತಿ ಮಾಡುತ್ತಿದ್ದರು ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
ಯಾರಿಂದ ಎಷ್ಟು ಅದಿರು ಖರೀದಿ?: ರಫ್ತು ಮಾಡಿರುವ ಅದಿರನ್ನು ವಿವಿಧ ಕಂಪನಿಗಳಿಂದ ಅಕ್ರಮವಾಗಿ ಸಾಗಾಣಿಕೆ ಮಾಡಿರುವ ವಿಷಯ ಸಿಬಿಐ ತನಿಖೆಯಿಂದ ತಿಳಿದಿದೆ. ಈಗಲ್ ಟ್ರೇಡರ್ಸ್ನಿಂದ 6.05 ಲಕ್ಷ ಮೆಟ್ರಿಕ್ ಟನ್, ಶಕ್ತಿಪ್ರಿಯ- 1.31 ಲಕ್ಷ ಮೆಟ್ರಿಕ್ ಟನ್, ವೈಷ್ಣವಿ ಮಿನರಲ್ಸ್ನಿಂದ 1296 ಮೆ. ಟನ್, ಆದಿ ಅಸೋಸಿಯೇಟ್ಸ್ನಿಂದ 17,800 ಮೆ. ಟನ್, ಅಮನ್ ಎಂಟರ್ ಪ್ರೈಜಸ್ 12,966 ಮೆ. ಟನ್, ಜಂಬುನಾಥ್- 10,000 ಮೆ. ಟನ್, ಹರ್ಷದ್ ಎಕ್ಸ್ಪೋರ್ಟ್ನಿಂದ 5000 ಮೆ. ಟನ್, ಆಶಾಪುರಂನಿಂದ 53,000 ಟನ್ ಅದಿರನ್ನು ಬಂದರಿಗೆ ಸಾಗಾಣಿಕೆ ಮಾಡಲಾಗಿತ್ತು ಎಂದು ದೋಷಾರೋಪಣ ಪಟ್ಟಿಯಲ್ಲಿ ತಿಳಿಸಿದೆ.
ಸ್ಟಾಕ್ಯಾರ್ಡ್ಗಳಲ್ಲಿ ಅದಿರನ್ನು ಲಾರಿಗೆ ಲೋಡ್ ಮಾಡುವಾಗ ಸ್ವಸ್ತಿಕ್ ನಾಗರಾಜ್ ಹಾಗೂ ಖಾರದಪುಡಿ ಮಹೇಶ್ ಅವರಿಗೆ ರಾಯಲ್ಟಿ ಮತ್ತು ಫಾರೆಸ್ಟ್ ಫೀಜ್ ಎಂಬ ಹೆಸರಿನಲ್ಲಿಯೆ ಪ್ರತಿ ಟನ್ಗೆ ರು. 200 ನೀಡುತ್ತಿದ್ದರು ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ಇಂತಹ ಹಣದ ಸ್ವಲ್ಪ ಭಾಗವನ್ನು ಯಾವ ಅಧಿಕಾರಿಗಳು ಪ್ರಶ್ನಿಸದಂತೆ ಲಂಚದ ರೂಪದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೇಬು ಸೇರುತ್ತಿತಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

