ಬಳ್ಳಾರಿ

ಬಿಸಿಲೂರಲ್ಲಿ ಹಂದಿಗಳ ಆರ್ಭಟ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 23
ನಗರದಲ್ಲಿ ಕಸದ ತೊಟ್ಟಿ ಅವ್ಯವಸ್ಥೆ ಹೆಚ್ಚಾದಂತೆ ಹಂದಿಗಳು ಆರ್ಭಟವೂ ಹೆಚ್ಚಾಗುತ್ತದೆ. ಕೇವಲ ಕೊಳಚೆ ಪ್ರದೇಶ, ಸ್ಲಂಗಳಲ್ಲಿ ಮಾತ್ರ ಹಂದಿಗಳ ಹಾವಳಿ ಇಲ್ಲ. ಅಭಿವೃದ್ಧಿ ಹೊಂದಿರುವ ಬಡಾವಣೆಗಳಲ್ಲಿ ದಿನದಿಂದ ದಿನಕ್ಕೆ ಹಂದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಮುಖ ರಸ್ತೆಗಳಲ್ಲಿ ವಾಹನಗಳಿಗೆ ಅಡ್ಡ ಬಂದು ದ್ವಿಚಕ್ರವಾಹನಗಳು ಅಪಘಾತಕ್ಕೀಡಾದ ಘಟನೆಗಳು ನಡೆದಿವೆ.
ದೇಶದಲ್ಲಿ ಎಚ್1ಎನ್1 ಭೀತಿ ಇರುವಾಗ, ಹಂದಿಗಳ ಸಂತತಿಯು ಅದರಲ್ಲೂ ಜನನಿಬಿಡ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ. ಜನವಸತಿ ಪ್ರದೇಶಗಳಲ್ಲಿ ಕೊಳಚೆಯನ್ನು ಮೈಗೆ ಅಂಟಿಸಿಕೊಂಡು ಸುತ್ತಾಡುವುದು, ಇನ್ನು ಜನರಿಗೆ ಹಂದಿ ಕೊಳಚೆಯನ್ನು ಎಲ್ಲಿ ಸಿಡಿಸುವುದು ಎಂಬ ಭಯ ಇರುತ್ತದೆ. ಅವುಗಳಿಂದ ಅಂತರ ಕಾಯ್ದುಕೊಂಡು ಸುತ್ತಾಡುವುದನ್ನು ಬಳ್ಳಾರಿ ನಗರದಲ್ಲಿ ಸಾಮಾನ್ಯವಾಗಿ ಕಾಣುತ್ತೇವೆ.
ನೈರ್ಮಲ್ಯ ಸಮಸ್ಯೆಗೆ ಹಂದಿಗಳು ಕಾರಣ
ಬಳ್ಳಾರಿ ನೈರ್ಮಲ್ಯ ಕಾಯ್ದುಕೊಳ್ಳುವಲ್ಲಿ ವಿಫಲವಾಗುವುದಕ್ಕೆ ಹಂದಿಗಳ ಹಾವಳಿಯೂ ಕಾರಣ. ಸಣ್ಣದಾಗಿ ನೀರು ನಿಂತಿರುವ ಪ್ರದೇಶದಲ್ಲಿ ಹತ್ತಾರು ಹಂದಿಗಳು ಮಲಗಿಕೊಂಡು, ಅದೊಂದು ದೊಡ್ಡ ಕೊಳಚೆ ಪ್ರದೇಶವಾಗಿ ರೂಪುಗೊಳ್ಳಲು, ಕಸದ ರಾಶಿಯಲ್ಲಿ ಹಂದಿಗಳ ಓಡಾಟ, ಅದರಲ್ಲಿ ಆಹಾರ ಹುಡುಕಿಕೊಂಡು ಹೋಗುವ ಪ್ರಸಂಗಗಳು ಸಹಜವಾಗಿಯೇ ನಗರದಲ್ಲಿ ಮತ್ತಷ್ಟು ಕೊಳಚೆ ಪ್ರದೇಶ ಹಾಗೂ ಕಸದ ಗುಂಡಿ ಹೆಚ್ಚಾಗಲು ಕಾರಣವಾಗುತ್ತದೆ. ಹಂದಿಗಳು ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ಹೋಗುವುದರಿಂದ ಅಲ್ಲಿಯೇ ನೈರ್ಮಲ್ಯ ಸಮಸ್ಯೆ ಎದುರಾಗುತ್ತದೆ ಎಂಬ ಗೋಳು ಬಳ್ಳಾರಿ ಜನರಲ್ಲಿದೆ.
ಲಾಭ ನಮ್ಮದು, ಫಜೀತಿ ನಿಮ್ಮದು
ಬಳ್ಳಾರಿಯಲ್ಲಿ ಹಂದಿ ಸಾಗಾಣಿಕೆದಾರರು ಸುಲಭದ ಕೆಲಸಕ್ಕೆ ಮುಂದಾಗಿದ್ದಾರೆ. ಲಾಭ ನಮ್ಮದು, ಫಜೀತಿ ನಿಮ್ಮದು ಎಂಬ ತತ್ವವನ್ನು ಪಾಲಿಸಿಕೊಂಡು ಹೋಗುವಂತೆ ಕಾಣುತ್ತದೆ. ಹಂದಿ ಸಾಕಾಣಿಕೆ ಮಾಡುವವರು ಸ್ವಲ್ಪ ಫಜೀತಿ ಪಡುವ ಅವಶ್ಯಕತೆಯೇ ಇಲ್ಲ. ಬಳ್ಳಾರಿ ನಗರದಲ್ಲಿ ತಂದು ಬಿಟ್ಟರೆ, ಹಂದಿಗಳು ಅಲ್ಲಲ್ಲಿ ಬಿದ್ದಿದ್ದನ್ನು ತಿಂದು ಬದುಕಿಕೊಂಡು ಹೋಗುತ್ತವೆ. ಅವುಗಳನ್ನು ಮಾರಾಟ ಮಾಡುವಾಗ ಮಾತ್ರ ಹಂದಿ ಸಾಕಾಣಿಕೆದಾರರಿಗೆ ಹಂದಿಗಳ ನೆನಪಾಗುತ್ತದೆ. ಆದರೂ ಮಹಾನಗರ ಪಾಲಿಕೆ ಹಂದಿಗಳ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ. ಹಂದಿ ಸಾಕಾಣಿಕೆದಾರರ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿಲ್ಲ.
ಇನ್ನು ಹಂದಿಗಳು ರಸ್ತೆಗಳಲ್ಲಿ ಸಂಚರಿಸುವುದರಿಂದ ಬೈಕ್‌ಗಳಿಗೆ ಹಂದಿಗಳು ಅಡ್ಡ ಬಂದು ಅಪಘಾತವಾಗಿರುವ ಪ್ರಸಂಗಗಳು ನಡೆದಿವೆ. ಇಂಥ ಪ್ರಸಂಗಗಳು ಹಾಗೂ ನಗರದಲ್ಲಿ ಹಂದಿಗಳು ಸಂಖ್ಯೆಯು ವಿಪರೀತ ಏರಿಕೆಯಾಗುತ್ತಿದ್ದರೂ, ಮಹಾನಗರ ಪಾಲಿಕೆಯು ತನಗೆ ಗೊತ್ತಿಲ್ಲದಂತೆ ಕುಳಿತಿದೆ. ದೇಶದ ಕೆಲವೆಡೆಗಳಲ್ಲಿ ಎಚ್1ಎನ್1 ಭೀತಿ ಕಾಣಿಸಿಕೊಂಡು ಮಹಾನಗರ ಪಾಲಿಕೆಯ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಂಥ ಪ್ರಕರಣಗಳು ಇಲ್ಲಿ ಕಾಣಿಸಿಕೊಂಡಾಗ ಎಚ್ಚೆತ್ತುಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕು.
ಹಂದಿಗಳು ಹೆಚ್ಚಾಗುವುದು ರೋಗರುಜಿನಗಳಿಗೆ ಕಾರಣವಾಗುತ್ತಿದೆ. ಹಂದಿಗಳನ್ನು ಅಲೆಮಾರಿ ಜನಾಂಗದವರು ಹೆಚ್ಚಾಗಿ ಸಾಕುವುದರಿಂದ ಅವರಿಗೆ ನಿರ್ದಿಷ್ಟವಾಗಿ ವಾಸಿಸುವ ಪ್ರದೇಶ ಇಲ್ಲ. ಅಲೆಮಾರಿ ಜನಾಂಗಕ್ಕೆ ಗುಡಾರನಗರ ಪ್ರದೇಶದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಅಲ್ಲಿಗೆ ಅವರು ಹೋಗುವುದರಿಂದ ಬಳ್ಳಾರಿ ನಗರದಲ್ಲಿ ಹಂದಿಗಳ ಕಾಟ ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
-ಸತ್ಯಬಾಬು, ಸಿಐಟಿಯು
ಪ್ರತಿ ವರ್ಷ ಬಳ್ಳಾರಿಯಲ್ಲಿ ಮೆದುಳು ಜ್ವರದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯನ್ನು ಕಾಣುತ್ತೇವೆ. ಮೆದುಳು ಜ್ವರ ಬಂದಾಗ ಹಂದಿಗಳ ಕಡೆಗೆ ಬೆರಳು ಮಾಡುತ್ತಾರೆ. ಆಗ ಮಹಾನಗರ ಪಾಲಿಕೆ ಸಭೆ ಕರೆದು ಹಂದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಹಂದಿ ಸಾಕಾಣಿಕೆದಾರರಿಗೆ ಡೆಡ್‌ಲೈನ್ ಕೊಡುತ್ತಾರೆ. ಆದರೆ, ಅದು ಕಟ್ಟುನಿಟ್ಟಾಗಿ ಜಾರಿ ಆಗುವುದಿಲ್ಲ. ಮತ್ತೆ ಹಂದಿಗಳ ಹಾವಳಿ ಹೆಚ್ಚಾಗುತ್ತದೆ.
 - ಜಗದೀಶ್, ಬಳ್ಳಾರಿ ನಾಗರಿಕ


-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.