ಬಳ್ಳಾರಿ

ಶಬ್ದಗಳ ಬಳಕೆಗೆ ಪರಿಸರ ಮುಖ್ಯ ಕಾರಣ: ಡಾ. ಡಿಸಿಲ್ವಾ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 16
ಭಾಷೆಯ ಆಳ ಅರ್ಥ ಮಾಡಿಕೊಳ್ಳದೆ ಮೇಲ್ನೋಟದ ಶಬ್ದಗಳ ಧ್ವನಿಗೆ ಅರ್ಥ ಬರುವುದಿಲ್ಲ. ಏಕೆಂದರೆ ಧ್ವನಿಗಳು ಯಾವೊಂದು ಮುಲಾಜಿಲ್ಲದೆ ನಡೆಯುವಂಥ ಶಬ್ದಗಳು. ಶಬ್ದಗಳ ಉಪಯೋಗಕ್ಕೆ ಪರಿಸರವು ಕಾರಣವಾಗುತ್ತದೆ ಎಂದು ಬಹುಭಾಷಾ ವಿದ್ವಾಂಸ ಡಾ. ವಿಲಿಯಂ ರಾಬರ್ಟ್ ಡಿಸಿಲ್ವಾ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡ ಭಾಷಾಧ್ಯಯನ ವಿಭಾಗದ ಕೆಎಲ್‌ಇ ಸಂಸ್ಥೆ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಷಾ ವಿಜ್ಞಾನ ಮತ್ತು ಇತರ ಜ್ಞಾನಶಿಸ್ತುಗಳು ಕುರಿತು ಅವರು ಉಪನ್ಯಾಸ ನೀಡಿದರು.
ಯಾರಿಂದಲೋ ಬಂದ ಶಬ್ದಗಳು, ಮಾತುಗಳಲ್ಲಿ ಹೇಗೆ ಹಾಸು ಹೊಕ್ಕಾಗುತ್ತವೆ. ನಂತರ ಕನ್ನಡವಾಗುತ್ತವೆ. ಪೂರ್ವಿಕರಾದ ತಂದೆ, ತಾಯಿ, ಅಕ್ಕ, ಅಣ್ಣ, ತಂಗಿ, ತಮ್ಮ, ಮಾವ, ಅತ್ತೆ, ಅತ್ತಿಗೆ ಇವರೆಲ್ಲ ಸೇರಿಕೊಂಡು ಬಾಯಿ ಮಾತಿನಲ್ಲಿ ಅಪ್ಪಟವಾದ ನಿತ್ಯ ಜೀವನಕ್ಕೆ ಉಪಯೋಗ ಬೀಳುವ ಮತ್ತು ಸರಿಯಾದ ಧ್ವನಿಯಲ್ಲಿ ಮಾತನಾಡುವಂಥ ಭಾಷೆ ಕಟ್ಟಿ ಕೊಟ್ಟಿದ್ದಾರೆ.
ಇದು ಸೃಜನಶೀಲ ಭಾಷೆಯಾಗಿ ತನ್ನತನವನ್ನು ಪಡೆಯುತ್ತದೆ. ಇಂದಿಗೂ ಈ ಭಾಷೆಗೆ ಪರ್ಯಾಯ ಅಂತ ಇಲ್ಲ ಎಂದು ಹೇಳಿದರು.
ದ್ರಾವಿಡ ಭಾಷೆಗಳು, ಚಾಲ್ತಿಯಲ್ಲಿರುವ ಭಾಷೆಗಳು, ದಕ್ಷಿಣ ಏಷಿಯಾದ ಭಾಷೆಗಳು ಅಂದರೆ ಬುಡಕಟ್ಟು ಭಾಷೆಗಳನ್ನು ಆಧರಿಸಿಯೇ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ ಇಂದಿಗೂ ಕಾರ್ಯನಿರ್ವಹಿಸುತ್ತಿದೆ.
ಸಂಸ್ಕೃತ, ಪ್ರಾಕೃತ, ಅರೇಬಿಕ್, ಪರ್ಷಿಯನ್‌ನಂತಹ ಹಲವಾರು ಭಾಷೆಗಳಲ್ಲಿ, ಭಾಷೆ ಅದೇ ಇದ್ದರೂ ಬರಹ, ಸ್ಪೆಲ್ಲಿಂಗ್ ಮತ್ತು ಉಚ್ಛಾರ ಬೇರೆಯೇ ಆಗಿರುತ್ತದೆ. ಬರಹ ಇಲ್ಲದೆ ಭಾಷೆ ಇಲ್ಲ. ಬರಹ ಅಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಎಂದು ತಿಳಿಸಿದರು.
ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ. ಸಾಂಬಮೂರ್ತಿ ಮಾತನಾಡಿ, ಕನ್ನಡದ ಅಸ್ಮಿತೆ (ಚಹರೆ, ಐಡೆಂಟಿಟಿ)ಯನ್ನು ಉಳಿಸಿ ಬೆಳೆಸುವುದು ಮತ್ತು ಸಮಾಜಮುಖಿಯಾದ ಯೋಜನೆ ಹಮ್ಮಿಕೊಳ್ಳುವುದು ವಿಭಾಗದ ಉದ್ದೇಶವಾಗಿದೆ. ಭಾಷಾ ವಿಶ್ವಕೋಶಗಳು, ವಿವಿಧ ಪದಕೋಶಗಳು ಈ ಹಿನ್ನೆಲೆಯಲ್ಲಿ ಪ್ರಕಟವಾಗಿವೆ ಎಂದರು.
ಹಂಪಿ ಕನ್ನಡ ವಿವಿಯ ಡಾ. ಅಶೋಕಕುಮಾರ ರಂಜೇರೆ, ಡಾ. ಮೋಹನ ಕುಂಟಾರ್, ಡಾ. ಸುಬ್ಬಣ್ಣ ರೈ, ಸಿ. ವೆಂಕಟೇಶ್, ಡಾ. ಶೈಲಜಾ ಹಿರೇಮಠ, ಡಾ. ಎಂ. ಉಷಾ, ಡಾ. ಶಿವಾನಂದ ವಿರಕ್ತಮಠ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ. ಸಾಂಬಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿಭಾಗದ ಅಧ್ಯಾಪಕ ಡಾ. ಪಿ. ಮಹಾದೇವಯ್ಯ ವಂದಿಸಿದರು. ಸಂಶೋಧನ ವಿದ್ಯಾರ್ಥಿ ಎಚ್. ಹುಲುಗಪ್ಪ ನಿರೂಪಿಸಿದರು.

ಮತದಾನ ಗೌಪ್ಯತೆ ಕಾಪಾಡಿ
ಬಳ್ಳಾರಿ: ಯಾವುದೇ ಮತದಾರ ತನ್ನ ಮತದಾನದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿ. ಪೋಲಯ್ಯ ತಿಳಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಕೌಲ್ ಬಜಾರ್‌ನಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚೆಗೆ ಜರುಗಿದ ಚುನಾವಣಾ ಜಾಗೃತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಲಯದ ಸುಮಾರು 80 ವಿದ್ಯಾರ್ಥಿನಿಯರಿಗೆ ಚುನಾವಣೆ ಮಹತ್ವ, ಹೊಸ ಮತದಾರರ ಸೇರ್ಪಡೆ ಕುರಿತು ಮಾಹಿತಿ ನೀಡಿದರು. ಮತದಾರರು ತಾವು ಯಾರಿಗೆ ಮತ ಚಲಾಯಿಸಲಿದ್ದೇವೆ ಹಾಗೂ ಚಲಾಯಿಸಿದ್ದೇವೆ ಎನ್ನುವ ಬಗ್ಗೆ ಯಾರಿಗೂ ಹೇಳದೆ ಗೌಪ್ಯವಾಗಿಡಬೇಕು. ಜನವರಿ 2014ಕ್ಕೆ 18 ವರ್ಷ ವಯೋವುತಿ ಪೂರ್ಣಗೊಂಡ ವಿದ್ಯಾರ್ಥಿನಿಯರು ಹತ್ತಿರದ ಮತಗಟ್ಟೆ ಅಧಿಕಾರಿ (ಬಿಎಲ್‌ಒ)ಯನ್ನು ಭೇಟಿ ಮಾಡಿ ಮಾ. 16ರೊಳಗೆ ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ತಮ್ಮ ನೆರೆ-ಹೊರೆಯಲ್ಲಿರುವ ಅರ್ಹ ಮತದಾರರಿಗೆ ಮತದಾನ ಕಾರ್ಯದಿಂದ ಹಿಂದೆ ಸರಿಯದೆ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿ ಹೇಳಬೇಕೆಂದು ಅವರು ತಿಳಿಸಿದರು. ನಿಲಯ ಮೇಲ್ವಿಚಾರಕರು, ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಮತದಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.