8 ಶಂಕಿತ ಜ್ವರ ಪ್ರಕರಣ ಪತ್ತೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 3
ತಾಲೂಕಿನ ಬೀರಬ್ಬಿ ಗ್ರಾಮದ ಹಳೆ ಪ್ಲಾಟ್ನಲ್ಲಿ ಶಂಕಿತ ಡೆಂಘಿ ಜ್ವರದ 8 ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
15-16 ದಿನಗಳಿಂದ ಈವರೆಗೆ ದಾಖಲೆಯ ಪ್ರಕಾರ 23 ಜನ ಜ್ವರದಿಂದ ಬಳಲುತ್ತಿದ್ದಾರೆ. ಇದರಲ್ಲಿ 8 ಶಂಕಿತ ಡೆಂಘೀ ಜ್ವರ ಪ್ರಕರಣ ಪತ್ತೆಯಾಗಿವೆ. ಗ್ರಾಮದ ಮಲ್ಲಪ್ಪ, ಫಕ್ಕೀರಪ್ಪ, ಜಯಪ್ಪ, ಶಹನಾಜಬೀ, ದಿಳ್ಳೆಪ್ಪ, ಜಾಫರ್, ಸಂತೋಷ, ದಾದಾಪೀರ್ ಶಂಕಿತ ಡೆಂಘೀ ಜ್ವರ ಪೀಡಿತರಾಗಿದ್ದಾರೆ. ಉಳಿದಂತೆ 15 ಜನರಿಗೆ ಸಾಮಾನ್ಯ ವೈರಲ್ ಜ್ವರ ಕಾಣಿಸಿಕೊಂಡು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಜ್ವರ ಪೀಡಿತರು ಹರಪನಹಳ್ಳಿ ಹಾಗೂ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಜಯಪ್ಪನವರು ಹಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆ ಪ್ರಯೋಗಾಲಯದ ವರದಿ ಪ್ರಕಾರ 8 ಜನರಿಗೆ ಡೆಂಘೀ ಜ್ವರ ಪಾಸಿಟಿವ್ ಸೂಚನೆಗಳಿವೆ ಎಂಬ ಮಾಹಿತಿ ಲಭ್ಯವಾಗಿವೆ.
ಆದರೆ ಈ ವರದಿಯನ್ನು ವೈದ್ಯಾಧಿಕಾರಿಗಳು ತಳ್ಳಿ ಹಾಕಿದ್ದು, 8 ಜನರಲ್ಲಿ 4 ರೋಗಿಗಳನ್ನು ಮಾತ್ರ ಗುರುತಿಸಲಾಗಿದೆ. ಇವರ ರಕ್ತ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಡೆಂಘೀ ಜ್ವರ ಎಂದು ಖಚಿತಪಡಿಸುವ ಭರವಸೆಯನ್ನು ವೈದ್ಯಾಧಿಕಾರಿ ಡಾ. ಚಂದ್ರಶೇಖರ ಚುಂಗಡಿ ಹಾಗೂ ಡಾ. ಶಿವನಾಗಪ್ಪ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಡೆಂಘೀ ಕುರಿತು ಪಾಸಿಟಿವ್ ವರದಿ ಬಂದಿದೆ, ಇದನ್ನು ಸರ್ಕಾರಿ ವೈದ್ಯರು ತಳ್ಳಿ ಹಾಕುತ್ತಿರುವುದು ನೋಡಿದರೆ ಯಾವುದನ್ನು ನಂಬಬೇಕೆಂಬ ಗೊಂದಲದಲ್ಲಿದ್ದೇವೆ ಎಂದು ಜ್ವರ ಪೀಡಿತ ದಾದಾಪೀರ್ ವಾದ.
ಕಲುಷಿತ ನೀರು ತುಂಬಿರುವ ಚರಂಡಿ ಸ್ವಚ್ಛತೆ, ಫಾಗಿಂಗ್ ಸೇರಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಪತ್ರ ಬರೆದಿದೆ. ಪಂಚಾಯಿತಿ ಆಡಳಿತ ಗ್ರಾಮದಲ್ಲಿ ಒಂದು ಸಲ ಮಾತ್ರ ಫಾಗಿಂಗ್ ಮಾಡಿದೆ. ಚರಂಡಿ ಸ್ವಚ್ಛತೆ ಮಾಡಲಾಗಿದ್ದು, ಕುಡಿವ ನೀರಿನ ಟ್ಯಾಂಕ್ ಕ್ಲೋರಿನೇಶನ್ ಹಾಕಿದೆ ಹಾಗೂ ಕುಡಿವ ನೀರಿನ ನಳಗಳ ಮುಚ್ಚದಿರುವುದರಿಂದ ಕಲುಷಿತ ನೀರು ಪೈಪ್ಲೈನ್ ಮೂಲಕ ಪೂರೈಕೆಯಾಗುತ್ತಿದೆ. ಇದರಿಂದ ಮತ್ತೆ ಸಾಂಕ್ರಾಮಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಗ್ರಾಮದಲ್ಲಿ ಚರಂಡಿಗಳು ತುಂಬಿ ಹರಿಯುತ್ತಿವೆ. ಇದೀಗ ಡೆಂಘೀ ಪತ್ತೆಯ ನಂತರ ಪಂಚಾಯಿತಿ ಆಡಳಿತ ಎಚ್ಚೆತ್ತುಕೊಂಡು ಜನರ ಜೀವದ ಜತೆ ಪಂಚಾಯಿತಿ ಆಡಳಿತ ಚೆಲ್ಲಾಟವಾಡುತ್ತಿದೆ. ಕೂಡಲೇ ವಾರದಲ್ಲಿ ಕನಿಷ್ಠ 3-4 ಬಾರಿ ಫಾಗಿಂಗ್ ಮಾಡುವಂತೆ ಎಸ್ಯುಸಿಐ ಸಂಚಾಲಕ ರಹಮತ್ ಬೀರಬ್ಬಿ ಆಗ್ರಹಿಸಿದ್ದಾರೆ.
1309 ಮಂದಿ ರಕ್ತ ಮಾದರಿ ತಪಾಸಣೆ
ಈಗಾಗಲೇ ಜಿಲ್ಲಾ ಪರಿವೀಕ್ಷಣ ತಂಡ ಗ್ರಾಮಕ್ಕೆ ಚಿಕಿತ್ಸೆ ಸೇವಾ ಕೇಂದ್ರ ಆರಂಭಿಸಿದೆ. 6 ಜನರ ರಕ್ತ ಲೇಪನವನ್ನು ತೆಗೆದುಕೊಂಡು ಹೋಗಿದ್ದಾರೆ.
ವರದಿ ನಿರೀಕ್ಷೆಯಲ್ಲಿದ್ದೇವೆ, ಗ್ರಾಮದ 274 ಮನೆಗಳ 1309 ಜನರ ರಕ್ತ ತಪಾಸಣೆ ನಡೆಸಿದೆ. ಗ್ರಾಮದ ತುಂಬೆಲ್ಲಾ ಲಾರ್ವಾ ಸರ್ವೇ ಮಾಡಲಾಗಿದೆ. ಹಳೆ ಪ್ಲಾಟ್ನಲ್ಲಿ 4, ಹೊರ ವಲಯದಲ್ಲಿ 15 ಕಡೆ ಪಾಜಿಟಿವ್ ಸೂಚನೆಗಳು ಕಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

