ಅಕ್ರಮ ಮರಳಿಗಿಲ್ಲ ಬ್ರೇಕ್
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 9
ತಾಲೂಕಿನ ತುಂಗಭದ್ರಾ ನದಿಯಲ್ಲಿ ಯಾರು ಎಷ್ಟು ಬೇಕಾದರೂ ಮರಳು ಲೂಟಿ ಮಾಡಬಹುದು. ಅತ್ತ ಡಿಸಿ ಮೌನ ವಹಿಸಿದ್ದು, ಇತ್ತ ಅಕ್ರಮ ಮರಳು ಸಾಗಾಟಕ್ಕೆ ಆಹ್ವಾನ ಎಂಬಂತಿದೆ.
ಆರಂಭದಲ್ಲಿ ಅಕ್ರಮಗಳ ಬಗ್ಗೆ ಅಬ್ಬರಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಸ್ವಕ್ಷೇತ್ರ ಹೂವಿನಹಡಗಲಿ ತಾಲೂಕಿನ ತುಂಗಭದ್ರಾ ನದಿ ತೀರದ ಹರವಿ, ಮೈಲಾರ, ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ, ಮಕರಬ್ಬಿ, ಹೊನ್ನೂರು, ನವಲಿ, ಮದಲಗಟ್ಟಿ ಗ್ರಾಮಗಳಲ್ಲಿ ಹಗಲು- ರಾತ್ರಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಮೇಲಧಿಕಾರಿಗಳ ಆದೇಶದಂತೆ ನೆಪ ಮಾತ್ರಕ್ಕೆ ದಾಳಿ ಮಾಡಿ ತದನಂತರ ಅಲ್ಪಸ್ವಲ್ಪ ದಂಡ ಹಾಕಿ ಕೈ ಬಿಡುವ ದಂಧೆ ಮುಂದುವರಿದಿದೆ.
33 ಮರಳಿನ ಬ್ಲಾಕ್
ತಾಲೂಕಿನ ಹರವಿ-8, ಹಿರೇಬನ್ನಿಮಟ್ಟಿ-19, ಹೊನ್ನೂರು-ನವಲಿ 6 ಸೇರಿದಂತೆ ಒಟ್ಟು 33 ಬ್ಲಾಕ್ಗಳಿದ್ದು, ಇದರಲ್ಲಿ ಹೊನ್ನೂರು-ನವಲಿ ಬ್ಲಾಕ್ಗಳಿಗೆ ಟೆಂಡರ್ ಮುಗಿದು 3-4 ತಿಂಗಳು ಕಳೆದಿದ್ದು, ಸರ್ಕಾರಕ್ಕೆ ಲಕ್ಷಾಂತರ ರು. ಆದಾಯ ಸಂಗ್ರಹವಾಗಿದೆ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ನದಿಯಲ್ಲಿನ ಮರಳು ಲೂಟಿಯಾದ ಮೇಲೆ ಈಗ ಸರ್ಕಾರಿ ಸ್ಟಾಕ್ಯಾರ್ಡ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಆದೇಶಿಸಿರುವುದು ಅಕ್ರಮಕ್ಕೆ ಎಡೆ ಮಾಡಿ ಕೊಟ್ಟಿದೆ ಎಂಬ ದೂರು ಕೇಳಿ ಬರುತ್ತಿದೆ.
ನವಲಿ-ಹೊನ್ನೂರು ಬ್ಲಾಕ್ಗಳಲ್ಲಿನ ಮರಳನ್ನು ಹೊನ್ನೂರು ಸರ್ಕಾರಿ ಸ್ಟಾಕ್ಯಾರ್ಡ್ಗೆ ತಂದು ಹಾಕಲು ಟೆಂಡರ್ ಆಗಿದೆ. ಆದರೆ ಒಂದೂ ಲಾರಿ ಮರಳು ಸಂಗ್ರಹವಾಗುತ್ತಿಲ್ಲ. ನದಿಯಲ್ಲಿನ ಮರಳನ್ನು ಯಾರ ಭಯ ಇಲ್ಲದೆ ಹಾಡಹಗಲೇ ಪುಡಿ ರಾಜಕಾರಣಿಗಳು ಲೂಟಿ ಹೊಡೆಯುತ್ತಿದ್ದಾರೆ.
ನಿದ್ದೆಗೆ ಜಾರಿದ ಟಾಸ್ಕ್ಫೋರ್ಸ್
ತಾಲೂಕಿನ ಮದಲಗಟ್ಟಿ ಬಳಿ ಸೇತುವೆಯಿಂದ 1 ಕಿ.ಮೀ ದೂರ ನಿಷೇಧಿತ ಸ್ಥಳ, ಆದರೆ ಮುಂಡರಗಿ ತಾಲೂಕಿನ ಪ್ರಭಾವಿ ವ್ಯಕ್ತಿಗಳ ತಂಡ ಹಾಗೂ ಇಲ್ಲಿನ ಪ್ರಭಾವಿಗಳ ತಂಡಗಳು ಸೇರಿಕೊಂಡು ಸೇತುವೆಯಿಂದ 100 ಮೀಟರ್ ಅಂತರದಲ್ಲೇ ಮರಳು ದಂಧೆ ನಡೆಸುತ್ತಿದ್ದಾರೆ. ನದಿ ಪಕ್ಕದ ನೀಲಗಿರಿ ಅರಣ್ಯ ತೋಪಿನಲ್ಲೆ ಅಕ್ರಮ ಮರಳು ಸಾಗಾಣೆಯಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿ ಮೌನವಹಿಸಿದ್ದಾರೆ. ಇತ್ತ ಅಕ್ರಮಗಳನ್ನು ತಡೆಯಲು ಟಾಸ್ಕ್ ಫೋರ್ಸ್ ಸಮಿತಿ ಇದ್ದರೂ ಕಣ್ಮುಂಚಿಕೊಂಡಿದೆ.
ಸರ್ಕಾರಿ ಸ್ಟಾಕ್ಯಾರ್ಡ್ ಹಾಗೂ ನದಿ ತೀರದ ಮರಳು ಲೂಟಿ ಮಾಡಲು ಸಿಂಡಿಕೇಟ್ ತಂಡವನ್ನು ರಚನೆ ಮಾಡಿಕೊಂಡಿದ್ದಾರೆ. ಯಾರೇ ಮರಳು ಸಾಗಾಟ ಮಾಡಬೇಕಾದರೇ ಇವರ ಅನುಮತಿ ಕಡ್ಡಾಯ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೆ ಬೆಂಗಾವಲಾಗಿ ನಿಂತಿರುವುದು ದುರಂತ.
ಎಲ್ಲಿದೆ ಹೊಸ ಮರಳು ನೀತಿ
ಈ ಹಿಂದೆ ಡಿಸಿ ಹೊಸ ಮರಳು ನೀತಿ ಅನ್ವಯ ನೀತಿ ನಿಯಮಗಳ ಪಾಲನೆ ಕಡ್ಡಾಯವೆಂದು ಹೇಳುತ್ತಾ, ಬೊಗಸೆ ಮರಳು ಕೂಡಾ ಸ್ಟಾಕ್ಯಾರ್ಡ್ನಲ್ಲಿ ಸಂಗ್ರಹವಾಗಲು ಬಿಡಲಿಲ್ಲ. ಸಿಸಿ ಕ್ಯಾಮೆರಾ, ಅಗತ್ಯ ಸಿಬ್ಬಂದಿ ನೇಮಕದ ನಂತರವೇ ಆರಂಭ ಎಂದು ಹೇಳುತ್ತಿದ್ದವರಿಗೆ ಮರಳು ಹಗಲು ಲೂಟಿಯಾದರೂ ಜಿಲ್ಲಾಧಿಕಾರಿಗಳ ಮೌನ ಹಿಂದಿನ ಮರ್ಮವೇನು? ಸ್ಟಾಕ್ಯಾರ್ಡ್ನಲ್ಲಿ ಈವರೆಗೂ ನೆಪ ಮಾತ್ರಕ್ಕೆ ಸಿಸಿ ಕ್ಯಾಮೆರಾಗಳಿವೆ. ಸಿಬ್ಬಂದಿಗಳಿಲ್ಲ, ಇಲ್ಲಿ ಪುಡಿ ರಾಜಕಾರಣಗಳದ್ದೇ ಕಾರುಬಾರು. ಅವರು ಹೇಳಿದವರಿಗೆ ಮಾತ್ರ ಮರಳು ಎಂಬ ಪರಿಸ್ಥಿತಿ ಇದೆ.
ಟಾಸ್ಕ್ಫೋರ್ಸ್ ಎಲ್ಲಿದೆ?
ಹೊಸ ಮರಳು ನೀತಿ ಪ್ರಕಾರ ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ, ಅರಣ್ಯ ಇಲಾಖೆ ಅಧಿಕಾರಿಗಳು ಟಾಸ್ಕ್ಫೋರ್ಸ್ ಸಮಿತಿಯಲ್ಲಿದ್ದಾರೆ. ಅಕ್ರಮ ಮರಳು ಸಾಗಾಟವನ್ನು ತಡೆಯಲು ಯಾರು ತಯಾರಿಲ್ಲ. ಒಬ್ಬರ ಮೇಲೊಬ್ಬರು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರಿ ಗೆಜೆಟ್ನಲ್ಲಿ ಇಂಥವರೇ ಇಂತಹ ಕೆಲಸ ಮಾಡಬೇಕೆಂಬ ನಿಯಮಗಳಿಲ್ಲ. ಎಲ್ಲರೂ ಒಟ್ಟಾಗಿ ಅಕ್ರಮ ತಡೆಯಬೇಕೆಂಬ ನಿಯಮವನ್ನು ಗಾಳಿಗೆ ತೂರಿದ್ದಾರೆ. ಸಾಕಷ್ಟು ಅಕ್ರಮ ಮರಳು ದಂಧೆ ನಡೆಯುತ್ತಿದ್ದರೂ ಜಿಲ್ಲಾಧಿಕಾರಿಗಳು ಒಮ್ಮೆಯೂ ದಾಳಿ ಮಾಡಿಲ್ಲ. ನದಿ ತೀರದ ವಾಸ್ತವ ಪರಿಸ್ಥಿತಿ ಅರಿವ ಗೋಜಿಗೆ ಹೋಗಿಲ್ಲ. ಇನ್ನು ಮುಂದಾದರೂ ಡಿಸಿ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

