8 ಸೈಬರ್ ಕ್ರೈಂ: ರು. 8.26 ಲಕ್ಷ ನಾಮ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 11
ಜನರಲ್ಲಿರುವ ಅತಿ ಆಸೆಯೇ ಸೈಬರ್ ಕ್ರೈಂ ಮೂಲಕ ಜನರು ಮೋಸ ಹೋಗಿ ಹಣ ಕಳೆದುಕೊಳ್ಳಲು ಕಾರಣವಾಗಿದೆ. ನಮ್ಮ ಪೂರ್ವಜರ ಅತಿ ಆಸೆ ಗತಿಗೇಡು ಎನ್ನುವ ಗಾದೆ ಮಾತು ಇಂಥವರಿಗೆ ಸರಿಯಾಗಿ ಹೊಂದಾಣಿಕೆ ಆಗುತ್ತದೆ. ಎಸ್ಎಂಎಸ್, ಮೊಬೈಲ್ ಕರೆ, ಇಂಟರ್ನೆಟ್ ಟೆಲಿಫೋನ್ ಕರೆ, ಮೆಸೇಜ್ ಮೂಲಕ ಬಹುಮಾನ ಬಂದಿದೆ ಎಂದು ಹೇಳಿ ಹಣ ಲಪಟಾಯಿಸಿರುವ ಪ್ರಕರಣಗಳು 2012ರಿಂದ ಇಲ್ಲಿವರೆಗೆ ಬಳ್ಳಾರಿ ಜಿಲ್ಲೆಯಲ್ಲಿ 8 ಪ್ರಕರಣಗಳು ನಡೆದು, 8.26 ಲಕ್ಷ ಪಂಗನಾಮ ಹಾಕಿಸಿಕೊಂಡಿದ್ದಾರೆ.
ಮೊಬೈಲ್ನಲ್ಲಿ ಕರೆ, ಎಸ್ಎಂಎಸ್ ಆಧರಿಸಿ ದುಡ್ಡು ಗಳಿಸುವ ಮಾರ್ಗಕ್ಕೆ ಹೋಗಿ ಅದೆಷ್ಟೋ ಜನ ದುಡ್ಡು ಕಳೆದುಕೊಂಡ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಆದರೂ ಜನರ ಆಸೆ ಕೆಟ್ಟದ್ದು, ದುರಾಸೆಗೆ ಮನಸ್ಸು ಕೊಟ್ಟು, ದುಡ್ಡು ಕಳೆದುಕೊಳ್ಳುತ್ತಾರೆ. ಹೆಚ್ಚಾಗಿ ಅಕ್ಷರಸ್ಥರೇ ಇಂಥ ಮೋಸಕ್ಕೆ ಒಳಗಾಗುವುದು ಆತಂಕದ ಸಂಗತಿ.
ಹಣ ಲೂಟಿ ಸೈಬರ್ ಕ್ರೈಂ: ಮೊಬೈಲ್ಗೆ ಎಸ್ಎಂಎಸ್ ಕಳುಹಿಸಿ ಅಥವಾ ಕರೆ ಮಾಡಿ ನಿಮಗೆ ಬಹುಮಾನ ಬಂದಿದೆ. ನಿಮ್ಮ ಹಣ ಬೇಕಾದರೆ ಬ್ಯಾಂಕ್ ಖಾತೆ ತೆರೆದು, ಹಣ ಕಟ್ಟಿ ತಮ್ಮ ಖಾತೆಯೊಂದನ್ನು ನೀಡಿ, ಆ ಖಾತೆಗೆ ಹಣ ನೀಡಿ ಎಂದು ಹೇಳಿದಾಗ, ದುರಾಸೆಯಿಂದ ಖಾತೆಗೆ ಸಾವಿರಾರು ಹಣ ಹಾಕಿ ಕೈಯಲ್ಲಿದ್ದ ಹಣ ಕಳೆದುಕೊಳ್ಳುವುದು. ವಿದೇಶದಲ್ಲಿರುವವರು ದೇಶದಲ್ಲಿರುವ ಮಧ್ಯಸ್ಥಗಾರರ ಮೂಲಕ ಅಥವಾ ವಿದೇಶದಿಂದಲೇ ಕರೆ ಮಾಡಿ, ನೀವು ದೇಶದ ಬೇರೆ ಬೇರೆ ಕಡೆಗಳಲ್ಲಿ ವಿವಿಧ ಬ್ಯಾಂಕ್ಗಳಲ್ಲಿ ಖಾತೆ ತೆರೆಯರಿ, ನಿಮ್ಮ ಖಾತೆ ನಂಬರ್ ಕೊಡಿ, ಖಾತೆಯಲ್ಲಿ ಹಣದ ವ್ಯವಹಾರ ನಡೆಸಿ, ವ್ಯವಹಾರಕ್ಕೆ ಶೇ. 3ರಷ್ಟು ಕಮಿಷನ್ ಕೊಡುತ್ತೇವೆ ಎನ್ನುವ ಸೈಬರ್ ಕ್ರೈನಿಂದ ಜನತೆ ಎಚ್ಚರ ವಹಿಸುವುದು ಅವಶ್ಯ.
ಹಲವು ಮಾರ್ಗಗಳಿಂದ ಮೋಸ: ಎಲ್ಲ ಸಂದರ್ಭದಲ್ಲಿ ಕರೆ ಮಾಡುವುದಿಲ್ಲ, ಎಸ್ಎಂಎಸ್ ಹಾಕುತ್ತಾರೆ ಇಲ್ಲವೆ ಇಂಟರ್ನೆಟ್ ಟೆಲಿಫೋನ್ ಬಳಕೆ ಮಾಡುತ್ತಾರೆ. ಇದರ ಬಳಕೆಯಿಂದ ಕಾಲ್ ಬ್ಯಾಕ್ ಮಾಡುವುದಕ್ಕೆ ಬರುವುದಿಲ್ಲ. ಅದು ನಾಲ್ಕು ನಂಬರ್ಗಳಿಂದ ಮೊಬೈಲ್ಗೆ ಕರೆ ಬರುತ್ತದೆ. ಯಾವುದಾದರೂ ಪ್ರತಿಷ್ಠಿತ ಕಂಪನಿ ಹೆಸರು ಹೇಳಿಕೊಂಡು ಕಾಲ್, ಎಸ್ಎಂಎಸ್ ಮಾಡುತ್ತಾರೆ. ನಿಮ್ಮ ಹೆಸರಿಗೆ ಬಹುಮಾನ ಬಂದಿದೆ ಎಂದು ಹೇಳಿ ಖೆಡ್ಡಾಕ್ಕೆ ಬಿಳಿಸುತ್ತಾರೆ.
ಹಣ ಕೀಳುವುದಕ್ಕೆ ಹೇಳುವ ನೆಪಗಳು: ಬಹುಮಾನ ಬಂದಿದೆ ಎಂದು ಹೇಳುತ್ತಾ, ಬಹುಮಾನ ಹಣ ಕೊಡಬೇಕಾದರೆ, ಪ್ರೊಸೆಸ್ಸಿಂಗ್ ಫೀಜ್, ಕಸ್ಟಮ್ ಬಿಡುಗಡೆ, ಅಕೌಂಟ್ ಓಪನ್ ಚಾರ್ಜ್, ಫಾರಿನ್ ಎಕ್ಸೆಂಜ್ ಟ್ರಾನ್ಸ್ಫರ್ ಚಾರ್ಜ್, ಆದಾಯ ತೆರಿಗೆ ಪಾವತಿ, ಕರೆನ್ಸಿ ಎಕ್ಚೆಂಜ್ ಹೆಸರಿನಲ್ಲಿಯೇ ಸಾರ್ವಜನಿಕರಿಂದ ಸೈಬರ್ ಕ್ರೈಂಗಳಲ್ಲಿ ಹಣ ವಸೂಲಿ ಮಾಡುತ್ತಾರೆ. ಇಂಥ ಕಾಲ್ಗಳು, ಎಸ್ಎಂಎಸ್ ಬಗ್ಗೆ ಎಚ್ಚರಿಕೆ ಇರಲಿ. ಮೊಬೈಲ್ನಲ್ಲಿ ವಾಯಿಸ್ ಬದಲಾಯಿಸಿ ಮಾತನಾಡುವ ಪ್ರಸಂಗಗಳು ಹೆಚ್ಚು.
ಪಾಕಿಸ್ಥಾನ, ನೈಜಿರಿಯಾದಿಂದ ಮೋಸ: ಮೊಬೈಲ್ಗೆ ಬರುವ ಕರೆ 92ನಿಂದ ಆರಂಭವಾದರೆ ಅದು ಪಾಕಿಸ್ಥಾನದ ಕೋಡ್ ನಂಬರ್. ಈ ಕರೆಗಳು ಬಂದು ಬಹುಮಾನದ ನೆಪ ಹೇಳಿದರೆ ನಂಬಬಾರದು. ಉದಾಹರಣೆಗೆ 2013ರಲ್ಲಿ ಜು. 16ರಂದು ಬಳ್ಳಾರಿ ನಿವಾಸಿ ಜಯಲಕ್ಷ್ಮಿ ಅವರಿಗೆ 923457672399 ನಂಬರ್ನಿಂದ ಪಾಕಿಸ್ಥಾನದಿಂದ ಕರೆ ಮಾಡಿ ಕೌನ್ ಬನೇಗಾ ಕರೋಡ್ ಪತಿ ಬೆಸ್ಟ್ ಡೀಲ್ನಲ್ಲಿ ರು. 25 ಲಕ್ಷ ಬಹುಮಾನ ಬಂದಿದೆ. ರಾಜೇಸ್ ಸಿಂಗ್ ನಂಬರ್ಗೆ ಹಣ ಹಾಕಿ ಎಂದು ಖಾತೆ ನಂಬರ್ ಕೊಟ್ಟಿದ್ದಾರೆ ಅದಕ್ಕೆ ರು. 25 ಸಾವಿರ ಹಾಕಿದ್ದರೆ, ಎಸ್.ಕೆ. ಹುಸೇನ್ ಎಂಬ ಅಕೌಂಟ್ ನಂಬರ್ ಕೊಟ್ಟು ರು. 30 ಸಾವಿರ ಹಾಕಿದ್ದಾರೆ. ನದೀಮ್ ಅಕೌಂಟ್ ನಂಬರ್ ಕೊಟ್ಟು ರು. 25 ಸಾವಿರ ಹಾಕಿ ಹೀಗೆ ರು. 85 ಸಾವಿರ ಖಾತೆಗೆ ತುಂಬಿದ್ದಾರೆ. ಆದರೆ, ಕೊಟ್ಟ ಹಣ ಬಾರದಿರುವುದು ಕೊನೆಗೆ ಪೊಲೀಸ್ ಮೋರೆ ಹೋಗಿದ್ದಾರೆ. ಭಾರತದಲ್ಲಿರುವ ನೈಜಿರಿಯಾದವರು ಭಾರತೀಯ ಕೋಡ್ 91ರಿಂದಲೇ ಕರೆ ಮಾಡಿ, ಇಂಥ ಮೋಸ ಮಾಡುವ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಕರೆ ಮಾಡುವ ಮೊದಲು ಎಚ್ಚರದಿಂದಿರಬೇಕು.
ಮೋಸ ಮಾಡುವವರು ಸೇಫ್: ಇಂಥ ದಂಧೆ ಮಾಡುವವರು ಎಲ್ಲ ಸಂದರ್ಭದಲ್ಲಿ ಸೇಫ್ ಆಗಿರುತ್ತಾರೆ. ಇಲ್ಲಿನ ಜನರಿಗೆ ಶೇ. 3ರಷ್ಟು ಖಾತೆಯಲ್ಲಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಕಮಿಷನ್ ನೀಡುತ್ತೇವೆಂದು ಆಸೆ ತೋರಿಸಿ, ಆಸೆಗೆ ದೇಶದ ಹಲವು ರಾಜ್ಯಗಳು, ರಾಜ್ಯದ ಕೆಲವು ಜಿಲ್ಲೆಗಳಲ್ಲಿಯೇ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಖಾತೆಗಳನ್ನು ಓಪನ್ ಮಾಡಿ, ಖಾತೆ ನಂಬರ್ ಸೇರಿದಂತೆ ಎಲ್ಲ ಮಾಹಿತಿಯನ್ನು ಅವರಿಗೆ ಕೊಡುತ್ತಾರೆ. ಬಹುಮಾನ ಬಂದಿದೆ ಹಣ ತುಂಬಿ ಎಂದು ಹೇಳಿ ಎಸ್ಎಂಎಸ್, ಮೊಬೈಲ್ ಕರೆ ಮಾಡುವವರು ಇಲ್ಲಿನ ಜನರು ಓಪನ್ ಮಾಡಿರುವ ಖಾತೆಗಳ ನಂಬರ್ ಕೊಟ್ಟು ಹಣ ತುಂಬುವಂತೆ ಹೇಳುತ್ತಾರೆ. ಹಣ ತುಂಬಿದ ಮೇಲೆ ಖಾತೆ ಹೊಂದಿರುವವರಿಗೆ ಶೇ. 3ರಷ್ಟು ಕಮಿಷನ್ ಕೊಟ್ಟು, ಇವರಿಗೆ ಕಮಿಷನ್ ಕೊಟ್ಟಿದ್ದೇವೆಂದು ಹೇಳುತ್ತಾರೆ. ಆದರೆ, ಹಣ ತುಂಬಿದ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದಾಗ, ಬ್ಯಾಂಕ್ ಖಾತೆ ಹೊಂದಿರುವ ಭಾರತೀಯ ವ್ಯಕ್ತಿಯೇ ಸಿಕ್ಕಿ ಬಿಳುತ್ತಾನೆ ಹೊರತು, ವಿದೇಶದಲ್ಲಿ ಕುಳಿತು ಹಣ ಪಡೆಯುವ ವ್ಯಕ್ತಿ ಸೇಫ್ ಆಗುವ ಪ್ರಸಂಗಗಳು ಹೆಚ್ಚು. ವಿದೇಶದಲ್ಲಿ ಕುಳಿತುಕೊಂಡು ರು. 10ರಿಂದ ರು. 50 ಸಾವಿರ ಮೋಸ ಮಾಡುವವರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆಗೆ ವಿದೇಶಕ್ಕೆ ಹೋಗಿ ಬರುವುದು ತೀರಾ ಕಷ್ಟ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

