ವಿಪ ಸ್ಥಾನಕ್ಕೆ ಲಾಬಿ
ಬಳ್ಳಾರಿ: ಮೀಸಲು ಕ್ಷೇತ್ರಗಳಲ್ಲಿರುವ ಮುಖಂಡರು ತಮ್ಮರಾಜಕೀಯ ಅಸ್ತಿತ್ವಕ್ಕಾಗಿ ವಿಧಾನ ಪರಿಷತ್ ಸ್ಥಾನದ ಲಾಬಿಗೆ ಮುಂದಾಗಿದ್ದಾರೆ.
ತಮ್ಮ ನೆಚ್ಚಿನ ನಾಯಕರು, ಪಕ್ಷಕ್ಕೆ ತಾವು ಮಾಡಿರುವ ಸೇವೆ, ತಮ್ಮ ಪ್ರತಿಷ್ಠೆ ಹಾಗೂ ಪ್ರಾಬಲ್ಯ ಮುಂದಿಟ್ಟುಕೊಂಡು ಜಿಲ್ಲೆಯ ಕಾಂಗ್ರೆಸ್ ಮುಖಂಡರು ವಿಧಾನ ಪರಿಷತ್ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಬಳ್ಳಾರಿಗೆ ಈ ಬಾರಿ ಸದಸ್ಯ ಸ್ಥಾನ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇದೆ. ಜಿಲ್ಲೆಯಲ್ಲಿ ಒಂದು ಲೋಕಸಭಾ ಹಾಗೂ 9 ವಿಧಾನಸಭಾ ಪೈಕಿ ಬಳ್ಳಾರಿ ನಗರ, ಹೊಸಪೇಟೆ ಹೊರತುಪಡಿಸಿ ಉಳಿದ ಏಳೂ ಮೀಸಲು. ಹೀಗಾಗಿ, ಇಲ್ಲಿನ ನಾಯಕರಿಗೆ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವುದು ತೀರಾ ಕಷ್ಟದ ಕೆಲಸ. ಹೀಗಾಗಿ, ಆಕಾಂಕ್ಷಿಗಳಲ್ಲಿ ಬಹುತೇಕರು ಪರಿಷತ್ ಸದಸ್ಯರಾಗಲು ಹವಣಿಸುವುದೇ ಹೆಚ್ಚು.
ರಾಜಕೀಯ ಭವಿಷ್ಯ: ವಿಧಾನ ಪರಿಷತ್ ಸ್ಥಾನ ಬಿಟ್ಟರೆ, ಮುಂದಿನ ಐದು ವರ್ಷಗಳ ಅವಧಿಯಲ್ಲಿ ರಾಜಕೀಯ ಸ್ಥಾನಮಾನ ಸಿಗುವ ಅವಕಾಶಗಳು ಇಲ್ಲ ಎನ್ನುವಷ್ಟು ವಿರಳ. ಹೀಗಾಗಿ ಶತಾಯ ಗತಾಯ ಪರಿಷತ್ ಸ್ಥಾನ ಗಿಟ್ಟಿಸಿಕೊಂಡರೆ ಒಳಿತಲ್ಲವೇ ಎಂದು ಕಾಂಗ್ರೆಸ್ ಮುಖಂಡರು ಸದ್ದಿಲ್ಲದೆ ಲಾಬಿ ನಡೆಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಆಕಾಂಕ್ಷಿಗಳು: ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದರಾದ ಕೆ.ಸಿ. ಕೊಂಡಯ್ಯ ಹಾಗೂ ಕೋಳೂರು ಬಸವನಗೌಡ, ಕಾಂಗ್ರೆಸ್ ನಗರ ಘಟಕದ ಜಿಲ್ಲಾಧ್ಯಕ್ಷ ಜೆ.ಎಸ್. ಆಂಜನೇಯಲು, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಯು. ಭೂಪತಿ, ಮುಖಂಡ ಅಬ್ದುಲ್ ವಹಾಬ್ ಮುಂತಾದವರು ಪರಿಷತ್ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಪರಿಷತ್ ಸದಸ್ಯ ಸ್ಥಾನಕ್ಕೆ ಪ್ರತಿಸ್ಪರ್ಧಿಗಳೇ ಅಡ್ಡಗಾಲಾಗುವ ಸಾಧ್ಯತೆ ಇರುವುದರಿಂದ ಎಲ್ಲರೂ ತೀವ್ರ ಪ್ರಯತ್ನ ನಡೆಸಿದ್ದಾರೆ.
9 ಸ್ಥಾನ ಖಾಲಿ: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಚುನಾವಣೆಗೆ ನಡೆಯಲಿದ್ದು, ಕಾಂಗ್ರೆಸ್ನಿಂದ 4 ಸದಸ್ಯರ ಆಯ್ಕೆಗೆ ಅವಕಾಶವಿದೆ. ಸರ್ಕಾರದ ವತಿಯಿಂದ ನೇಮಕಗೊಳ್ಳುವ ಐದು ಸ್ಥಾನಗಳೂ ಖಾಲಿಯಾಗುತ್ತಿವೆ. ಹೀಗಾಗಿ, ವಿಧಾನ ಪರಿಷತ್ನ ಒಟ್ಟು 9 ಸ್ಥಾನಗಳಿಗೆ ಚುನಾವಣೆ ಮತ್ತು ಆಯ್ಕೆ ನಡೆಯಲಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಪರಿಷತ್ಗೆ ಆಯ್ಕೆ ನಡೆಯಲಿದ್ದು, ಈಗಲೇ ಲಾಬಿಗೆ ಮುಂದಾಗಿದ್ದಾರೆ.
ವಿವಿಧ ರೀತಿಯ ಲಾಬಿ: ಬಳ್ಳಾರಿಯ ವಿಧಾನ ಪರಿಷತ್ ಸ್ಥಾನಾಕಾಂಕ್ಷಿಗಳಲ್ಲಿ ಕೆಲವರು ಎಐಸಿಸಿ ಉಪಾಧ್ಯಕ್ಷರಿಗೆ, ರಾಜ್ಯದ ಉಸ್ತುವಾರಿ ವಹಿಸಿದವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮ ನೆಚ್ಚಿನ ನಾಯಕರನ್ನು ಮುಂದಿಟ್ಟುಕೊಂಡು, ಪಕ್ಷದಲ್ಲಿ ಮಾಡಿರುವ ಸೇವೆ ನಮೂದಿಸಿ ಪ್ರಯತ್ನ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

