ಮೇಯರ್ ರಮೇಶ್ ಪದಗ್ರಹಣ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 23
ಬಳ್ಳಾರಿ ಮಹಾನಗರ ಪಾಲಿಕೆಯ ಮೊದಲನೇ ಅವಧಿಗೆ ಆಯ್ಕೆಯಾಗಿರುವ ಮೇಯರ್ ಎಂ. ರಮೇಶ್, ಉಪಮೇಯರ್ ಜೆ. ಜಯಲಲಿತಾ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಪಾಲಿಕೆಯ ಮಹಾಪೌರ ರಮೇಶ್ ಶುಕ್ರವಾರ ಬೆಳಗ್ಗೆ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸಿದರು. ಅನಂತರ ಪಾಲಿಕೆಯ ಆಯುಕ್ತ ಚಿಕ್ಕಣ್ಣ, ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ಮಾಜಿ ಸಚಿವರಾದ ಎಂ.ದಿವಾಕರಬಾಬು, ಅಲ್ಲಂ ವೀರಭದ್ರಪ್ಪ ಇತರೆ ಗಣ್ಯರು, ಪಕ್ಷದ ಹಿರಿಯ ಮುಖಂಡರು, ಮೇಯರ್-ಉಪಮೇಯರ್ಗೆ ಪುಷ್ಪಗುಚ್ಛ
ಸಲ್ಲಿಸಿ ಅಭಿನಂದನೆ ತಿಳಿಸಿದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ರಮೇಶ್, ಪಾಲಿಕೆ ಚುನಾವಣೆಗೂ ಮುನ್ನ ಪಕ್ಷದ ಹಿರಿಯ ಮುಖಂಡರು ಘೋಷಿಸಿದ್ದಂತೆ ಆಸ್ತಿ ತೆರಿಗೆಯನ್ನು ಅರ್ಧಕ್ಕೆ ಇಳಿಸಲಾಗುವುದು. ಜತೆಗೆ ಕುಡಿವ ನೀರಿನ ಕರವನ್ನೂ ಅರ್ಧಕ್ಕೆ ಇಳಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸುವುದಲ್ಲದೇ, ಈ ಕುರಿತು ಪಾಲಿಕೆಯ ಸಭೆಯಲ್ಲಿ ಠರಾವು ಪಾಸ್ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಬಳ್ಳಾರಿ ನಗರದ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಲಾಗುವುದು. ಪ್ರಸ್ತುತ 10 ದಿನಕ್ಕೆ ಪಡೆಯುತ್ತಿರುವ ಕುಡಿವ ನೀರನ್ನು 5 ದಿನಕ್ಕೊಮ್ಮೆ ಪೂರೈಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಪಾಲಿಕೆ ಎಲ್ಲ ವಾರ್ಡ್ಗಳಿಗೂ ಭೇಟಿ ನೀಡಿ, ಅಲ್ಲಿನ ಕುಡಿವ ನೀರು, ರಸ್ತೆ, ಶೌಚಾಲಯ, ಒಳಚರಂಡಿ, ಹೊರಚರಂಡಿ ವ್ಯವಸ್ಥೆ, ಬೀದಿ ದೀಪ ಸೇರಿದಂತೆ ಇನ್ನಿತರೆ ಸಮಸ್ಯೆ, ಕುಂದುಕೊರತೆಗಳ ಕುರಿತು ಪರಿಶೀಲಿಸಿ ತ್ವರಿತ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಸಿ.ಚಿಕ್ಕಣ್ಣ, ಉಪಮೇಯರ್ ಜೆ. ಜಯಲಲಿತಾ, ಸದಸ್ಯರಾದ ವೆಂಕಟರಮಣ, ಕೆರೆಕೋಡಪ್ಪ, ಸುಶೀಲಾಬಾಯಿ, ಉಮಾದೇವಿ, ಮುಖಂಡರಾದ ಡಿ.ಸೂರಿ, ಶಿವರಾಜ, ಸದಸ್ಯರು, ಕಾರ್ಯಕರ್ತರು ಇದ್ದರು.
ಕಾಂಗ್ರೆಸ್ ಸೋಲಿಗೆ ಮೋದಿ ಅಲೆ ಕಾರಣ
ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹೊಣೆಯನ್ನು ಮುಖಂಡರೆಲ್ಲರೂ ಸಾಮೂಹಿಕವಾಗಿ ಹೊರುತ್ತೇವೆ. ಕಾಂಗ್ರೆಸ್ ಹಿನ್ನಡೆಗೆ ಮೋದಿ ಅಲೆಯೇ ಕಾರಣವಾಯಿತು ಎಂದು ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ಮಾಜಿ ಸಚಿವರಾದ ದಿವಾಕರ ಬಾಬು, ಅಲ್ಲಂ ವೀರಭದ್ರಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಮಾತ್ರವಲ್ಲದೇ ಕರ್ನಾಟಕ, ರಾಷ್ಟ್ರದೆಲ್ಲೆಡೆ ಮೋದಿ ಪ್ರಭಾವ ಪಕ್ಷದ ಸೋಲಿಗೆ ಕಾರಣವಾಗಿದೆ. ಬಳ್ಳಾರಿಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು, ಮುಖಂಡರೆಲ್ಲರೂ ತಮ್ಮ ಶಕ್ತಿ ಮೀರಿ ಶ್ರಮಿಸಿದ್ದಾರೆ. ಹೀಗಾಗಿ ಸೋಲಿನಿಂದ ಪಕ್ಷದ ಯಾರೊಬ್ಬರನ್ನೂ ಪ್ರತ್ಯೇಕವಾಗಿ ದೂಷಿಸದೇ, ಎಲ್ಲರೂ ಜವಾಬ್ದಾರರಾಗಿದ್ದೇವೆ ಎಂದರು.
ಜನರನ್ನು ಮೋಡಿ ಮಾಡಿ ಮೋದಿ ಅಧಿಕಾರಕ್ಕೆ ಬಂದಿದ್ದಾರೆ. ನರೇಂದ್ರ ಮೋದಿ ಗಿಮಿಕ್ ರಾಜಕಾರಣಿ ಎಂದ ಮಾಜಿ ಸಚಿವ ದಿವಾಕರ ಬಾಬು, ಇವರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಈ ಹಿಂದೆ ಮಾಜಿ ಸಚಿವ ಜನಾರ್ದನರೆಡ್ಡಿ ಇದೇ ರೀತಿ ಗಿಮಿಕ್ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಇದೀಗ ನರೇಂದ್ರ ಮೋದಿ ಗಿಮಿಕ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

