ಇಂದಿನಿಂದ ಬಿಜಾಪುರದಲ್ಲಿ ಸಾಹಿತ್ಯದ ಮಹಾಪೂರ
ವಿನಾಯಕ ಭಟ್ಟ ಮೂರೂರು
ಬಿಜಾಪುರ: ಬಜೆಟ್ ಗಡಿಬಿಡಿಯಲ್ಲಿ ಸರ್ಕಾರ. ಚುನಾವಣೆ ಸಮೀಪಿಸುತ್ತಿರುವುದರಿಂದ ಕೊನೇ ಕ್ಷಣದ(ಮತ)ಗಳಿಕೆಯಲ್ಲಿ ನಿರತ ರಾಜಕಾರಣಿಗಳು. ರಸ್ತೆಗಳಲ್ಲಿನ ಹೊಂಡ ಮುಚ್ಚದ ಜಿಲ್ಲಾಡಳಿತ. ಜನರಲ್ಲೂ ಕಾಣದ ಸಾಹಿತ್ಯ ಸಮ್ಮೇಳನದ ಉತ್ಸಾಹ. ಇವೆಲ್ಲವನ್ನೂ ಮುಚ್ಚಿ ಮಸುಕಾಗಿಸುವಂಥ ಧೂಳು!!
ಅಪರೂಪಕ್ಕೊಮ್ಮೆ ಆಟೋದಲ್ಲಿ, ಕಿಲೋಮೀಟರ್ಗೊಂದು ಅಂಗಡಿಗಳಲ್ಲಿ ಕನ್ನಡದ ಧ್ವಜ. ವೃತ್ತಗಳಲ್ಲಿ ಬಾವುಟ ಮತ್ತು ಇತರ ಸಲಕರಣೆಗಳನ್ನು ಅಳವಡಿಸುವ ಕೆಲಸ ಸಂಜೆ ಹೊತ್ತಿಗೆ ಆರಂಭವಾಗಿದೆ. ಸಾಹಿತ್ಯ ಸಮ್ಮೇಳನ ನಡೆಯುವ ಪ್ರಮುಖ ವೇದಿಕೆ ಸೇರಿದಂತೆ ಸಮ್ಮೇಳನ ಸ್ಥಳದಲ್ಲಿ ತಯಾರಿಗಳು ಉತ್ತಮವಾಗಿದೆ. ಪುರುಷರಿಗೆ- ಮಹಿಳೆಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆ, ಪುಸ್ತಕದ ಮಳಿಗೆಗಳು ಎಲ್ಲವೂ ವ್ಯವಸ್ಥಿತ. ಮುಖ್ಯ ಸಭಾಂಗಣಕ್ಕೆ ಫ್ಯಾನ್ಗಳನ್ನು ಅಳವಡಿಸಿರುವುದು ಕನ್ನಡದ 'ಫ್ಯಾನ್'ಗಳಿಗೆ ಸಮಾಧಾನ ನೀಡುವ ವಿಷಯ. ವೇದಿಕೆ ನಿರ್ಮಾದಲ್ಲಿ ಉಂಟಾಗಿದ್ದ ಬಿರುಕುಗಳೆಲ್ಲ ಮುಚ್ಚಿ, ಅಂತಿಮ ಹಂತದ ಕೆಲಸಗಳು ಭರದಿಂದ ನಡೆಯುತ್ತಿವೆ.
ಬಿಜಾಪುರ ನಗರ ಯಾಕೋ 79ನೇ ಕನ್ನಡಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾದಂತೆ ಕಾಣುತ್ತಿಲ್ಲ. ಸಾಹಿತ್ಯ ಸಮ್ಮೇಳನ ಮೆರವಣಿಗೆ ಸಾಗುವ ಮತ್ತು ಇತರ 2-3 ರಸ್ತೆಗಳನ್ನು ಸುಂದರಗೊಳಿಸಿದ್ದು ಬಿಟ್ಟರೆ, ಉಳಿದ ರಸ್ತೆಗಳತ್ತ ಜಿಲ್ಲಾಡಳಿತ ಕಣ್ಣೆತ್ತಿಯೂ ನೋಡಿದಂತಿಲ್ಲ. ನಿಮಗೆ ಧೂಳಿನ ಅಲರ್ಜಿ ಇಲ್ಲದಿದ್ದರೆ, ಶ್ವಾಸಕೋಶ ತೊಂದರೆಗಳಿದ್ದರೆ ಖಂಡಿತ ಸಾಹಿತ್ಯ ಸಮ್ಮೇಳದತ್ತ ಬರುವ ವಿಚಾರ ಮಾಡಬೇಡಿ.
ಕೊನೇ ಕ್ಷಣದಲ್ಲಿ ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲೋ ಎಂಬಂತೆ ರಸ್ತೆಗಳನ್ನು ಗುಡಿಸುವ, ಹೊಂಡ ಮುಚ್ಚುವ ಕಾರ್ಯ ಅಲ್ಲಲ್ಲಿ ನಡೆಯುತ್ತಿದೆ.
ಬಿಜಾಪುರದ ಸಾಹಿತ್ಯ ಸಮ್ಮೇಳನ ಆರಂಭದಿಂದಲೂ ಕೊಂಚ ಅನುಮಾನ, ಸ್ವಲ್ಪ ಅಸಮಾಧಾನದ ನಡುವೆಯೇ ಸಾಗಿಬಂದಿದೆ. ಅದಿನ್ನೂ ನಿವಾರಣೆಯಾದಂತೆ ಕಾಣುತ್ತಿಲ್ಲ. ಸಮ್ಮೇಳನ ನಡೆಯುತ್ತದೆ ಎಂಬ ನಂಬಿಕೆ ಬಹುಶಃ ಜಿಲ್ಲಾಡಳಿತಕ್ಕೂ ಇರಲಿಲ್ಲ ಅನಿಸುತ್ತದೆ. ಬಹುಶಃ ಈ ಬಾರಿಯೂ ಸಮ್ಮೇಳನ ಮುಂದೂಡಲ್ಪಡುತ್ತದೆ ಎಂಬ ಅನುಮಾನದಿಂದಲೇ ಜಿಲ್ಲಾಡಳಿತ ದಿನದೂಡುತ್ತಿತ್ತು ಅನಿಸುತ್ತದೆ. ಅದೇ ನಿರಾಸಕ್ತಿ ಜನರನ್ನೂ ಅಂಟಿಕೊಂಡಂತಿದೆ. ಇದ್ದುದರಲ್ಲಿ ಬಿಜಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣವೇ ಎಲ್ಲರಿಗಿಂತ ಸುಂದವಾಗಿ ನಳನಳಿಸುತ್ತಿದೆ
ಸಾಹಿತ್ಯ ಸಮ್ಮೇಳನದ ಹಿಂದಿನ ದಿನವಾದ ಶುಕ್ರವಾರ ಮರುದಿನ ಸಾಹಿತ್ಯ ಸಮ್ಮೇಳನ ನಡೆಯುತ್ತದೆ ಎಂಬ ಸಂಭ್ರಮ, ಕನ್ನಡ ಜಾತ್ರೆಯ ಸಂಭ್ರಮ ಕಾಣುತ್ತಿಲ್ಲ.
ಸಾಹಿತ್ಯ ಸಮ್ಮೇಳದ ಕುರಿತು ಜನರಲ್ಲಿ ಆಸಕ್ತಿ ಮೂಡಿಸಿ, ಅವರ ಸಹಭಾಗಿತ್ವವನ್ನೂ ಪಡೆಯಲು, ಅವರನ್ನೂ ಈ ಸಂಭ್ರಮದಲ್ಲಿ ಭಾಗೀದಾರರನ್ನಾಗಿ ಮಾಡಲು ಜಿಲ್ಲಾಡಳಿತವೂ ಆಸಕ್ತಿ ತೋರಿದಂತಿಲ್ಲ. ಜನರೂ ಸಾಹಿತ್ಯ ಸಮ್ಮೇಳನದಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಿದಂತೆಯೂ ಕಾಣಲಿಲ್ಲ.
ರಾತ್ರಿ ಬೆಳಗಾಗುವುದರೊಳಗೆ ಜಿಲ್ಲಾಡಳಿತ ಏನಾದರೂ ಜಾದೂ ಮಾಡೀತೇ? ಎಂಬ ಕೊನೆಯ ನಿರೀಕ್ಷೆಯೊಂದು ಉಳಿದಿದೆ. ಇಷ್ಟೆಲ್ಲ ಕೊರೆತಗಳ ನಡುವೆಯೂ ಬಿಜಾಪುರ ಜಿಲ್ಲೆಯ ಜನ ಸಾಹಿತ್ಯ ಸಮ್ಮೇಳನಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಸಾಹಿತ್ಯ ಸಮ್ಮೇಳನದ ಯಶಸ್ಸು ನಿಂತಿದೆ. ಜನ ಮನಸ್ಸು ಮಾಡಿದರೆ ಜಿಲ್ಲಾಡಳಿತದ ನಿರಾಸಕ್ತಿಯ ಹೊರತಾಗಿಯೂ ಗೋಲಗುಂಬಜ್ ನಾಡಿನಲ್ಲಿ ಕನ್ನಡದ ಕಹಳೆ ಪ್ರತಿಧ್ವನಿಸುವಂತೆ ಮಾಡಬಲ್ಲ ತಾಕತ್ತಿರುವುದು ಜನರಿಗೆ ಮತ್ತು ಸಾಹಿತ್ಯಾಭಿಮಾನಿಗಳಿಗೆ ಮಾತ್ರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

