ಬಿಜಾಪುರ

'ಕಲಾವಿದರಿಗೆ ಜ್ಞಾನಪೀಠ ಮಾದರಿ ಪ್ರಶಸ್ತಿ ನೀಡಿ'

Published On :

ಸಮಾನಾಂತರ ವೇದಿಕೆ, ಬಿಜಾಪುರ:  ಮೇರು ಸಾಹಿತ್ಯಕ್ಕೆ ನೀಡಲಾಗುವ ಜ್ಞಾನಪೀಠ ಪ್ರಶಸ್ತಿಗೆ ಸಮಾನವಾಗಿ ಪ್ರದರ್ಶಕರಿಗೆ, ಕಲಾವಿದರಿಗೆ ಇದೇ ಮಾದರಿಯ ಪ್ರಶಸ್ತಿಗಳು ಸಿಗದಿರುವುದು ಬೇಸರದ ಸಂಗತಿ ಎಂದು ಗುಡಿಹಳ್ಳಿ ನಾಗರಾಜ ಹೇಳಿದರು.
ಶನಿವಾರ ಸಮಾನಾಂತರ ವೇದಿಕೆಯಲ್ಲಿ ರಂಗಭೂಮಿ ವಿಷಯ ಕುರಿತಾದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮತಾತನಾಡಿದ ಅವರು, ಪ್ರದರ್ಶಕರನ್ನು, ನಟ ಕಲಾವಿದರನ್ನು ಗುರುತಿಸಿ, ಸನ್ಮಾನಿಸುವ ಕಾರ್ಯವಾಗುತ್ತಿಲ್ಲ ಎಂದ ಅವರು, ಈ ವಿಷಯದಲ್ಲಿ ಪಕ್ಷಪಾತ ನಡೆಯುತ್ತಿದೆ ಎಂದು ನೇರವಾಗಿಯೇ ಆರೋಪಿಸಿದರು.
ಸಾಹಿತ್ಯ ಸಂಸ್ಕೃತಿಯ ವಿಷಯ ಬಂದಾಗ ರಂಗಭೂಮಿಯೂ ಇದಕ್ಕೆ ಹೊರತಾಗಿಲ್ಲ, ಹೀಗಿದ್ದಾಗ, ಸಾಹಿತಿಗಳಿಗೆ ಒಂದು ನ್ಯಾಯ, ರಂಗಭೂಮಿ ಕಲಾವಿದರಿಗೆ ಮತ್ತೊಂದು ನ್ಯಾಯವೇಕೆ ಎಂದು ಪ್ರಶ್ನಿಸಿದ ಅವರು, ಮುಂಬರುವ ದಿನಗಳಲ್ಲಿ ಪರಿಷತ್ ಆಗಲಿ, ಸರ್ಕಾರವಾಗಲಿ, ತನ್ನ ತಪ್ಪು ತಿದ್ದಿಕೊಳ್ಳಲಿ ಎಂದು ಆಶಿಸಿದರು.
ರಂಗಾಯಣಕ್ಕೆ ಆ ಕ್ಷೇತ್ರದಲ್ಲಿ ಪರಿಣಿತಿ ಪಡೆದ, ನಟ ನಿರ್ದೇಶಕರನ್ನು ಅಧ್ಯಕ್ಷರನ್ನಾಗಿ ಮಾಡಬೇಕು. ಇದರ ಹೊರತಾಗಿರುವ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದಲ್ಲಿ, ನೈಜ ಉದ್ದೇಶ ಈಡೇರದು ಎಂದರು.
ರಾಜ್ಯ ಸರ್ಕಾರ ಪ್ರಸ್ತುತ ಬಜೆಟ್‌ನಲ್ಲಿ ರಾಜ್ಯದ 26 ವೃತ್ತಿ ರಂಗಭೂಮಿ ಕಂಪನಿಗಳಿಗೆ ರು. 1 ಕೋಟಿ ಸಹಾಯಧನ ನೀಡಿದೆ. ಆದರೆ ಅನ್ಯ ಕ್ಷೇತ್ರಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಕ್ಕೆ ಹೋಲಿಕೆ ಮಾಡಿದಾಗ, ಇದು ನಗಣ್ಯ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕಿದೆ. ಇಲ್ಲವಾದಲ್ಲಿ ರಂಗಭೂಮಿ ಹಾಗೂ ಜನಪದ ಕಲಾವಿದರು ವಂಚಿತರಾಗುತ್ತಾರೆ. ಇದರ ವ್ಯತಿರೀಕ್ತ ಪರಿಣಾಮವಾಗಿ ಕಲೆ ನಶಿಸಿ ಹೋಗುತ್ತದೆ ಎಂದು ಆಂತಕ ವ್ಯಕ್ತ ಪಡಿಸಿದರು.
ಇಂದಿನ ದಿನಮಾನದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಹೊಸ ಬರಹಗಾರರು ಹುಟ್ಟಿಕೊಳ್ಳುತ್ತಿಲ್ಲ. ಇದೇ ವೇಳೆ ವೃತ್ತಿ ನಾಟಕ ಕಂಪನಿಗಳು ಸಹ ಹೊಸ ನಾಟಕಗಳ ಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿವೆ. ಈ ನಿಟ್ಟಿನಲ್ಲಿ ರಂಗಭೂಮಿಯನ್ನು ಜನಪ್ರೀಯಗೊಳಿಸಿ, ಉಳಿಸುವ ಕಾರ್ಯವಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಹ್ಯವ್ಯಾಸಿ ರಂಗಭೂಮಿಯ ಸಾಧನೆ ಮತ್ತು ಸವಾಲುಗಳು ವಿಷಯ ಕುರಿತಾಗಿ ಮಾತನಾಡಿದ ಸಿ.ಬಸವಲಿಂಗಯ್ಯ, ಟಿವಿ ಮಾಧ್ಯಮದ ಹಾವಳಿಯಿಂದಾಗಿ ಹವ್ಯಾಸಿ ರಂಗಭೂಮಿಯೂ ಹಿನ್ನಡೆ ಅನುಭವಿಸುತ್ತಿದೆ. ಪ್ರೇಕ್ಷಕರು ನಾಟಕಗಳಿಗೆ ಮೊದಲಿನಂತೆ ಆಸಕ್ತಿ ತೋರುತ್ತಿಲ್ಲ. ಪರಿಣಾಮವಾಗಿ ನಟರು, ನಿರ್ದೇಶಕರು. ಅಸ್ತಿತ್ವಕ್ಕಾಗಿ ಪರದಾಟಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಆಧುನಿಕ ನಾಟಕಕಾರರ ಮರು ಓದು ಕುರಿತು ಮಾತನಾಡಿದ ಉಮೇಶ, ಇಂದಿನ ನಾಟಕಗಳ ವಿಮರ್ಶೆಯೊಂದಿಗೆ ಸರಳೀಕೃತ ಮತ್ತು ಮನಮುಟ್ಟುವ ರೀತಿಯಲ್ಲಿ ಆಧುನಿಕ ಜನತೆಯ ಮನಸೆಳೆಯುವ ನಾಟಕ ರಚನೆಯಾಗಬೇಕಿದೆ. ಓದುಗನಿಗೆ ಸಹಜವಾಗಿ ಅರ್ಥವಾಗುವ ಹಾಗೂ ಅದಕ್ಕೆ ಪ್ರತಿಕ್ರಿಯಿಸುವ ರೀತಿಯಲ್ಲಿ ಆಧುನಿಕ ನಾಟಕಗಳು ಮೂಡಿಬರಬೇಕಿದೆ. ಈ ದಿಸೆಯಲ್ಲಿ ವಿಮರ್ಶಕರ ಪಾತ್ರ ಮಹತ್ವದ್ದಾಗಿದೆ ಎಂದವರು ಅಭಿಪ್ರಾಯಪಟ್ಟರು. ಡಾ ರಾಮಕೃಷ್ಣ ಮರಾಠೆ ಆಶಯ ನುಡಿ ವ್ಯಕ್ತಪಡಿಸಿದರು. ಡಾ.ಎಚ್.ಎಲ್.ಜನಾರ್ದನ ಸ್ವಾಗತಿಸಿದರು. ಡಾ ನಾಗರಾಜ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.