ಗಮನ ಸೆಳೆದ ಸರ್ವಾಧ್ಯಕ್ಷರ ಮೆರವಣಿಗೆ
ಬಿಜಾಪುರ: ಕಣ್ಣು ಹಾಯಿಸಿದಷ್ಟು ದೂರ ಕನ್ನಡಾಂಬೆಯ ಮಕ್ಕಳ ಬೃಹತ್ ಮೆರವಣಿಗೆ. ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂಬ ಉದ್ಘೋಷ. ಜಾನಪದ ಕಲಾ ತಂಡಗಳ ಸೊಬಗು, ಸೊಗಡು. ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್, ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಬ್ಯಾಂಡ್ನ ಮನಮೋಹಕ ಸಂಗೀತ, ಎಲ್ಲೆಲ್ಲೂ ಸಾಂಸ್ಕೃತಿಕ ಕಲರವ, ಬೀದಿ ಬೀದಿಯಲ್ಲಿ ಕನ್ನಡದ ಕಹಳೆ. ಇದೆಲ್ಲದರ ಮಂಚೂಣಿಯಲ್ಲಿ 90 ರ ಹಿರಿಯಜ್ಜ ಕನ್ನಡಿಗರ ಆತ್ಮಸಾಕ್ಷಿಯ ಪ್ರತೀಕವಾದ 79 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೋ. ಚನ್ನಬಸಪ್ಪ ಅವರನ್ನು ಹೊತ್ತ ಕನ್ನಡದ ತೇರು.....
ಶನಿವಾರ ಬಿಜಾಪುರದಲ್ಲಿ ಆರಂಭಗೊಂಡ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭವ್ಯ ಮೆರವಣಿಗೆ ಪ್ರಮುಖ ಆಕರ್ಷಣೆಗಳಿವು.
ಉರಿ ಬಿಸಿಲು ಲೆಕ್ಕಿಸದೆ ಸಹಸ್ರಾರು ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಸಾಲು ಸಾಲಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗರೋಪಾದಿಯಲ್ಲಿ ಸಾಗುತ್ತಿತ್ತು. ಕನ್ನಡಿಗರ ಹಬ್ಬಕ್ಕೆ ನೆರೆದ ಜನರಲ್ಲಿ ಎಲ್ಲೆಲ್ಲೂ ಅಮಿತೋತ್ಸಾಹ ಮಿತಿ ಮೀರಿತ್ತು. ಅಕ್ಷರ ಜಾತ್ರೆಯ ಮೆರವಣಿಗೆ ಮೈಸೂರು ದಸರಾ ಉತ್ಸವವನ್ನು ಕಣ್ಮುಂದೆ ತಂದು ನಿಲ್ಲಿಸಿತು.
ಮೂರು ತಂಡಗಳಲ್ಲಿ.... ನಗರದ ಕನಕ ವೃತ್ತದಿಂದ ಡೋಣಿ ಕಲಾ ಸಮೂಹ, ಸಿದ್ದೇಶ್ವರ ದೇವಸ್ಥಾನದಿಂದ ಭೀಮಾ ಕಲಾ ಸಮೂಹ, ಕೇಂದ್ರ ಬಸ್ ನಿಲ್ದಾಣದಿಂದ ಕೃಷ್ಣಾ ಕಲಾ ಸಮೂಹಗಳ ಕಲಾ ತಂಡಗಳ ಮೆರವಣಿಗೆ ಏಕ ಕಾಲದಲ್ಲಿ ಬೆಳಿಗ್ಗೆ 8ಕ್ಕೆ ಆರಂಭಗೊಂಡವು.
ಮೈಸೂರು, ಬೆಂಗಳೂರು, ಗುಲ್ಬರ್ಗ, ಶಿಗ್ಗಾಂವ, ಬೆಳಗಾವಿ ಪೊಲೀಸ ಇಲಾಖೆಯ ಅಶ್ವದಳಗಳು ಮೆರವಣಿಗೆಗೆ ಹೆಚ್ಚಿನ ಮೆರಗು ನೀಡಿದವು. ಕುದುರೆಗಳ ಮೇಲೆ ಭರ್ಚಿ ಹಿಡಿದು ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿರುವುದು ರಾಜರ ಕಾಲದ ದಿನಗಳನ್ನು ನೆನಪಿಗೆ ತರುತ್ತಿತ್ತು. ಮಹಿಳಾ ವಿವಿಯ ಮಹಿಳೆಯರ ಬ್ಯಾಂಡ್, ಶಿಸ್ತಿಗೆ ಹೆಸರುವಾಸಿಯಾದ ಸೈನಿಕ ಶಾಲೆಯ ಬ್ಯಾಂಡ್ ಮೆರವಣಿಗೆಯಲ್ಲಿತ್ತು.
ಜಮಖಂಡಿಯ ಪಾಂಡುರಂಗಪ್ಪ ಅಮಜಗೋಳ ಅವರ ಕಲಾ ತಂಡದ ಮೀನಿನ ಸೋಗು ಅತ್ಯಂತ ನಯನ ಮನೋಹರವಾಗಿತ್ತು. ಮೀನಿನ ವೇಷ ಧರಿಸಿದ ವ್ಯಕ್ತಿಯನ್ನು ಮೀನುಗಾರರು ಬಲೆ ಹಾಕಿ ಹಿಡಿಯುವ ರೂಪಕ ಜನರ ಕಣ್ಮನ ಸೆಳೆಯಿತು. ನದಿದಂಡೆಯಲ್ಲಿ ಮೀನುಗಾರರ ನೈಜ ದೃಶ್ಯಾವಳಿಯಂತೆ ಇದು ಕಂಡು ಬಂತು.
ಕಾಮನಕೇರಿಯ ಕಸ್ತೂರಬಾ ಗಾಂಧಿ ಬಾಲಿಕಾ ಶಾಲೆ ಮಕ್ಕಳ ಡೊಳ್ಳು ಕುಣಿತ, ರಾಯಚೂರಿನ ಚಿನ್ನಪ್ಪ ಯಾಪಲಪರ್ವಿ ಕಲಾ ತಂಡದ ಹಗಲುವೇಷ ಹೆಚ್ಚು ಜನರನ್ನು ಆಕರ್ಷಿಸಿತು. ಬಿಜಾಪುರ ತಾಲೂಕಿನ ಅಲ್ಲಾಪುರ ತಾಂಡಾದ ಲಂಬಾಣಿ ಮಹಿಳೆಯರ ನೃತ್ಯ ನೋಡುಗರಿಗೆ ಬಲು ಖುಷಿ ನೀಡಿತು. ತಾಳಕ್ಕೆ ತಕ್ಕಂತೆ ಲಂಬಾಣಿ ಮಹಿಳೆಯರು ತಮ್ಮ ವಿಶಿಷ್ಟ ಉಡುಗೆಯಲ್ಲಿ ನೋಡುಗರ ಕಣ್ಮನ ಸೆಳೆದರು. ಸಾರವಾಡದ ಕೀಲು ಕುದುರೆ, ಜಮಖಂಡಿಯ ರುಕ್ಮವ್ವ ಕಲಾ ತಂಡದ ಚೌಡಕಿ ಪದ, ತುಮಕೂರಿನ ಕಲಾವಿದ ಸಣ್ಣಹೊನ್ನಯ್ಯ ಸಂಕಲಕೆರೆ ತಂಡದ ಸೋಮನಕುಣಿತ, ಮಂಡ್ಯ ಜಿಲ್ಲೆಯ ರಿವಾಯತ ಕಲಾ ತಂಡ, ಬಿಜಾಪುರದ ಹೆಜ್ಜೆಮೇಳ, ದಾಂಡಿಯಾ, ಲೇಜಿಮ, ಎಂ.ಕೃಷ್ಣಪ್ಪ ಹುಲ್ಲೂರ ಕಲಾ ತಂಡದ ಮರಗಾಲು ಕಲಾ ತಂಡಗಳು ಮೆರವಣಿಗೆ ಕಳೆ ತುಂಬಿದವು. ಅಕ್ಷರ ಜಾತ್ರೆಯ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಸಿದ್ದ 54 ಕಲಾ ತಂಡಗಳು ಉತ್ಸಾಹದಿಂದ ಭಾಗವಹಿಸಿ ಮೆರವಣಿಗೆಗೆ ಮೆರಗು ನೀಡಿದವು.
ಬಿಜಾಪುರ ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಕೋ. ಚೆನ್ನಬಸಪ್ಪ ಕನ್ನಡ ತೇರನ್ನೇರಿ ಕಲಾ ತಂಡಗಳ ಜೊತೆ ಜೊತೆಯಲ್ಲಿ ಸೈನಿಕ ಶಾಲೆಯತ್ತ ಸಾಗಿದರು. ಸುಮಾರು 2 ಕಿ.ಮಿ. ಉದ್ದದ ಮೆರವಣಿಗೆ ಕನಕ ವೃತ್ತದಿಂದ ಸಮ್ಮೇಳನ ನಡೆಯುವ ಸೈನಿಕ ಶಾಲೆ ತಲುಪಲು ಮೂರು ಗಂಟೆ ಬೇಕಾದವು. ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಶಾಸಕ ವಿಠಲ ಕಟಕದೊಂಡ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಸೈನಿಕ ಶಾಲೆಯಲ್ಲಿ ಬೆಳಗ್ಗೆ 7-30ಕ್ಕೆ ರಾಷ್ಟ್ರಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಪರಿಷತ್ ಧ್ವಜವನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಆರೋಹಣ ಮಾಡಿದರು..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

