ಬಿಜಾಪುರ

ಸಾಹಿತ್ಯ ಕ್ಷೇತ್ರಕ್ಕೆ ಬಿಜಾಪುರ ಕೊಡುಗೆ ಅಪಾರ

Published On :

ಡಾ. ಫ.ಗು. ಹಳಕಟ್ಟಿ ವೇದಿಕೆ, ಬಿಜಾಪುರ:  ಕತೆ, ನಾಟಕ, ಸಂಶೋಧನೆ, ಜಾನಪದ, ಶರಣ, ದಲಿತ, ದಾಸ ಇವೇ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಬಿಜಾಪುರ ಜಿಲ್ಲೆಯ ಜನರು ವಿಫುಲ ಕೃಷಿ ಮಾಡಿಜಿಲ್ಲೆಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮಂತಗೊಳಿಸಿದ್ದಾರೆ ಎಂದು ಸಾಹಿತಿ ಡಾ. ಶಶಿಕಲಾ ವೀರಯ್ಯಸ್ವಾಮಿ ಹೇಳಿದರು.
ನಗರದ ಸೈನಿಕ ಶಾಲೆಯ ಆವರಣದ ಫ.ಗು.ಹಳಕಟ್ಟಿ ವೇದಿಕೆಯಲ್ಲಿ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಿದ್ದ ಬಿಜಾಪುರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಮಾಲಿಕೆಯಲ್ಲಿ ನಡೆದ ಮೊದಲ ಗೋಷ್ಠಿಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆ ವಿಷಯವಾಗಿ ಅವರು ಉಪನ್ಯಾಸ ನೀಡಿದರು.
ಕವಿ ಮಧುರ ಚೆನ್ನರು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಗೌರವದ ಮಾತುಗಳಿಗೆ ತಮ್ಮ ಸಾಹಿತ್ಯದಲ್ಲಿ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಿದ್ದಾರೆ. ಜಗತ್ತಿನಲ್ಲಿ ಪ್ರೀತಿಯಂತಹ ವಸ್ತು ಇನ್ನೊಂದಿಲ್ಲ ಎಂಬುವುದನ್ನು ತಿಳಿಸಿದ್ದಾರೆ. ಮನುಷ್ಯ ಮನುಷ್ಯನನ್ನು ಗೌರವಿಸುವುದು ಪವಿತ್ರ ಪ್ರೀತಿ ಎಂದು ಮಧುರ ಚೆನ್ನರು ತಮ್ಮ ಸಾಹಿತ್ಯ ಕೃತಿಗಳಲ್ಲಿ ಹೇಳಿದ್ದಾರೆ. ಶಿವರಾಮ ಕಾರಂತರಂತಹ ಹೆಸರಾಂತ ಕವಿಗಳು ಹಲಸಂಗಿ ಗೆಳೆಯರ ಬಳಿಗೆ ಬಂದು ಜ್ಞಾನ ಹಂಚಿಕೊಂಡು ಹೋಗಿದ್ದಾರೆ. ಇದು ಸಾಹಿತ್ಯ ಕ್ಷೇತ್ರದಲ್ಲಿನ ಈ ನಾಡಿನ ಮಹತ್ವವನ್ನು ಒತ್ತಿ ಹೇಳುತ್ತದೆ ಎಂದು ತಿಳಿಸಿದರು.
ಆದಿಲ್‌ಶಾಹಿ ಕಾಲದಲ್ಲಿ ಸೂಫಿ ಸಂತರು ವಿಶ್ವ ಮಾನ್ಯತೆ ಪಡೆಯುವ ಸಾಹಿತ್ಯ ರಚಿಸಿದರು. ದೇಶ, ವಿದೇಶದಿಂದ ಬಿಜಾಪುರಕ್ಕೆ ಆಗಮಿಸಿ ಎರಡನೆ ಆದಿಲ್‌ಶಾಹಿ ಕಾಲದಲ್ಲಿ ಆಶ್ರಯ ಪಡೆದು ಸಾಹಿತ್ಯ ಕ್ಷೇತ್ರದ ಕೃಷಿ ಮಾಡಿದ್ದಾರೆ ಎಂದರು.
ಹಳಗನ್ನಡದಲ್ಲಿ ಕವಿ ಅಭಿನವ ನಾಗಚಂದ್ರ ಉತ್ತಮ ಸಾಹಿತ್ಯ ರಚಿಸಿದ್ದಾರೆ. ನಡುಗನ್ನಡದ ಸಾಹಿತ್ಯ ಪ್ರಕಾರದಲ್ಲಿ ಅಣ್ಣ ಬಸವಣ್ಣ ಸರ್ವಶ್ರೇಷ್ಠ ಸಾಹಿತ್ಯದ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯದಲ್ಲಿ ಅಕ್ಕ ನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ ಮುಂತಾದವರು ಶರಣರ ಕಾವ್ಯಗಳಲ್ಲಿ ಸಾಮಾಜಿಕ ಚಿಂತನೆ ಮಾಡಿ ವಿಶ್ವಕ್ಕೆ ಶ್ರೇಷ್ಠ ಸಾಹಿತ್ಯ ನೀಡಿದ್ದಾರೆ ಎಂದರು.
ದಾಸ ಸಾಹಿತ್ಯ, ವಚನ ಸಾಹಿತ್ಯವೂ ಜಿಲ್ಲೆಯಲ್ಲಿ ಅಷ್ಟೇ ಪ್ರಸಿದ್ಧಿ ಪಡೆದಿದೆ. ಮಹಿಪತಿದಾಸರು ಸಿಂದಗಿ ಭೀಮಾಶಂಕರ ಮತ್ತಿತರರು ಉತ್ತಮ ಸಾಹಿತ್ಯ ನೀಡುವುದರ ಮೂಲಕ ಸಮಾಜವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.
ಸಿನಿಮಾ, ಟಿವ್ಹಿಗಳಲ್ಲಿ ಮಹಿಳೆಯರ ಬಗ್ಗೆ ಕೀಳಾಗಿ ಚಿತ್ರಣ ನೀಡುತ್ತಿರುವುದರಿಂದ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿಷಾದಿಸಿದ ಅವರು, ಮಹಿಳೆಯರಿಗೆ ಗೌರವ ಸಿಗುವಂತಾಗಲು ಎಲ್ಲರೂ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಸಾಹಿತಿ ಡಾ. ಎಸ್.ಕೆ. ಕೊಪ್ಪ ಐತಿಹಾಸಿಕ ಪರಂಪರೆ ಕುರಿತು ಉಪನ್ಯಾಸ ನೀಡಿ, ಪ್ರಾಚೀನ ಕಾಲದಿಂದಲೂ ಬಿಜಾಪುರ ಜಿಲ್ಲೆಯಲ್ಲಿ ಶ್ರೀಮಂತವಾದ ಐತಿಹಾಸಿಕ ಪರಂಪರೆ ಇದೆ. ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ, ಜಾಯವಾಡಗಿ, ಸಿಂದಗಿ ತಾಲೂಕಿನ ಬೂದಿಹಾಳ, ಇಂಡಿ ತಾಲೂಕಿನ ಖೇಡಗಿ ಸೇರಿದಂತೆ ಅನೇಕ ಸ್ಥಳಗಳು ಜಿಲ್ಲೆಯಲ್ಲಿ ಐತಿಹಾಸಿಕ ಪ್ರಸಿದ್ಧಿ ಪಡೆದು ಐತಿಹಾಸಿಕ ಪರಂಪರೆಯನ್ನು ಶ್ರೀಮಂತಗೊಳಿಸಿವೆ ಎಂದರು.
ಸಾಹಿತಿ ಡಾ. ರಂಜಾನ್ ದರ್ಗಾ ಅವರು ಆಶಯ ಭಾಷಣ ಮಾಡಿ, ದೇಶದ ಸ್ವಾತಂತ್ರ್ಯ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿದೆ. ಬಿಜಾಪುರ ಭಾರತದ ಸಮ್ಮಿಶ್ರ ಸಂಸ್ಕೃತಿಯ ತೊಟ್ಟಿಲು ಎಂದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಸಿದ್ದನಗೌಡ ಪಾಟೀಲ ವಹಿಸಿದ್ದರು. ಡಾ. ವಿಜಯಕುಮಾರ ಕಟಗಿಹಳ್ಳಿಮಠ ಸ್ವಾಗತಿಸಿದರು. ಡಾ. ಎಂ. ಕಾಂತು ನಿರೂಪಿಸಿದರು. ಡಾ. ಲಿಂಗರಾಜ ಅಂಗಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.