2ನೇ ದಿನವೂ ಊಟಕ್ಕಾಗಿ ನೂಕುನುಗ್ಗಲು
- ಬಸವರಾಜ ನಂದಿಹಾಳ
ಬಿಜಾಪುರ: ಬಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ ಊಟದ ಅವ್ಯವಸ್ಥೆ ಎರಡನೇ ದಿನವೂ ಮುಂದುವರಿದಿದೆ. ಮೊದಲ ದಿನ (ಶನಿವಾರ)ಕ್ಕಿಂತ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ ಎನ್ನಿಸಿದರೂ ಊಟಕ್ಕಾಗಿ ಸಾಹಿತಿಗಳು, ಪ್ರತಿನಿಧಿಗಳು ಪರದಾಡಬೇಕಾಯಿತು.
ಸಾರ್ವಜನಿಕರಿಗೂ ಊಟದ ವ್ಯವಸ್ಥೆ ಮಾಡಿದ್ದು, ಕೌಂಟರ್ ಸಿಸ್ಟಮ್ ಜಾರಿಗೆ ತಂದಿದ್ದರೂ ಯಾರು ಎಲ್ಲಿ ಬೇಕಾದರೂ ನುಗ್ಗುತ್ತಿದ್ದರು. ಕೆಲ ಕೌಂಟರ್ಗಳಲ್ಲಿ ಊಟದ ತಟ್ಟೆಯೇ ಇರಲಿಲ್ಲ. ಮತ್ತೆ ಕೆಲವೆಡೆ ತಟ್ಟೆ ಇದ್ದರೆ ಊಟವೇ ಇರಲಿಲ್ಲ. ತಟ್ಟೆಗಳನ್ನು ಸ್ವಚ್ಛಗೊಳಿಸಿ ಪೂರೈಸುವ ವ್ಯವಸ್ಥೆಯಲ್ಲೂ ಗೊಂದಲ, ಅವ್ಯವಸ್ಥೆ ಕಾಣಿಸಿಕೊಂಡಿತ್ತು. ಸಾವಿರಾರು ತಟ್ಟೆಗಳನ್ನು ಸ್ವಚ್ಛಗೊಳಿಸದೇ ಹಾಗೆಯೇ ಒಂದೆಡೆ ಗುಂಪಾಗಿರಿಸಲಾಗುತ್ತಿದ್ದು, ಇದು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿತ್ತು.
ಪುರುಷರು ಮಹಿಳೆಯರ ಪ್ರತ್ಯೇಕ ಕೌಂಟರ್ ಅಲ್ಲದೇ ಅಲ್ಲಿಯೇ ಕುಳಿತು ಊಟ ಮಾಡಲು ಬೃಹದಾದ ಪ್ರತ್ಯೇಕ ಶಾಮಿಯಾನಾ ಸೇರಿದಂತೆ ಎಲ್ಲ ವ್ಯವಸ್ಥೆ ಇದ್ದರೂ ಅವ್ಯವಸ್ಥೆ ನುಸುಳಿತ್ತು.
ಮೂರು ಲಕ್ಷ ಜನರಿಂದ ಭೋಜನ: ಶನಿವಾರ ಸುಮಾರು 3 ಲಕ್ಷ ಜನರು ಭೋಜನ ಮಾಡಿದ್ದರೆ, ಭಾನುವಾರ ಸುಮಾರು 2.5 ಲಕ್ಷ ಜನರಿಗೆ ಭೋಜನ ಬಡಿಸಲಾಗಿದೆ ಎಂದು ಊಟದ ಮೇಲುಸ್ತುವಾರಿ ವಹಿಸಿದ್ದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಟಿ.ಎಚ್. ಮೇಲಿನಕೇರಿ ತಿಳಿಸಿದ್ದಾರೆ. ಭಾನುವಾರ ಯಾವುದೇ ರೀತಿಯ ಅವ್ಯವಸ್ಥೆ, ಗೊಂದಲ ಆಗಿಲ್ಲ. ಅಗತ್ಯವಿದ್ದಾಗಲೆಲ್ಲ ಅಡುಗೆ ಮಾಡಿ ಪೂರೈಸಲಾಗಿದೆ. ಅಚ್ಚುಕಟ್ಟಾಗಿ ಊಟವ ವ್ಯವಸ್ಥೆ ಮಾಡಲು ಬಾಣಸಿಗರು ಹಾಗೂ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದರು.
ಭಾನುವಾರ ಬೆಳಗ್ಗೆ 8 ರಿಂದ 11 ರ ವರೆಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ನಂತರ ಊಟ ಆರಂಭಿಸಿ 5.30 ರ ವರೆಗೂ ಊಟ ಬಡಿಸಲಾಗಿದೆ. ರಾತ್ರಿ 8 ಗಂಟೆಯಿಂದ ಮತ್ತೆ ಊಟ ಶುರುವಾಗುತ್ತದೆ. 1500 ಸ್ವಯಂ ಸೇವಕರು ಊಟ ಬಡಿಸುತ್ತಿದ್ದಾರೆ. ಪುರುಷರಿಗಾಗಿ 70, ಮಹಿಳೆಯರಿಗಾಗಿ 22 ಕೌಂಟರ್ ತೆರೆಯಲಾಗಿದೆ. ಪ್ರತಿನಿಧಿಗಳಿಗಾಗಿ 7 ಪ್ರತ್ಯೇಕ ಕೌಂಟರ್ ಮಾಡಿದ್ದರೂ ಇದರಲ್ಲೂ ಸಾರ್ವಜನಿಕರು ಊಟ ಮಾಡುತ್ತಿದ್ದಾರೆ ಎಂದರು.
ಶನಿವಾರ ಗೊಂದಲ ಆಗಿದ್ದು ನಿಜ. ಊಟದ ತಟ್ಟೆ ತೊಳೆಯಲು, ಆಹಾರ ಪೂರೈಕೆ ಮಾಡಲು ಜನರ ಕೊರತೆ ಇತ್ತು. ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದರು. ಆದರೆ ಭಾನುವಾರ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ ಎಂದರು. ಆದರೂ ಊಟಕ್ಕಾಗಿ ನೂಕುನುಗ್ಗಲು, ಬೃಹದಾಕಾರದ ಸರತಿ ಸಾಲು ಎಲ್ಲೆಲ್ಲೂ ಕಂಡು ಬಂದಿತು. ಅವ್ಯವಸ್ಥೆ ಕಣ್ಣಿಗೆ ರಾಚುವಂತೆ ಕಾಣುತ್ತಿತ್ತು. ಹಲವರು ಇದರ ಬಗ್ಗೆ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದರು. ಭಾನುವಾರ ಮಧ್ಯಾಹ್ನ ಊಟಕ್ಕೆ ಬುಂದೆ ಲಾಡು, ಮಾದಲಿ, ರೊಟ್ಟಿ, ಚಪಾತಿ, ಅನ್ನ ಸಾರು ವ್ಯವಸ್ಥೆ ಮಾಡಲಾಗಿತ್ತು.
ಗಂಗಾವತಿ ಸಮ್ಮೇಳನಕ್ಕಿಂತಲೂ ಇಲ್ಲಿನ ಊಟದ ವ್ಯವಸ್ಥೆ ಹದಗೆಟ್ಟಿದೆ. ಗಂಗಾವತಿ ಸಮ್ಮೇಳನದಲ್ಲಿ ಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದರಿಂದ ಈ ರೀತಿಯ ಗಲಾಟೆ ಅಲ್ಲಿ ಉಂಟಾಗಿರಲಿಲ್ಲ. ಆದರೆ ಇಲ್ಲಿ ಎಲ್ಲರೂ ಒಂದೇ ಶಾಮಿಯಾನದಡಿ ಊಟ ಮಾಡಬೇಕಾಗಿರುವುದರಿಂದ ನಮ್ಮಂತಹ ವೃದ್ಧರಿಗೆ ತುಂಬಾ ತೊಂದರೆ ಉಂಟಾಗಿದೆ ಎಂದು ಬೆಂಗಳೂರಿನ ಮಲ್ಲಿಕಾರ್ಜುನ ಸಾತಿನಹಳ್ಳಿ ಎಂಬ 75 ವರ್ಷದ ವಯೋವೃದ್ಧ ತಮ್ಮ ಅಳಲು ತೋಡಿಕೊಂಡರು. ಇಂತಹ ಗದ್ದಲದಲ್ಲಿ ವಿಕಲಚೇತನರು ಊಟಕ್ಕಾಗಿ ಹರಸಾಹಸ ಪಡಬೇಕಾಗಿದೆ. ಸಮ್ಮೇಳನದಲ್ಲಿ ವಿಕಲಚೇತನರಿಗೆ ಊಟಕ್ಕೆ ಪ್ರತ್ಯೇಕ ವ್ಯವಸ್ಥ ಮಾಡಿದ್ದರೆ ಅನುಕೂಲವಾಗುತ್ತಿತ್ತು ಎಂದು ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ವಿಕಲಚೇತನ ಮಹಿಬೂಬ ಮಲ್ಲನವರ ಅಭಿಪ್ರಾಯಪಟ್ಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

