ಬಿಜಾಪುರ

ಜಾನಪದ ಕಲೆಗೆ ಮರುಹುಟ್ಟು ನೀಡಿ

Published On :

ಕನ್ನಡಪ್ರಭ ವಾರ್ತೆ, ಫ. ಗು. ಹಳಕಟ್ಟಿ ಪ್ರಧಾನ ವೇದಿಕೆ, ಬಿಜಾಪುರ, ಫೆ. 10
ಯಕ್ಷಗಾನ, ಭರತನಾಟ್ಯದ ಹೊರತಾಗಿ ದೊಡ್ಡಾಟ, ಬಯಲಾಟ, ಶ್ರೀಕೃಷ್ಣ ಪಾರಿಜಾತ, ಗೊಂಬೆಯಾಟದಂತಹ ಜಾನಪದ ಕಲೆಗಳು ನಿಸ್ತೇಜಗೊಂಡಿವೆ. ಈ ಕಲೆಗಳಿಗೆ ಮರುಹುಟ್ಟು ನೀಡಲು ಸರ್ಕಾರ, ಸಂಘ ಸಂಸ್ಥೆಗಳು ಮುಂದಾಗಬೇಕಿದೆ. ಇಲ್ಲದಿದ್ದರೆ ಕೆಲವೇ ವರ್ಷದಲ್ಲಿ ಜಾನಪದ ಕಲೆ ನಾಶವಾಗುವ ಭೀತಿ ಎದುರಾತೀತು ಎಂದು ಡಾ. ಶ್ರೀರಾಮ ಇಟ್ಟಣ್ಣವರ ಆತಂಕ ವ್ಯಕ್ತಪಡಿಸಿದರು.
ಜಾನಪದ ವಿಷಯ ಕುರಿತಾದ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದ ಕಲೆ ಹುಟ್ಟಿದ ಬಗೆ, ಇಂದಿನ ಸ್ಥಿತಿಗತಿ, ಕಲೆ ಕಳೆದು ಹೋಗುವುದಕ್ಕೆ ಕಾರಣವೇನೆಂಬುದನ್ನು ಎಳೆ ಎಳೆಯಾಗಿ ಮನ ಮುಟ್ಟುವಂತೆ ತಿಳಿಸಿದರು.
ಜಾನಪದ ಕಲೆಯ ಕುರಿತಾಗಿ ನಡೆದ ಅಧ್ಯಯನಗಳು ಅಪೂರ್ಣವಾಗಿವೆ. ಜಾನಪದ ಕಲೆಗಳ ಕುರಿತು ಸುದೀರ್ಘ ಅಧ್ಯಯನ ನಡೆಯಬೇಕಿದೆ. ಜಾನಪದ ಕಲೆ ಪಠ್ಯ ರೂಪದಲ್ಲಿದ್ದ ಮಾತ್ರಕ್ಕೆ ಅದು ಜನರಿಗೆ ತಲುಪಲು ಸಾಧ್ಯವಿಲ್ಲ. ಬದಲಾಗಿ ಇದರ ಪ್ರಯೋಗವಾಗಬೇಕಿದೆ. ಅಂದಾಗ ಮಾತ್ರ ಇದು ಜನರಿಗೆ ಮುಟ್ಟಲು ಸಾಧ್ಯ ಎಂದರು.
ನಗರ ಪ್ರದೇಶಗಳಿಂದ ಜಾನಪದ ಕಲೆ ದೂರಾಗುತ್ತಿದೆ ಎಂಬುದಕ್ಕಿಂತ ಮುಖ್ಯವಾಗಿ ಗ್ರಾಮೀಣ ಪ್ರದೇಶದಿಂದಲೂ ಜನಪದ ಕಲೆ ದೂರಾಗುತ್ತಿದೆ ಎಂಬುದು ಆತಂಕಕಾರಿ ಬೆಳವಣಿಗೆ. ಆಧುನಿಕತೆ ಹಾವಳಿಯಿಂದಾಗಿ ಜಾನಪದ ಕಲೆಗೆ ಗ್ರಾಮೀಣ ಪ್ರದೇಶದಲ್ಲಿಯೂ ಪ್ರೋತ್ಸಾಹ ಸಿಗದಾಗಿದೆ. ಗ್ರಾಮೀಣ ಭಾಗದ ಯುವಜನರು ಜನಪದ ಕಲೆ ಬಗ್ಗೆ ನಿರುತ್ಸಾಹ ಹೊಂದಿದ್ದಾರೆ. ಇದು ಜಾಗತೀಕರಣ, ಆಧುನೀಕರಣದ ಪ್ರಭಾವ ಎಂದ ಅವರು, ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ.
ರಂಗಭೂಮಿಯನ್ನೇ ಗಮನಿಸಿದಾಗ ಅದರಲ್ಲಿ ಹತ್ತಾರು ಪ್ರಭೇದಗಳಿವೆ. ಈ ಕಲೆಯನ್ನು ಉಳಿಸಬೇಕಾದಲ್ಲಿ ಆಯಾ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಕಲಾ ಪ್ರಕಾರಕ್ಕನುಗುಣವಾಗಿ ಕಲಿಕಾ ಕೇಂದ್ರಗಳನ್ನು ತೆರೆಯಬೇಕು. ಇಲ್ಲಿ ರಂಗಭೂಮಿ ಸೇರಿದಂತೆ ಇನ್ನಿತರ ಜಾನಪದ ಕಲೆಯನ್ನು ಕಲಿಸುವ ಕಾರ್ಯವಾಗಬೇಕಿದೆ. ಸರ್ಕಾರ ಜಾನಪದ ವಿವಿ ಸ್ಥಾಪಿಸಿದೆ ನಿಜ. ಆದರೆ, ಇದಕ್ಕೆ ಅಗತ್ಯ ಸೌಲಭ್ಯ ನೀಡುವಲ್ಲಿ ವಿಫಲವಾಗಿದೆ. ಸರ್ಕಾರ ಜಾನಪದ ಕಲೆ ಉಳಿಸಲು ಹೆಚ್ಚಿನ ಸಹಾಯ ಸಹಕಾರ ನೀಡಬೇಕು. ಪ್ರಮುಖವಾಗಿ ಕಲಾವಿದರನ್ನು ಬೆಳೆಸುವ ಕಾರ್ಯವಾಗಬೇಕು. ಜಾನಪದ ಕೆಳವರ್ಗದವರ ಕಲೆ ಎಂಬ ತಾತ್ಸಾರ ಭಾವನೆ ತೋರಬಾರದು. ಇಲ್ಲದೇ ಹೋದಲ್ಲಿ ಜಾನಪದ ಕಲೆ ಮರೆಯಾದೀತು ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಜನಪದ ಕಲೆಗಳ ಅಸ್ತಿತ್ವ, ಹೊಸ ಸವಾಲುಗಳು ವಿಷಯವಾಗಿ ಗೋಷ್ಠಿ ಮಂಡಿಸಿದ ಡಾ. ಎಚ್.ಟಿ. ಪೋತೆ, ಜಾನಪದ ಕಲೆ ಜಾಗತೀಕರಣ, ಆಧುನಿಕರಣದಿಂದಾಗಿ ಮರೆಯಾಗುತ್ತಿಲ್ಲ. ಹೊರತಾಗಿ ಭಾರತೀಯ ಮನಸ್ಥಿತಿಯಿಂದಾಗಿ ಕಳೆದು ಹೋಗುತ್ತಿದೆ. ಜಾತಿ ವ್ಯವಸ್ಥೆಯ ಕರಾಳ ಛಾಯೆ ಜಾನಪದ ಕಲೆ ಮೇಲೆ ಬಿದ್ದಿದೆ. ಜಾನಪದ ಬಹುತೇಕ ಕೆಳವರ್ಗದವರಿಂದ ಹುಟ್ಟಿದ ಕಲೆಯಾಗಿರುವುದರಿಂದ ಈ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯವಾಗುತ್ತಿಲ್ಲ. ಜಾನಪದ ಕಲೆಯನ್ನು ಅವಮಾನಿಸಲಾಗುತ್ತಿದೆ. ಕಲಾವಿದರಿಗೆ ಸೂಕ್ತ ಸ್ಥಾನಮಾನ, ಗೌರವ ಸಿಗದಾಗಿದೆ. ಜಾನಪದ ಕಲೆಯ ಬಗ್ಗೆ ಎಲ್ಲರೂ ಮೇಲ್ನೋಟಕ್ಕೆ ಕಳಕಳಿ ವ್ಯಕ್ತಪಡಿಸುತ್ತಾರೆ. ಆದರೆ ಜಾನಪದ ಕಲೆ ಉಳಿಸುವ ನೈಜ ಮನಸ್ಸುಗಳಿಲ್ಲ ಎಂದು ದೂರಿದರು.  
ಜಾನಪದ ಗೀತೆಗಳನ್ನು ಹಾಡುತ್ತ, ಸಮುದಾಯ ಪ್ರಜ್ಞೆಯ ವಿಘಟನೆ-ಜನಪದ ಅಸ್ತಿತ್ವದ ಸವಾಲುಗಳು ಕುರಿತಾಗಿ ವಿಷಯ ಮಂಡಿಸಿದ ಡಾ. ಶ್ರೀಶೈಲ ಹುದ್ದಾರ, ಜೀವನ ವಿಧಾನ ಕಲಿಸಿದ ಜಾನಪದ ನಿರ್ಲಕ್ಷ್ಯಕ್ಕೊಳಗಾಗಿದೆ. ಇಂದೇನಾದರೂ ಜಾನಪದ ಕಲೆ ಉಳಿದಿದೆ ಎಂದಾದರೆ ಅದು ಶ್ರಮವರ್ಗ, ಅನಕ್ಷರಸ್ಥರಿಂದ. ಆಧುನಿಕತೆ ಹೊಡೆತಕ್ಕೆ ಸಿಲುಕಿ ವಲಸೆ ಹೋಗುವುದರಿಂದ, ಕೀಳರಿಮೆಯಿಂದಾಗಿ ಜಾನಪದ ಸಮುದಾಯ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಪ್ರಮುಖವಾಗಿ ಜಾನಪದ ಕಲಾವಿದರನ್ನು ಅಸ್ಪೃಶ್ಯರಾಗಿ ಕಾಣುವ ದೃಷ್ಟಿಕೋನ ಬದಲಾಗಬೇಕಿದೆ. ಇಲ್ಲದೇ ಹೋದಲ್ಲಿ ನಾಡಿನ ಹೆಮ್ಮೆ ಎನಿಸಿಕೊಂಡಿರುವ ಕಲೆ ಮರೆಯಾಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಿದೆ ಎಂದರು.
ಟಿ.ಪಿ. ರಮೇಶ ಸ್ವಾಗತಿಸಿದರು. ನಾಗರಾಜ ಬಿರಾದಾರ ನಿರೂಪಿಸಿದರು. ಎನ್.ಎಸ್. ಶಿವಸ್ವಾಮಿ ವಂದಿಸಿದರು.
-ಪ್ರಕಾಶ ಎಸ್. ಶೇಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.