ಮುಂದಿನ ಸಮ್ಮೇಳನ ಕೊಡಗಿನಲ್ಲಿ
ಬಿಜಾಪುರ: ಕನ್ನಡ ಸಾಹಿತ್ಯ ಸಮ್ಮೇಳನ ಬರದ ನಾಡು ಬಿಜಾಪುರದಿಂದ ನೇರವಾಗಿ ಪ್ರಕೃತಿ ಸಂಪತ್ತಿನ ಬೀಡಾದ, ಕಾವೇರಿ ನಾಡು ಕೊಡಗಿಗೆ ಜಿಗಿದಿದೆ. ಭಾನುವಾರ ಸಂಜೆ ನಡೆದ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊಡಗಿನಲ್ಲಿ ನಡೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೊಡಗಿನಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡಪ್ರಭ ಭಾನುವಾರದ ಸಂಚಿಕೆಯಲ್ಲೇ ಸುದ್ದಿ ಪ್ರಕಟಿಸಿತ್ತು. ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಕೊಡಗಿನಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಉತ್ಸುಕರಾಗಿದ್ದರು. ಭಾನುವಾರ ನಡೆದ ಸಭೆಯಲ್ಲಿ ಒಟ್ಟು 41 ಮಂದಿ ಭಾಗವಹಿಸಿದ್ದರು. ಅದರಲ್ಲಿ 25 ಮಂದಿ ಕೊಡಗಿನ ಪರ ಮತಚಲಾಯಿಸುವ ಮೂಲಕ 80ನೇ ಸಾಹಿತ್ಯ ಸಮ್ಮೇಳನ ಕೊಡಗಿಗೆ ಲಭಿಸಿತು. ಬಳ್ಳಾರಿ, ಹಾವೇರಿ, ದಾವಣಗೆರೆ, ಚಾಮರಾಜನಗರ ಜಿಲ್ಲೆಗಳು 80ನೇ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುವ ಬೇಡಿಕೆ ಮುಂದಿಟ್ಟದ್ದವು. ಕಳೆದ ಕೆಲವು ವರ್ಷಗಳಿಂದ ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯಲ್ಲೇ ಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತು. ಅದಕ್ಕೆ ಮುಂದಿನ ವರ್ಷ ಬ್ರೇಕ್ ಬೀಳಲಿದೆ. ಬಿಜಾಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಉಂಟಾದ ಅವ್ಯವಸ್ಥೆ ಕುರಿತೂ ಸಭೆ ಚರ್ಚಿಸಿದೆ. ಮುಂದಿನ ಸಮ್ಮೇಳನದಿಂದ ಸಾರ್ವಜನಿಕರಿಗೆ ಭೋಜನವಿಲ್ಲ ಎಂಬ ಅಭಿಪ್ರಾಯವನ್ನು ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಸಭೆಯಲ್ಲಿ ಹಾಗೂ ಸಭೆಯ ಹೊರಗೆ ವ್ಯಕ್ತಪಡಿಸಿದ್ದರು. ಆದರೆ ಸಭೆಯಲ್ಲಿ ಇದಕ್ಕೆ ಬೆಂಬಲ ಸಿಗಲಿಲ್ಲ ಎನ್ನಲಾಗಿದೆ. ಸಾಹಿತ್ಯ ಸಮ್ಮೇಳನ ಎಂಬುದು ಜನರ ಕಾರ್ಯಕ್ರಮ. ಕನ್ನಡಿಗರ ಕಾರ್ಯಕ್ರಮ. ಅವರಿಗೇ ಊಟವಿಲ್ಲ ಎಂದರೆ ಸರಿಯಾಗದು. ಬಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ ಸರಿಯಾಗಿ ಊಟದ ವ್ಯವಸ್ಥೆ ಮಾಡದಿರುವುದು ಸಾಹಿತ್ಯ ಪರಿಷತ್ತಿನ ಮತ್ತು ಸಂಘಟಕರ ವೈಫಲ್ಯ. ಅದಕ್ಕೆ ಊಟವೇ ಬೇಡವೆಂದು ಜನರಿಗೆ ಶಿಕ್ಷೆ ಕೊಡುವುದು ಸರಿಯಲ್ಲ. ಆದ್ದರಿಂದ ಮುಂದಿನ ಸಾಹಿತ್ಯ ಸಮ್ಮೇಳನದಲ್ಲಿ ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಬೇಕು. ಸಮರ್ಪಕ ವ್ಯವಸ್ಥೆಗಳನ್ನು ಮಾಡಬೇಕು. ಹೊರತು ಸಾರ್ವಜನಿಕರಿಗೆ ಊಟವಿಲ್ಲ ಎಂದು ಹೇಳುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ಹೆಚ್ಚಿನ ಮಂದಿ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅದರ ಬಗ್ಗೆ ಸಭೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಮಕ್ಕಳನ್ನು ಕಳೆದುಕೊಂಡು
ಪಾಲಕರ ಪರದಾಟ
ಬಿಜಾಪುರ: ಬಿಜಾಪುರದಲ್ಲಿ ನಡೆಯುತ್ತಿರುವ ಎರಡನೇ ದಿನದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹರಿದು ಬರುತ್ತಿರುವ ಅಪಾರ ಜನಸ್ತೋಮದಲ್ಲಿ ತಂದೆ, ತಾಯಿಗಳು ತಮ್ಮ ಮಕ್ಕಳನ್ನು ಕಳೆದುಕೊಂಡು ಆತಂಕದ ಕ್ಷಣಗಳನ್ನು ಅನುಭವಿಸಬೇಕಾಯಿತು. ಸಮ್ಮೇಳನದ ಆರಂಭ ದಿನವೂ ಜನಸಂದಣಿಯಲ್ಲಿ ಮಕ್ಕಳು ತಮ್ಮ ತಂದೆ, ತಾಯಿಗಳಿಂದ ದೂರಾಗಿ ಅಳುತ್ತ ನಿಂತಿರುವುದು ಕಂಡು ಬಂತು. ಇಂದೂ ಕೂಡಾ ಸಮ್ಮೇಳನದ ಕಡೆಗೆ ಸಹಸ್ರಾರು ಜನರು ಆಗಮಿಸುತ್ತಿರುವುದು ಗದ್ದಲದಲ್ಲಿ ತಂದೆ-ತಾಯಿಗಳಿಂದ ಮಕ್ಕಳು ಅಗಲಿ ಅಳುತ್ತ ನಿಲ್ಲುವುದು. ಮಗು ಕಳೆದುಕೊಂಡ ತಂದೆ- ತಾಯಿಗಳು ಆತಂಕದ ಕ್ಷಣಗಳನ್ನು ಅನುಭವಿಸುವುದು ಎರಡೂ ಏಕ ಕಾಲಕ್ಕೆ ನಡೆದಿತ್ತು. ತಂದೆ- ತಾಯಿಗಳನ್ನು ಕಳೆದುಕೊಂಡ ಮಕ್ಕಳನ್ನು ಸಂಘಟಕರು ವೇದಿಕೆಯ ಹತ್ತಿರ ಕರೆದುಕೊಂಡು ಹೋಗಿ ಧ್ವನಿವರ್ಧಕದ ಮೂಲಕ ಕಾಣೆಯಾದ ಮಕ್ಕಳ ಹೆಸರನ್ನು ಕೂಗಿ ಹೇಳುತ್ತಿದ್ದರು. ಧ್ವನಿವರ್ಧಕದ ಮೂಲಕ ಕಾಣೆಯಾದ ಮಗುವಿನ ಹೆಸರು ಘೋಷಿಸಿದರೂ ಪೋಷಕರು ಆಗಮಿಸದೇ ಇದ್ದಾಗ ವೇದಿಕೆಯ ಅಕ್ಕ ಪಕ್ಕದ ಕ್ಯಾಮೆರಾ ಪರದೆಯ ಮೇಲೆಯೂ ತೋರಿಸುತ್ತಿದ್ದರು. ಅನಂತರ ಪೋಷಕರು ತಮ್ಮ ಮಕ್ಕಳನ್ನು ಗುರುತಿಸಿ ಪರಸ್ಪರ ಎದೆಗಪ್ಪಿಕೊಂಡು ಕೊಂಡೊಯ್ಯುತ್ತಿರುವ ದೃಶ್ಯ ಹೃದಯ ಸ್ಪರ್ಶಿಯಾಗಿತ್ತು.
ಕನ್ನಡ ಧ್ವಜಕ್ಕೆ ಬೇಡಿಕೆ
ಬಿಜಾಪೂರ: ಬಿಜಾಪುರದಲ್ಲಿ ನಡೆಯುತ್ತಿರುವ 79 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಧ್ವಜ, ಧ್ವಜ ಬಣ್ಣದ ಶಾಲು, ರುಮಾಲಿಗೆ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದೆ. ಬಹುತೇಕ ಕನ್ನಡಾಭಿಮಾನಿಗಳು ಕನ್ನಡ ಧ್ವಜ, ಶಾಲುಗಳನ್ನು ಕೇಳಿ ಖರೀದಿಸುತ್ತಿದ್ದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಜನರು ಬರುವಾಗಲೇ ಧ್ವಜ, ಶಾಲು, ರುಮಾಲು, ಟೊಪ್ಪಿಯನ್ನು ಕೊಂಡು ಬಂದಿದ್ದರೆ, ಇನ್ನು ಕೆಲವರು ಸಮ್ಮೇಳನದ ಸಂದರ್ಭದಲ್ಲೇ ಖರೀದಿಸುತ್ತಿದ್ದುದು ಕಂಡು ಬಂತು. ಬಿಜಾಪುರದ ತುಂಬೆಲ್ಲ ಕನ್ನಡ ಧ್ವಜ, ಶಾಲು, ರುಮಾಲುಗಳೇ ಕಾಣುತ್ತಿದ್ದವು. ಕೆಲ ಯುವಕರು ಒಂದೇ ರೀತಿಯ ಶಾಲು ಹೆಗಲಿಗೆ ಹೊದ್ದು, ತಲೆಗೆ ರುಮಾಲು ಸುತ್ತಿಕೊಂಡು ಕನ್ನಡಾಂಬೆಗೆ ಜಯವಾಗಲಿ ಎಂದು ಕೂಗುತ್ತಿದ್ದರು. ಸಮ್ಮೇಳನ ಪ್ರಾರಂಭವಾದ ಶನಿವಾರ ಹಾಗೂ ಭಾನುವಾರ ಸೇರಿ ಒಟ್ಟು ರು. 30 ಸಾವಿರ ವರೆಗೆ ಬಾವುಟ ಹಾಗೂ ಶಾಲುಗಳು ಮಾರಾಟವಾಗಿವೆ ಎಂದು ಬಾವುಟ, ಶಾಲು ಮಾರಾಟ ಮಾಡುತ್ತಿದ್ದ ಬೆಳಗಾವಿಯ ರೇಖಾ ಪದ್ಮರಾಜ ಪಾಟೀಲ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

