ಬಿಜಾಪುರ

ಏಕೀಕರಣ ಆಯ್ತು, ಕನ್ನಡೀಕರಣ ಆಗಲಿ

Published On :

ಡಾ.ಫ.ಗು.ಹಳಕಟ್ಟಿ ವೇದಿಕೆ, ಬಿಜಾಪುರ
ಭಾಷಾವಾರು ಪ್ರಾಂತಗಳ ವಿಂಗಡನೆಯ ಬಳಿಕವೂ ದಕ್ಷಿಣ- ಉತ್ತರ ಎನ್ನುವಂತಿರುವ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಲು ಹಿರಿಯರೆಲ್ಲ ಸೇರಿ ಕರ್ನಾಟಕ ಏಕೀಕರಣ ಮಾಡಿದ್ದಾರೆ. ಆ ಹಿರಿಯರ ಆಶಯ ಕೈಗೂಡಬೇಕಿದ್ದರೆ ಕನ್ನಡೀಕರಣದ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.
ಸೋಮವಾರ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾವಂತರಿಗೆ ಕನ್ನಡ ಕಲಿಸುವ ಮತ್ತು ಕನ್ನಡದ ಮನಸ್ಸು ಹೊಂದುವುದು ಅಗತ್ಯವಿದ್ದು, ಕನ್ನಡೀಕರಣದ ಹೊಸ ಚಳವಳಿಗೆ ಎಲ್ಲರೂ ಕೈಜೋಡಿಸಿ ಎಂದು ವಿನಂತಿಸಿದರು.
ಭಾಷೆಯ ಅಭಿವೃದ್ಧಿ ವಿಷಯದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಶೋಚನೀಯವಿದೆ. ಇದು ಪರಿಹಾರವಾಗಬೇಕಿದ್ದರೆ, ಕನ್ನಡ ನಾಡು, ನುಡಿ, ಜಲದ ಬಗ್ಗೆ ಗೌರವ ಇರುವ, ಹೋರಾಟದಲ್ಲಿ ತೊಡಗಿಕೊಳ್ಳುವ ಆಸಕ್ತಿ ಇದ್ದವಿರಿಗೆ  ಮಾತ್ರ ಆಯಾ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು. ಜನತೆ ಕೂಡ ಅಂಥವರನ್ನೇ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕನ್ನಡ ನಾಡು ಕಟ್ಟುವ ವಿಷಯದಲ್ಲಿ ಕಸಾಪ ಈ ಸಮ್ಮೇಳನದಲ್ಲಿ ತೆಗೆದುಕೊಂಡಿರುವ ಎಲ್ಲ ನಿರ್ಣಯಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಬಲಿಸುತ್ತದೆ.    ಅಲ್ಲದೇ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಲಿದೆ ಎಂದು ಅವರು ತಮ್ಮ ಬೆಂಬಲ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳ ಕೊರತೆಯ ನೆಪ ಹೇಳಿ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದು ತರವಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದ ಚಂದ್ರು, ಆಯಾ ಶಾಲೆಗಳಿಗೆ ಸಮಗ್ರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಬಡವರ ಮಕ್ಕಳು ಯಾವುದೇ ಮುಜುಗರ ಇಲ್ಲದೇ  ಶಾಲೆಗೆ ಹೋಗುವ ವಾತಾವರಣ ನಿರ್ಮಿಸುವುದು ಈ ಸಮಸ್ಯೆಗೆ ಪರಿಹಾರ ಎಂದರು.
ರಾಷ್ಟ್ರೀಯ ಭಾಷಾ ನೀತಿ, ರಾಷ್ಟ್ರೀಯ ಉದ್ಯೋಗ  ನೀತಿ ಮತ್ತು ರಾಷ್ಟ್ರೀಯ ಜಲ ನೀತಿಗಾಗಿ ಪ್ರಾಧಿಕಾರ ನಿರಂತರ ಹೋರಾಟ ಮಾಡಲಿದೆ. ಅದಕ್ಕೆ ಸಮಸ್ತ ಕನ್ನಡಿಗರ ಬೆಂಬಲ ಬೇಕಿದೆ ಎಂದು ಚಂದ್ರು ಕೋರಿದರು.
ಕನ್ನಡ ಮಹಾದ್ವಾರವಾಗಲಿ: ತೋಂಟದ: ಸಾನ್ನಿಧ್ಯ ವಹಿಸಿ ಮಾತನಾಡಿದ ಕನ್ನಡ ಜಗದ್ಗುರು ಎಂದೇ ಖ್ಯಾತರಾಗಿರುವ ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ, ಕನ್ನಡ ಭಾಷೆ ಉಳಿಯುವುದು, ನಶಿಸುವುದು ಸಮಸ್ತ ಕನ್ನಡಿಗರ ಕೈಯಲ್ಲಿದೆ. ಕನ್ನಡ ರಾಜ್ಯ ಭಾಷೆಯಾಗಿ ಹೊರಹೊಮ್ಮಿ, ಶಿಕ್ಷಣದಲ್ಲಿ ಕನ್ನಡ ಮಹಾದ್ವಾರವಾಗಲಿ, ಅನ್ಯಭಾಷೆಗಳು ಕಿಟಕಿಗಳಗಾಲಿ ಎಂದು ಆಶಿಸಿದರು.
ಇಂದು ಅನೇಕ ಕನ್ನಡ ಪತ್ರಿಕೆಗಳು ಹೊರಬರುತ್ತಿದ್ದು, ಅವುಗಳನ್ನು ಓದುವ ಮೂಲಕ ಪತ್ರಿಕೆಗಳನ್ನು ಬೆಳೆಸುವ ಜೊತೆಗೆ, ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದ ಅವರು ಆಶಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಾಗಿ ಊಟದ ವ್ಯವಸ್ಥೆ, ಅವ್ಯವಸ್ಥೆ ಬಗ್ಗೆ ಹೆಚ್ಚಾಗಿ ಚರ್ಚೆಯಾಗದೇ  ಸಾಹಿತ್ಯದ ಕುರಿತು ಚರ್ಚೆಯಾಗಬೇ ಕು. ಸಮ್ಮೇಳನಕ್ಕೆ ಆಗಮಿಸುವರು ತಾವೇ ಊಟದ ಬುತ್ತಿಯನ್ನು ಕಟ್ಟಿ ಕೊಂಡು ಬರುವಂತಾಗಬೇಕು ಎಂದರು. ವೇದಿಕೆಯಲ್ಲಿ ಸರ್ವಾಧ್ಯಕ್ಷ ಕೋ. ಚೆನ್ನಬಸಪ್ಪ, ಡಾ. ತೋಂಟದ ಸಿದ್ಧಲಿಂಗ ಶ್ರೀಗಳು, ಡಾ.ಎಂ.ಎಂ. ಕಲಬುರ್ಗಿ, ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಇದ್ದರು.
- ಮಲ್ಲಿಕಾರ್ಜುನ ಸಿದ್ದಣ್ಣವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.