ದಾರಿ ತಪ್ಪಿದ ನ್ಯಾಯಾಂಗ, ಮಾಧ್ಯಮ, ಸಾಹಿತ್ಯ: ಕೋಚೆ

Updated on

ಬಿಜಾಪುರ: ಸಾಹಿತ್ಯ, ನ್ಯಾಯಾಂಗ, ಮಾಧ್ಯಮ ಮೂರು ದಾರಿ ಬಿಟ್ಟಿವೆ ಎಂಬುದನ್ನು ನಾನು ಒಪ್ಪುತ್ತೇನೆ. ಈ ಮೂರು ಸರಿ ಹೋಗಬೇಕು. ಸಮಾಜಕ್ಕೆ ಇದರಿಂದ ಹಾನಿಯಾಗುತ್ತದೆ. ಈ ಮೂರು ಕ್ಷೇತ್ರಗಳ ಸುಧಾರಣೆಗೆ ಎಲ್ಲರೂ ಶ್ರಮಿಸಬೇಕು ಎಂದು 79 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೋ. ಚೆನ್ನಬಸಪ್ಪ ಅಭಿಪ್ರಾಯಪಟ್ಟರು.
ಸೋಮವಾರ ವಾರ್ತಾ ಇಲಾಖೆ ಏರ್ಪಡಿಸಿದ್ದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಎಲ್ಲ ರಂಗದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಇದಕ್ಕೆ ಸರ್ಕಾರ ಅಥವಾ ಬೇರೆ ಯಾರನ್ನೋ ದೂಷಿಸುವುದಾಗಬಾರದು. ಸರ್ಕಾರ ಜಾರಿಗೆ ತಂದಿರುವ ಸುವರ್ಣ ಗ್ರಾಮ, ಬಿಸಿ ಊಟ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಎಲ್ಲವೂ ಒಳ್ಳೆಯ ಯೋಜನೆಗಳಾಗಿವೆ. ಇವು ಕೆಟ್ಟ ಯೋಜನೆಗಳಾಗಲು ಅಧಿಕಾರಿಗಳು ಹಾಗೂ ಜನರು ಕಾರಣ. ಮೊದಲು ಜನರು ಒಳ್ಳೆಯವರಾಗಬೇಕು ಎಂದು ಹೇಳಿದರು.
ಅಕ್ಷರ ಜಾತ್ರೆ ನಿರಂತರವಾಗಲಿ: ಮನಸ್ಸಿನ ಸ್ಥಿತಿ ಹಾಗೂ ಜೀವನ ಬೆಳಗಿಸುವ ಶಕ್ತಿ ಸಾಹಿತ್ಯಕ್ಕಿದೆ. ಆದ್ದರಿಂದ ಅಕ್ಷರ ಜಾತ್ರೆಗಳು ಮೇಲಿಂದ ಮೇಲೆ ನಡೆಯುತ್ತಿರಬೇಕು. ಅದಕ್ಕೆ ಇತಿಮಿತಿ ಇರಬಾರದು ಎಂದರು.
10 ಕವಿಗಳು ಸೇರಿ 100 ವರ್ಷದವರೆಗೆ ಕನ್ನಡ ಜಾಗೃತಿ ಮಾಡುವುದನ್ನು ಸಾಹಿತ್ಯ ಸಮ್ಮೇಳನಗಳು ಒಂದೇ ಸಲ ಮಾಡಲು ಸಾಧ್ಯವಾಗಿವೆ. ಈ ಮಾತನ್ನು ಕುವೆಂಪು ಅವರು ಈ ಹಿಂದೆಯೇ ಹೇಳಿದ್ದಾರೆ. ಸಾಹಿತ್ಯ ಸಮ್ಮೇಳನಗಳಿಗೆ ಪ್ರತಿ ವರ್ಷ ಹಾಗೂ ಮೂರು ವರ್ಷಗಳು ಎಂದು ನಿರ್ಬಂಧವಿರಬಾರದು. ವರ್ಷಕ್ಕೊಮ್ಮೆ ಬಾದಾಮಿ ಬನಶಂಕರಿ ಜಾತ್ರೆ ಹಾಗಿರಬೇಕು. ರಾಮಕೃಷ್ಣ ಪರಮಹಂಸರು ದೇವರ ಮುಂದಿನ ದೀಪ ನಿತ್ಯ ಬೆಳಗುತ್ತಿರಬೇಕು ಎಂದಿದ್ದಾರೆ. ಕನ್ನಡ ಜಾಗೃತಿ ದೇವರ ಮುಂದಿನ ದೀಪದಂತೆ ನಿರಂತರವಾಗಿ ಬೆಳಗುತ್ತಿರಬೇಕು. ಹೆಚ್ಚು ಹೆಚ್ಚು ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುವುದರಿಂದ ಜನ ಸಾಮಾನ್ಯರಲ್ಲಿ ಕನ್ನಡದ ಬಗ್ಗೆ ಜಾಗೃತಿ ಹೆಚ್ಚುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮನಸ್ಸು ಶುದ್ಧಿಗೊಳಿಸುವ ಕೆಲಸವಾಗಲಿ:  ಒಳ್ಳೆಯದನ್ನು ಮತ್ತೆ ಮತ್ತೆ ಹೇಳುವುದರಿಂದ ಒಳ್ಳೆಯದಾಗುತ್ತದೆ. ಮನುಷ್ಯರ ಮನಸ್ಸು ಶುದ್ಧಿಯಾಗಬೇಕು. ಪತ್ರಕರ್ತರದ್ದೂ ಮನುಷ್ಯರ ಮನಸ್ಸನ್ನು ಶುದ್ಧಿಗೊಳಿಸುವ ಕೆಲಸವಾಗಿದೆ ಎಂದು ಅವರು ಹೇಳಿದರು.
ರಾಜಕಾರಣಿಗಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಬಾರದು, ಸಾಹಿತಿಗಳು ರಾಜಕೀಯ ಕ್ಷೇತ್ರದಲ್ಲಿ ಮೂಗು ತೂರಿಸಬಾರದು ಎಂಬುವುದು ಸರಿಯಲ್ಲ. ಸಾಹಿತಿಗಳು ಜನರನ್ನು ಸಾಹಿತ್ಯದ ಮೂಲಕ ಒಳ್ಳೆಯ ಪಥದತ್ತ ಕೊಂಡೊಯ್ಯುತ್ತಾರೆ. ಸರ್ಕಾರ ಜನತೆಗೆ ಒಳ್ಳೆಯದನ್ನು ಮಾಡಲು ಶಾಸನ ರೂಪಿಸುತ್ತದೆ. ಸಾಹಿತಿ ಹಾಗೂ ರಾಜಕಾರಣಿಗಳಲ್ಲಿ ಸಮನ್ವಯತೆ ಇರಬೇಕು ಎಂದರು.
ನ್ಯಾಯಾಲಯದ ತೀರ್ಪು ಕನ್ನಡದಲ್ಲಿ ಬರಬೇಕು ಎಂಬುವುದು ಸರಿಯಷ್ಟೇ. ಇಂಗ್ಲಿಷ್‌ನಲ್ಲಿ ಬಂದರೆ ಅದು ಸ್ವಲ್ಪ ಜನರಿಗೆ ತಲುಪುತ್ತದೆ. ಕನ್ನಡದಲ್ಲಿ ತೀರ್ಪು ನೀಡುವ ಭಾವ ನ್ಯಾಯಾಧೀಶರಲ್ಲಿ ಬರಬೇಕು. ನ್ಯಾಯಾಧೀಶ ಬಾಲಕೃಷ್ಣ ಎಂಬುವರು 2,500 ತೀರ್ಪುಗಳನ್ನು ಕನ್ನಡದಲ್ಲಿಯೇ ಬರೆದಿದ್ದಾರೆ. ಈ ಭಾವ ಎಲ್ಲರಲ್ಲೂ ಬರಬೇಕು. ಆಗ ನ್ಯಾಯಾಲಯಗಳಲ್ಲಿ ಕನ್ನಡ ಸರಿಯಾಗಿ ಅನುಷ್ಠಾನವಾಗುತ್ತದೆ ಎಂದು ಹೇಳಿದರು.
ಭಾರತದಲ್ಲಿ ಜನರು ಬಯಸಿದರೆ ಯಾವುದೇ ಧರ್ಮಕ್ಕೆ ಮತಾಂತರ ಹೊಂದಲು ಅವಕಾಶವಿದೆ ಎಂದು ತಿಳಿಸಿದರು.
ದೇಶದ ಐಕ್ಯತೆ ಬಲಪಡಿಸಬೇಕು. ದೇಶ ಒಡೆಯುವ ಕೆಲಸ ಮಾಡಬಾರದು. ನಾವೆಲ್ಲರೂ ಒಂದೇ ಜಾತಿ, ಮತ, ಪಂಥಕ್ಕೆ ಸೇರಿದವರಾಗಿರಬೇಕು. ದೇಶದ ಅಖಂಡತೆ ಉಳಿವಿಗಾಗಿ ಪತ್ರಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪತ್ರಿಕೆ ಪ್ರಜಾಪ್ರಭುತ್ವದ ನಾಲ್ಕನೆ ಆಧಾರಸ್ತಂಭವಾಗಿದೆ. ಪತ್ರಕರ್ತರು ತಮ್ಮ ಕಾರ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಣಕ್ಕಾಗಿ ವೃತ್ತಿ ಗೌರವ ಅಡ ಇಡಬಾರದು. ಬೆಂಗಳೂರಿನಲ್ಲಿ ಕೋರ್ಟ್ ಆವರಣದಲ್ಲಿ ಈಚೆಗೆ ಪತ್ರಕರ್ತರ ಮೇಲೆ ಹಲ್ಲೆ ನಡೆದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪತ್ರಕರ್ತರು ನ್ಯಾಯಾಲಯದ ಆವರಣದಲ್ಲಿ ನ್ಯಾಯಾಂಗದ ಗೌರವಕ್ಕೆ ಚ್ಯುತಿ ಬರದಂತೆ ಕಾಳಜಿ ವಹಿಸಬೇಕು ಎಂದರು. ಅಕ್ಷರ ಜಾತ್ರೆಗೆ ಮೆರವಣಿಗೆ ಒಂದು ಆಕರ್ಷಕವಾಗಿರುತ್ತದೆ. ಊಟವೂ ಇರಬೇಕು ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯಗಳನ್ನು ಮಂಡಿಸುವುದು ತಪ್ಪಲ್ಲ. ಅವು ಆಚರಣೆಯಲ್ಲಿ ಬರದಿದ್ದರೆ ನಿರ್ಣಯಗಳನ್ನು ಪಾಸ್ ಮಾಡುವುದನ್ನೇ ಕೈ ಬಿಡುವುದೂ ವಿವೇಕದ ನಡೆಯಲ್ಲ. ಸರ್ಕಾರ ನಿರ್ಣಯಗಳನ್ನು ಜಾರಿ ಮಾಡಬೇಕಾಗುತ್ತದೆ. ಜನಪ್ರತಿನಿಧಿಗಳು ಹಾಗೂ ಜನರು ಈ ಬಗ್ಗೆ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿರಬೇಕು ಎಂದು ಹೇಳಿದರು.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಇದ್ದರು.
- ರುದ್ರಪ್ಪ ಆಸಂಗಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com