ಬಿಜಾಪುರ

ದೂರದ ಗಂಗಾಜಲಕ್ಕಿಂತ.... ನಮ್ಮ ಹಳ್ಳದ ನೀರು ಶ್ರೇಷ್ಠ: ಕಲ್ಬುರ್ಗಿ

Published On :

ಡಾ.ಫ.ಗು.ಹಳಕಟ್ಟಿ ವೇದಿಕೆ, ಬಿಜಾಪುರ
ಗಂಗಾ ಜಲಕ್ಕಿಂತ ನಮ್ಮೂರುಗಳಲ್ಲಿ ಹರಿಯುವ ಹಳ್ಳದ ನೀರೇ ಶ್ರೇಷ್ಠ. ನೆಲ, ಜಲ, ಸಂಸ್ಕೃತಿ, ಸಂಪ್ರದಾಯಗಳ ವಿಷಯದಲ್ಲಿ ಸ್ವಾಭಿಮಾನಿಗಳು ಆಗುವುದು ಇಂದಿನ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಡಾ. ಎಂ.ಎಂ. ಕಲಬುರ್ಗಿ ಅಭಿಪ್ರಾಯಪಟ್ಟರು.
ಕಳೆದ ಮೂರು ದಿನಗಳಿಂದ ವೈಭವಯುತವಾಗಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ನಮ್ಮ ಕೀಳರಿಮೆಯೇ ನಮ್ಮನ್ನು ಗುಲಾಮಗಿರಿಗೆ ತಳ್ಳಿದೆ. ಮತ್ತೊಬ್ಬರ ನೆರಳಿನಲ್ಲಿ ಬೆಳೆಯುವಂತೆ ಮಾಡಿದೆ. ಇನ್ನಾದರೂ ಸ್ವಾಭಿಮಾನ, ಸ್ವಂತಿಕೆ, ನಮ್ಮತನಗಳ ಬಗ್ಗೆ ಅಭಿಮಾನ ಹೊಂದಬೇಕಿದೆ ಎಂದು ಕರೆ ನೀಡಿದರು.
ಹಿಂದೆ ಸಚಿವ ಕೃಷ್ಣಯ್ಯ ಶೆಟ್ಟಿ ಶಿವರಾತ್ರಿ ದಿನದಂದು ಗಂಗಾಜಲ ತಂದು ವಿತರಿಸಿದ್ದು ಮತ್ತು ತಿರುಪತಿ ಲಡ್ಡು ಪ್ರಸಾದ ಹಂಚಿದ್ದನ್ನು ಖಂಡಿಸಿದ ಡಾ. ಕಲಬುರ್ಗಿ, ನಮ್ಮ ನೆಲ, ಜಲ, ಭಾಷೆಯನ್ನು ಈ ರೀತಿ ಅಣಕಿಸುವವರಿಗೆ ಜನತೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಆಧುನಿಕ ಸಾಹಿತ್ಯದ ಮುಂಚೂಣಿಯಲ್ಲಿ ನಿಂತ ಕನ್ನಡದ ಬಹುತೇಕ ಸಾಹಿತಿಗಳು ಅನ್ಯ ಭಾಷಿಗರು. ಕೈಲಾಸಂ, ಮಾಸ್ತಿ, ಬೇಂದ್ರೆ, ಗೋವಿಂದ ಪೈ ಹೀಗೆ ಸಾಲು ಸಾಲು ಅನ್ಯ ಭಾಷಿಕ ಸಾಹಿತಿಗಳು ಕನ್ನಡ ಸಾಹಿತ್ಯದಲ್ಲಿ ಹಾಸು ಹೊಕ್ಕಾಗಿದ್ದಾರೆ.
ಮೇಲಾಗಿ ಉತ್ತರದ ಸಾಹಿತ್ಯ ಮತ್ತು ಸಾಹಿತಿಗಳನ್ನು ಗೌರವಿಸುತ್ತ ಬಂದೆವೇ ಹೊರತು ನಮ್ಮ ನೆಲದ ಸಾಹಿತಿ, ಕವಿಗಳನ್ನು ಕಡೆಗಣಿಸಲಾಯಿತು ಎಂದು ವಿಷಾದಿಸಿದರು.
ಹಾಜರಾತಿ ಕೊರತೆ ನೆಪದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ರಾಜ್ಯದಲ್ಲಿನ ಸಂಸ್ಕೃತ ಶಾಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಆದಾಗ್ಯೂ ಸಂಸ್ಕೃತ ಶಾಲೆಗಳನ್ನು ಮುಚ್ಚದೇ ಬರೀ ಕನ್ನಡ ಶಾಲೆಗಳನ್ನು ಏಕೆ ಮುಚ್ಚುತ್ತಿದ್ದೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸ್ವಾಭಿಮಾನ ಬೆಳೆಸಿಕೊಳ್ಳುವ ಜತೆಗೆ ಸಾಮಾಜಿಕ ನ್ಯಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎರಡನ್ನೂ ಕಾಪಾಡುವ ಹೊಣೆ ಇಂದು ಸಾಹಿತಿಗಳ ಮೇಲಿದೆ ಎಂದು ಡಾ. ಕಲಬುರ್ಗಿ ಕರೆ ನೀಡಿದರು.
ವೇದಿಕೆಯಲ್ಲಿ ಗದುಗಿನ ಶ್ರೀಗಳು, ಸರ್ವಾಧ್ಯಕ್ಷ ಕೋ. ಚನ್ನಬಸಪ್ಪ, ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಡಾ. ಮುಖ್ಯಮಂತ್ರಿ ಚಂದ್ರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.