ಹಳೆ ಪುಸ್ತಕ ಖರೀದಿಗೆ ಹೊಸ ಹುರುಪು!
ಬಿಜಾಪುರ: ನಗರದ ಸೈನಿಕ ಶಾಲೆ ಮೈದಾನದಲ್ಲಿ ನಡೆದಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಪುಸ್ತಕಗಳ ಭರಾಟೆಯ ಮಾರಾಟದ ನಡುವೆ ಹಳೆ ಪುಸ್ತಕಗಳ ಮಾರಾಟ ಅಂಗಡಿಯೊಂದು ಎಲ್ಲರ ಗಮನಸೆಳೆದು ಜನರು ಅರ್ಧ ಬೆಲೆಗೆ ತಮಗೆ ಬೇಕಾದ ಪುಸ್ತಕ ಕೊಳ್ಳಲು ಮುಗಿಬಿದ್ದ ದೃಶ್ಯ ಕಂಡುಬಂತು.
ಧಾರವಾಡದ ಪ್ರಕಾಶ ದೇಶಪಾಂಡೆ ಅವರು ಧಾರವಾಡದಲ್ಲಿಯೇ ಹಳೆಯ ಪುಸ್ತಕ ಮಾರಾಟ ಅಂಗಡಿ ಇಟ್ಟುಕೊಂಡಿದ್ದಾರೆ. 10-15 ವರ್ಷಗಳಿಂದ ಅವರು ಈ ಕೆಲಸ ಮಾಡುತ್ತಿದ್ದಾರೆ. ಯಾವುದೇ ಹಳೆಯ ಪುಸ್ತಕ ಖರೀದಿಸಿದರೂ ಅರ್ಧ ಬೆಲೆ ಅಥವಾ ಕೆಲವು ಬಾರಿ ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತ ಜೀವನ ನಿರ್ವಹಿಸುತ್ತಿದ್ದಾರೆ.
ಈ ವ್ಯಕ್ತಿ ಸಾಹಿತ್ಯ ಸಮ್ಮೇಳನದ ವಿಷಯ ತಿಳಿದು ಭಾನುವಾರವೇ ಸಮ್ಮೇಳನ ಮುಖ್ಯ ವೇದಿಕೆ ಮುಂದೆ ಖುಲ್ಲಾ ಜಾಗೆಯಲ್ಲಿ ನೆಲದ ಮೇಲೆ ಪುಸ್ತಕಗಳನ್ನು ಹರವಿಕೊಂಡು ಕುಳಿತು ವ್ಯಾಪಾರ ಪ್ರಾರಂಭಿಸಿದರು. ಈ ಸ್ಥಳದ ಅನತಿ ದೂರದಲ್ಲಿ ಅಂದಾಜು 500 ಮಳಿಗೆಗಳಲ್ಲಿ ಹೊಸ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದ್ದರೂ ಜನರು ಹಳೆ ಪುಸ್ತಕಗಳ ಖರೀದಿಯತ್ತ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಗಮನಕ್ಕೆ ಬಂತು. ಯಾವ್ಯಾವ ಪುಸ್ತಕ: ಹತ್ತಿರ ಹೋಗಿ ನೋಡಿದಾಗ ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಮರಾಠಿ ಹೀಗೆ ಹಲವು ಭಾಷೆಗಳ ಪುಸ್ತಕಗಳು ಇಲ್ಲಿ ಇದ್ದವು. ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಗೈಡುಗಳು, ನೋಟ್ಸುಗಳು, ಪಠ್ಯಪುಸ್ತಕಗಳು, ಕಥೆ, ಕವನ ಸಂಕಲನಗಳು, ಜೀವ ಸಾಧನೆ ಬಿಂಬಿಸುವ ಆತ್ಮಕಥೆಗಳು, ಸಂಪಾದಿತ ಕೃತಿಗಳು, ವೈಚಾರಿಕ ಜ್ಞಾನ ಬೀರುವ ಪುಸ್ತಕಗಳು, ಹಳಗನ್ನಡದ ಗ್ರಂಥಗಳು, ವಿಜ್ಞಾನ ಮತ್ರ ತಂತ್ರಜ್ಞಾನದ ಪುಸ್ತಕಗಳು, ಮಕ್ಕಳಿಗೆ ಉಪಯುಕ್ತವಾದ ಚಿತ್ರಕಥೆಗಳು, ಶಿಕ್ಷಕರು ಸರ್ಕಾರಿ ನೌಕರರಿಗೆ ಅಗತ್ಯವಾದ ಕೈಪಿಡಿಗಳು, ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಕೃತಿಗಳು ಹೀಗೆ ನೂರಾರು ರೀತಿಯ ಸಾಹಿತ್ಯ ಪ್ರಕಾರದ ಪುಸ್ತಕಗಳು ಇಲ್ಲಿ ಲಭ್ಯವಿದ್ದವು. ಬಿಜಾಪುರ ಸೇರಿದಂತೆ ಬೆಂಗಳೂರು, ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ದಾವಣಗೆರೆ, ಮೈಸೂರು, ಹಾಸನ, ಚಾಮರಾಜಪೇಟೆ ಮುಂತಾದ ಭಾಗಗಳಿಂದ ಆಗಮಿಸಿದ್ದ ಸಾಹಿತ್ಯಾಸಕ್ತರು ಇಲ್ಲಿಗೆ ಭೇಟಿ ನೀಡಿ ತಮಗಿಷ್ಟದ ಪುಸ್ತಕಗಳನ್ನು ಅರ್ಧ ಬೆಲೆಗೆ ಕೊಂಡುಕೊಳ್ಳುವುದು ಸಾಮಾನ್ಯವಾಗಿತ್ತು. ಹಳೆ ಪುಸ್ತಕಗಳೆಂದರೂ ಯಾವುದೇ ಪುಸ್ತಕಗಳು ಹರಿದಿಲ್ಲದಿರುವುದು, ಅಂದಗೆಟ್ಟಿಲ್ಲದಿರುವುದು ಮತ್ತು ಒಳಗಿನ ಪುಟಗಳು ನಿಯಮಿತವಾಗಿ ಇದ್ದುದು ಅಚ್ಚರಿ ಉಂಟು ಮಾಡಿದರೂ ಹಳೆ ಪುಸ್ತಕ ವ್ಯಾಪಾರಿಯ ಪುಸ್ತಕ ಕಾಳಜಿ ಇಲ್ಲಿ ವ್ಯಕ್ತವಾಗುತ್ತಿತ್ತು.
ಶಿಕ್ಷಕರು ಮತ್ತು ಸ್ಥಳೀಯ ಸಾಹಿತಿಗಳು ತಮಗಿಷ್ಟವಾದ ಪುಸ್ತಕದ ಹೆಸರು ಹೇಳಿ ದೊರಕುತ್ತದೆಯೇ ಎಂದು ಕೇಳಿದಾಗ ವ್ಯಾಪಾರಿ ಪ್ರಕಾಶ ಅವರು ಒಂದು ಕ್ಷಣ ವಿಚಾರಮಾಡಿ ಅವರು ಕೇಳಿದ ಪುಸ್ತಕ ಇದೆಯೋ ಇಲ್ಲವೋ ಎಂದು ಹೇಳಿಬಿಡುತ್ತಿದ್ದರು. ಸಾಕಷ್ಟು ಹೆಚ್ಚಿನ ಸಂಖ್ಯೆಯ ಪುಸ್ತಕಗಳು ಅಲ್ಲಿದ್ದರೂ ಜನರು ಕೇಳಿದ ಪುಸ್ತಕ ಇದೆಯೋ ಇಲ್ಲವೋ ಎಂದು ಹೇಳುವ ವ್ಯಾಪಾರಿಯ ಪರಿಣಿತಿ ನೆರೆದವರಲ್ಲಿ ಆಶ್ಚರ್ಯ ಮೂಡುವಂತೆ ಮಾಡಿತು.
- ಡಿ.ಬಿ. ವಡವಡಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

