ಬಿಜಾಪುರ

ಮಾಂಗಲ್ಯ ಕಿತ್ತು ಪರಾರಿ

Published On :

ಬಿಜಾಪುರ:  ನಗರದ ಆನಂದ ನಗರ ಬಡಾವಣೆಯಲ್ಲಿ ಮಂಗಳವಾರ ಕಳ್ಳರು ಮಹಿಳೆಯೊಬ್ಬಳ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆನಂದ ನಗರ ಬಡಾವಣೆಯ ನಿವಾಸಿ ಮಂಜುಳಾ ಮೋಹನ ಜಕಾಯಿ ತನ್ನ ಪುತ್ರಿಯೊಂದಿಗೆ ಆದರ್ಶನಗರ ಬಡಾವಣೆ ಕಡೆಗೆ ಕಾರ್ಯ ನಿಮಿತ್ತ ಹೊರಟಿದ್ದಳು. ರಸ್ತೆಯಲ್ಲಿ ಇಬ್ಬರು ಅಪರಿಚಿತರು ಬೈಕ್ ಮೇಲಿಂದ ಬಂದು ಕೊರಳಲ್ಲಿ ರು. 1,20,000 ಮೌಲ್ಯದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾಥ ಶಿಶು ಪತ್ತೆ
ಬಿಜಾಪುರ:  ನಗರದಲ್ಲಿ ಅನಾಥ ನವಜಾತ ಗಂಡು ಶಿಶು ಪತ್ತೆಯಾಗಿದ್ದು, ಅನಾರೋಗ್ಯದ ನಿಮಿತ್ತ ಬಿಜಾಪುರದ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲ ಸಂಜೀವಿನಿ ಯೋಜನೆಯಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮಗುವಿನ ಚಿಕಿತ್ಸೆಗೆ ರು. 65,000 ಖರ್ಚಾಗಿದ್ದು, ಚಿಕಿತ್ಸೆ ಮುಂದುವರೆದಿದೆ.  ಹೆಚ್ಚಿನ ಚಿಕಿತ್ಸೆಗಾಗಿ ಸಾರ್ವಜನಿಕರ ನೆರವು ಅಗತ್ಯವಿದ್ದು, ದಾನಿಗಳು ಮಗುವಿನ ಜೀವ ಉಳಿಸಲು ಅಧ್ಯಕ್ಷರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಸರಕಾರಿ ಬಾಲಕರ ಬಾಲಮಂದಿರ (ಹಿರಿಯ) ಮನಗೂಳಿ ರಸ್ತೆ, ಬಿಜಾಪುರ ದೂರವಾಣಿ: 08352277126, ಮೊ. 9448118454 ಇಲ್ಲಿಗೆ ಸಂಪರ್ಕಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಕುಮಾರವ್ಯಾಸ ಜಯಂತಿ
ಬಿಜಾಪುರ:  ನಗರದ ರಾಘವೇಂದ್ರ ಕಾಲೋನಿಯಲ್ಲಿ ಕುಮಾರ ವ್ಯಾಸ ವೇದಿಕೆ ವತಿಯಿಂದ ಕುಮಾರವ್ಯಾಸ ಜಯಂತಿಯನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು. ಗದುಗಿನ ಭಾರತದ ಖಾಂಡವವನ ದಹನ ಪ್ರಸಂಗದ ಷಟ್ಪದಿ ಕಾವ್ಯದ ಗಮಕ ವಾಚನ, ವ್ಯಾಖ್ಯಾನವನ್ನು ಶಾಂತಾ ಕೌತಾಳ ಮತ್ತು ಕಲ್ಯಾಣರಾವ ದೇಶಪಾಂಡೆ ಅವರು ಮಾಡಿದರು. ಉಷಾ ಡಂಬಳ ಅವರು ಗದುಗಿನ ಭಾರತದ ಪಾತ್ರ ಪರಿಚಯ ಮಾಡಿಕೊಟ್ಟರು. ಮೋಹನ ಕೌತಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಶ್ರೀನಿವಾಸ ಅಂಬಿಗೇರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಲ್ಹಾದರಾವ ಕುಲಕರ್ಣಿ, ಬಾಬುರಾವ ಕುಲಕರ್ಣಿ, ಶ್ರೀಪಾದ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು. ಮೋಹನ ಕುಲಕರ್ಣಿ ಸ್ವಾಗತಿಸಿ, ನಿರೂಪಿಸಿದರು. ವೆಂಕಟೇಶ ಕುಲಕರ್ಣಿ ವಂದಿಸಿದರು. 
ಬಡ್ಡಿ ದರ ಪರಿಷ್ಕರಣೆ
ಬಿಜಾಪುರ:  ನಗರದ ಡಿಸಿಸಿ ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ವಿಶೇಷ ಅವಧಿಯ ಠೇವು ಸಂಗ್ರಹಣೆ ಮಾಸಾಚರಣೆಯನ್ನು ಜ.28 ರಿಂದ ಫೆ.28 ರವರೆಗೆ ಪ್ರಾರಂಭಿಸಲಾಗಿದೆ. ಬಡ್ಡಿ ದರ ಪರಿಷ್ಕರಿಸಲಾಗಿದ್ದು, 1 ರಿಂದ 3 ವರ್ಷದ ಅವಧಿಯ ರು. 1 ಕೋಟಿ ವರೆಗಿನ ಠೇವಣಿ ಮೇಲೆ ಶೇ. 9.75 ಮತ್ತು ರು. 1 ಕೋಟಿ ಮೇಲ್ಪಟ್ಟ ಠೇವಣಿಗೆ ಶೇ. 10 ರಂತೆ ಬಡ್ಡಿ ದರ ನಿಗದಿ ಪಡಿಸಿದೆ. ವಿಶೇಷ ಠೇವಣಿ ಯೋಜನೆ ಅಡಿ 500 ದಿನಗಳ ವಿಶೇಷ ಅವಧಿ ಠೇವಣಿ ಮೇಲೆ ಶೇ. 10.25 ರಂತೆ ಬಡ್‌ಡಿ ನೀಡಲಾಗುವುದು. ಈ ವಿಶೇಷ ಸೌಲಭ್ಯ ಸೀಮಿತ ಅವಧಿಯ ವರೆಗೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.