ವೇತನ ತಾರತಮ್ಯ: ಶಿಕ್ಷಕರ ಧರಣಿ
ಬಿಜಾಪುರ: ಶಿಕ್ಷಕರ, ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸುವುದು ಸೇರಿದಂತೆ ಇತರ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ಶಿಕ್ಷಕರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಎ.ಎಸ್. ಪಾಟೀಲ ಅವರು ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ನೆರೆ ರಾಜ್ಯ ಸರ್ಕಾರಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಅತ್ಯಂತ ಕಡಮೆ ವೇತನ ಪಡೆಯಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೇ ಬೇರೆ ಸರ್ಕಾರಿ ಇಲಾಖೆಗಳ ನೌಕರರಿಗಿಂತ ಶಿಕ್ಷಕರು, ಉಪನ್ಯಾಸಕರು ಕಡಮೆ ವೇತನ ಪಡೆಯುತ್ತಿದ್ದಾರೆ. ಈ ವೇತನ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಶಿಕ್ಷಕರು, ಉಪನ್ಯಾಸಕರಿಗೆ ನೀಡುವ ವಿಶೇಷ ವೇತನವನ್ನು ಮೂಲ ವೇತನದಲ್ಲಿ ವಿಲೀನಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಪ್ರಸಕ್ತ ಆಯವ್ಯಯ ಮುಂಗಡ ಪತ್ರದಲ್ಲಿ ಶಿಕ್ಷಕರ, ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಸಮಸ್ತ ಶಿಕ್ಷಕ ಸಮುದಾಯಕ್ಕೆ ಭಾರಿ ನಿರಾಸೆಯಾಗಿದೆ. ಸರ್ಕಾರ ತಕ್ಷಣ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ, ನಗರ ಭತ್ಯೆ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. 6ನೇ ವೇತನ ಸಮಿತಿಯ ಶಿಫಾರಸ್ಸುಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಮನೆ ಬಾಡಿಗೆ ಭತ್ಯೆ ಮತ್ತು ನಗರ ಭತ್ಯೆಗಳನ್ನು 2001ರ ಜನಗಣತಿ ಆಧಾರದ ಮೇಲೆ ಪುನರ್ ವರ್ಗೀಕರಿಸಿ 1-4-2012ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿರುತ್ತದೆ. ಆದರೆ ಪ್ರಸಕ್ತ ರಾಜ್ಯ ಬಜೆಟ್ನಲ್ಲಿ ಕೇವಲ ಬೆಂಗಳೂರು ನಗರಕ್ಕೆ ಈಗಿರುವ ಮನೆ ಬಾಡಿಗೆ ಭತ್ಯೆಯನ್ನು ಶೇ.25ರಿಂದ 30ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಬೆಂಗಳೂರು ನಗರದ ನೌಕರರ ಸಮುದಾಯಕ್ಕೆ ಮಾತ್ರ ಅನುಕೂಲವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕಾರ್ಯ ಮಾಡುವ 5 ಲಕ್ಷ ಶಿಕ್ಷಕರನ್ನು ಸರ್ಕಾರ ಕಡೆಗಣಿಸಿದಂತಾಗಿದೆ. ಇದು ನೌಕರರಲ್ಲಿಯೇ ತಾರತಮ್ಯ ಮಾಡಿದಂತಾಗಿದೆ. ಇದು ಅತ್ಯಂತ ನೋವಿನ ಸಂಗತಿ. ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೂ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಳ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಂಘದ ಕಾರ್ಯಾಧ್ಯಕ್ಷ ಎ.ಬಿ. ಬೂದಿಹಾಳ ಅವರು ಮಾತನಾಡಿ, ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿ ಬರುವ ನೌಕರರಿಗೆ ಶೇ. 30, 20,10ರಷ್ಟು ಮನೆ ಬಾಡಿಗೆ ಭತ್ಯೆಯನ್ನು ನೀಡಿ ಸಮಾನತೆ ಕಾಯ್ದುಕೊಂಡಿದೆ. ಈಗ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ಶೇ. 30ರಷ್ಟು ಮನೆ ಬಾಡಿಗೆ ಭತ್ಯೆ ನೀಡಿದೆ. ಇದೇ ರೀತಿ ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು, ಶಿಕ್ಷಕರುಗಳಿಗೆ ಶೇ. 20, 10ರಷ್ಟು ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಿಸಬೇಕು ಎಂದು ಅವರು ಸರ್ಕಾರವನ್ನು ಕೇಳಿಕೊಂಡರು.
ಇದೇ ಸಂದರ್ಭದಲ್ಲಿ ಎಸ್.ಸಿ. ಹಂಚಿನಾಳ, ಎಂ.ಕೆ. ಬಿರಾದಾರ, ಜಿ.ಎಸ್. ಬೇವನೂರ, ಅರ್ಜುನ ಲಮಾಣಿ, ಆರ್.ಜಿ. ಭಾವಿಕಟ್ಟಿ, ಎಸ್.ಸಿ. ಶೇಡಶ್ಯಾಳ ಮುಂತಾದವರು ಮಾತನಾಡಿದರು.
ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರು ಮನವಿ ಸ್ವೀಕರಿಸಿ, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಎಸ್.ಕೆ. ಸಾವಳಗಿಮಠ, ಸಿ.ಕೆ. ಬಜಂತ್ರಿ, ಎಸ್.ಎಸ್. ಡೋಣಿ, ಎಸ್.ಎಸ್. ಬೇನೂರ, ಝಡ್.ಐ. ಇಂಡಿಕರ, ಬಿ.ಬಿ.ಪಾಟೀಲ, ಆರ್.ಎನ್. ಸಜ್ಜನ, ಎ.ಎಫ್. ಅರಳಿಮಟ್ಟಿ, ಸಂಜೀವ ಚವ್ಹಾಣ, ಶಿಕ್ಷಕಿಯರಾದ ಎನ್.ಎಲ್. ಇಂಗಳೆ, ರಮಾ ನಾಗಾವಿ, ಡಿ.ವಿ. ಹುಡೇದ, ಕೆ.ಜಿ. ಭೈರವಾಡಗಿ, ಎಸ್.ಎಸ್. ಪಾಟೀಲ, ಎಲ್.ಎಂ. ಕೋರಿ ಮುಂತಾದ ಪ್ರಮುಖರು ಸೇರಿದಂತೆ ಅನೇಕ ಶಿಕ್ಷಕರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

