ಪೊಲೀಸ್ರ ಮ್ಯಾಲ ಕೈ ಮಾಡಿದ್ದು ಭಾಳ ತಪ್ಪು
ಕ.ಪ್ರ. ವಾರ್ತೆ ಸಿಂದಗಿ ಮಾ. 2
ಒಂದ ಕೈಯಿಂದ ಚಪ್ಪಾಳೆಯಾಗೊಲ್ಲ. ಪೊಲೀಸ್ರಿಂದ ಸ್ವಲ್ಪ ತಪ್ಪು ಆಗಿರ್ಬೇಕು. ಆದ್ರೂ ನೀವ ಪೊಲೀಸ್ರ ಮ್ಯಾಲ ಕೈ ಮಾಡಿದ್ದು ಭಾಳ ಭಾಳ ತಪ್ಪಾಗ್ಯೇದ. ಇದು ಲಂಬಾಣಿ ಸಮಾಜಕ್ಕ, ರಾಜ್ಯಕ್ಕ ಆದ ಅವಮಾನ...
ಇದು ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶು ಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ನಾಗಾವಿ ತಾಂಡಾ ಜನತೆಗೆ ಹೇಳಿದ ಬುದ್ಧಿಮಾತು.
ಶುಕ್ರವಾರ ರಾತ್ರಿ ತಾಲೂಕಿನ ನಾಗಾವಿ ತಾಂಡಾಕ್ಕೆ ಭೇಟಿ ನೀಡಿದ ಸಚಿವರು ತಾಂಡಾದ ಪ್ರತಿ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿ ನಂತರ ಜನರನ್ನುದ್ದೇಶಿಸಿ ಮಾತನಾಡಿದರು.
ಮಹಿಳೆಯರು ನಮಗೆಲ್ಲ ತಾಯಿ, ತಂಗಿ ಸಮಾನ. ಅವರಿಗೆ ಪೊಲೀಸರು ಕೆಟ್ಟ ಬೈಗುಳ ಬಯ್ಯಬಾರದಿತ್ತು. ಅವರೆಲ್ಲ ಭಯಭೀತರಾಗಿದ್ದು, ಈ ಕುರಿತು ತಾವು ಐಜಿಪಿ ಜತೆ ಚರ್ಚಿಸುವುದಾಗಿ ಹೇಳಿದ ಬೆಳಮಗಿ, ಮಹಿಳೆಯರಿಗೆ ರಕ್ಷಣೆ ಒದಗಿಸುವಂತೆ ಎಎಸ್ಪಿ ಆರ್.ಚೇತನ್ಗೆ ಸೂಚಿಸಿದರು.
ದಾಳಿ ಪ್ರಕರಣದಲ್ಲಿ ಗಲಾಟೆ ಮಾಡಿದವರೊಂದಿಗೆ ದೂರದಲ್ಲಿ ನಿಂತು ನೋಡುತ್ತಿದ್ದವರ ಹೆಸರುಗಳೂ ಆರೋಪ ಪಟ್ಟಿಯಲ್ಲಿವೆ. ಆರೋಪಿಗಳ ಪಟ್ಟಿ ನಮಗೆ ಕೊಡಿ. ನಾವೇ ಅವರನ್ನು ಕರೆಯಿಸಿ ನಿಮಗೊಪ್ಪಿಸುತ್ತೇವೆ. ಉಳಿದವರಿಗೆ ತೊಂದರೆ ಕೊಡಬೇಡಿ ಎಂದು ಶಾಸಕ ರಮೇಶ ಭೂಸನೂರ ಎಎಸ್ಪಿ ಆರ್.ಚೇತನ್ ಅವರಿಗೆ ಹೇಳಿದರು. ಬಳಿಕ ಪ್ರಕರಣದ ತನಿಖೆಗೆ ನೇಮಕಗೊಂಡ ಎಎಸ್ಪಿ ಆರ್.ಚೇತನ ಮಾತನಾಡಿ, ತಪ್ಪು ಮಾಡದವರು ತಾಂಡಾಕ್ಕೆ ಮರಳಿ ಬರಲಿ. ಅವರಿಗೆ ಪೊಲೀಸರಿಂದ ಯಾವುದೇ ತೊಂದರೆಯಾಗುವುದಿಲ್ಲ. ಅಮಾಯಕರನ್ನು ಯಾವ ಕಾರಣಕ್ಕೂ ವಶಕ್ಕೆ ಪಡೆಯೊಲ್ಲ. ಯಾರೂ ಭಯಪಡುವ ಅವಶ್ಯಕತೆ ಇಲ್ಲ. ತಾಂಡಾದೊಳಗೆ ಬರಬಾರದೆಂದು ಈಗಾಗಲೇ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಧೈರ್ಯ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

