ಪಡಿತರ ಅವ್ಯವಸ್ಥೆ: ಗ್ರಾಹಕರ ಉಪವಾಸ
ಬಿಜಾಪುರ: ಬಿಜಾಪುರ ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆ ಅವ್ಯವಸ್ಥೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರು ಆಹಾರ ಧಾನ್ಯ ಸಿಗದೇ ಉಪವಾಸ ಬೀಳುವ ಪ್ರಸಂಗ ಬಂದೊದಗಿದೆ.
ಸರ್ಕಾರದ ನಿಯಮಾವಳಿಯಂತೆ ನ್ಯಾಯಬೆಲೆ ಅಂಗಡಿಗಳು ಮಂಗಳವಾರ ರಜೆ ಹೊರತು ಪಡಿಸಿ ದಿನಂಪ್ರತಿ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8ರವರೆಗೆ ತೆರೆದುಕೊಂಡಿರಬೇಕು. ಆದರೆ ಜಿಲ್ಲೆಯಲ್ಲಿ ಸದ್ಯಕ್ಕೆ ಈ ನಿಯಮ ಕಿಂಚಿತ್ತೂ ಪಾಲನೆಯಾಗುತ್ತಿಲ್ಲ. ತಿಂಗಳಲ್ಲಿ 2 ದಿನ ಇಲ್ಲವಾದರೆ 3 ದಿನಗಳಷ್ಟೇ ಅಂಗಡಿ ತೆರೆದಿರುತ್ತವೆ. ಅನಂತರ ಅಂಗಡಿ ಮಾಲೀಕರು ಪಡಿತರ ಚೀಟಿದಾರರ ಕೈಗೆ ಸಿಗುವುದಿಲ್ಲ.
ಈ ಮೂರು ದಿನಗಳಲ್ಲಿ ಆಹಾರ ಧಾನ್ಯ ಪಡೆಯದೇ ಇರುವವರಿಗೆ ಉಪವಾಸವೇ ಗತಿ. ಒಂದೊಮ್ಮೆ ನ್ಯಾಯಬೆಲೆ ಅಂಗಡಿ ಮಾಲೀಕ ಸಿಕ್ಕರೆ ಆಹಾರ ಸಾಮಗ್ರಿ ಮುಗಿದಿದೆ. ಇನ್ನೇನಿದ್ದರೂ ಮುಂದಿನ ತಿಂಗಳಿಗೆ ಆಹಾರ ಸಾಮಗ್ರಿ ಎಂದು ಸಬೂಬು ಹೇಳಿ ಸಾಗಹಾಕಲಾಗುತ್ತದೆ. ಪಡಿತರ ಚೀಟಿದಾರರು ಪಡೆಯದೇ ಉಳಿದ ಆಹಾರ ಧಾನ್ಯ ಎಲ್ಲಿ ಹೋಗತ್ತದೆ ಎಂಬುವುದು ನಿಗೂಢವಾಗಿ ಬಿಡುತ್ತದೆ ಎಂಬುದು ಪಡಿತರ ಚೀಟಿದಾರರ ಪ್ರಶ್ನೆಯಾಗಿದೆ.
ಬಗೆಹರಿಯದ ಪಡಿತರ ಚೀಟಿ ಗೊಂದಲ: ಕಳೆದ ಆರೇಳು ತಿಂಗಳಿನಿಂದ ನಡೆಯುತ್ತಿರುವ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಹಾಗೇ ಮುಂದುವರೆದಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಗ್ರಾಹಕರ ಮೊಬೈಲ್ಗೆ ಎಸ್ಎಂಎಸ್ ಮೂಲಕ ನಿಮ್ಮ ಪಡಿತರ ಚೀಟಿ ಸಿದ್ಧಗೊಂಡಿದೆ ಪಡೆದುಕೊಳ್ಳಬೇಕು ಎಂದು ಸಂದೇಶ ಬರುತ್ತದೆ. ಆದರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಚೇರಿಯಲ್ಲಿ ಪಡಿತರ ಚೀಟಿ ಮುದ್ರಣವಾಗಿಲ್ಲ. 15 ದಿನ ಬಿಟ್ಟು ಬರುವಂತೆ ತಿಳಿಸಲಾಗುತ್ತಿದೆ. ಹೀಗಾಗಿ ಜನರು ದಿನಂಪ್ರತಿ ಪಡಿತರ ಚೀಟಿಗಾಗಿ ಅಲೆದಾಡಬೇಕಾಗುತ್ತಿದೆ.
ಬಿಜಾಪುರ ಜಿಲ್ಲೆಯಲ್ಲಿ ಒಟ್ಟು 1.75 ಲಕ್ಷ ಪಡಿತರ ಚೀಟಿಗಳನ್ನು ವಿತರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಆಯಾ ಗ್ರಾಮ ಪಂಚಾಯಿತಿಗಳ ಮೂಲಕ ವಿತರಣೆ ಪ್ರಕ್ರಿಯೆ ನಡೆದಿದೆ. ಆದರೆ ಸಮಸ್ಯೆ ಇರುವುದು ಬಿಜಾಪುರ ನಗರದಲ್ಲಿ ಮಾತ್ರ. ಏಕೆಂದರೆ ಬಿಜಾಪುರ ನಗರದಲ್ಲಿಯೇ ಒಟ್ಟು 65,000 ಪಡಿತರ ಚೀಟಿಗಳನ್ನು ವಿತರಿಸಬೇಕು. ಈ ಪೈಕಿ ಸದ್ಯಕ್ಕೆ 25,000 ಪಡಿತರ ಚೀಟಿ ವಿತರಿಸಲಾಗಿದ್ದು, ಇನ್ನು 40,000 ಪಡಿತರ ಚೀಟಿ ವಿತರಿಸಬೇಕಿದೆ. ಹೊಸದಾಗಿ ಬಂದಿರುವ ಪಡಿತರ ಚೀಟಿಗಳು ಪಡಿತರ ಚೀಟಿದಾರರ ಹೆಸರು ಮುದ್ರಿತವಾಗದೆ ಧೂಳು ತಿನ್ನುತ್ತಿವೆ.
ಆದರೆ ಪಡಿತರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಚೇರಿಯಲ್ಲಿ ಪಡಿತರ ಚೀಟಿಗಳನ್ನು ಪ್ರಿಂಟ್ ಔಟ್ ತಗೆದುಕೊಡುವ ಗಣಕ ಯಂತ್ರ ಸುಸ್ಥಿತಿಯಲ್ಲಿಲ್ಲ. ಪ್ರಿಂಟ್ಔಟ್ ಬಂದರೆ ಬರುತ್ತದೆ, ಇಲ್ಲದಿದ್ದರೆ ಸರ್ವರ್ ಡೌನ್ ಆಗುತ್ತದೆ.
2010 ಡಿಸೆಂಬರ್ ಮುಂಚೆ ಕೊಮ್ಯಾಟ್ ಸಂಸ್ಥೆಯವರು ನೀಡಿದ ಖಾಯಂ ಪಡಿತರ ಚೀಟಿ ಪಡೆದವರು ಫಜೀತಿಯಾಗುವಂತಾಗಿದೆ. ರಾಜ್ಯ ಮಟ್ಟದಲ್ಲಿಯೇ ಕೊಮ್ಯಾಟ್ ಸಂಸ್ಥೆಯವರಿಗೆ ನೀಡಿದ ಗುತ್ತಿಗೆ ರದ್ದಾಗಿದೆ. ಸಂಸ್ಥೆಯವರು ಪಡಿತರ ಚೀಟಿಗಳ ಡಾಟಾದ ಸಿಡಿಯನ್ನು ಆಹಾರ ಇಲಾಖೆಗೆ ಹಸ್ತಾಂತರಿಸದೇ ಹೋಗಿದ್ದಾರೆ.
ಇದರಿಂದಾಗಿ ಕೊಮ್ಯಾಟ್ ಕಂಪನಿಯವರು ನೀಡಿದ ಪಡಿತರ ಚೀಟಿಗಳು ರದ್ದಾಗಿವೆ. ಈ ಸಂಸ್ಥೆಯಿಂದ ಖಾಯಂ ಪಡಿತರ ಚೀಟಿ ಪಡೆದವರು ಹೊಸದಾಗಿ ಮತ್ತೆ ಪ್ರಾಂಚೈಸಿಗಳಲ್ಲಿ ಫೋಟೋ ಹಾಗೂ ಬಯೋವುಟ್ರಿಕ್ ಪಡೆದುಕೊಂಡು ನವೀಕರಿಸಿಕೊಳ್ಳಬೇಕು. ಸದ್ಯಕ್ಕೆ ಬಿಜಾಪುರದಲ್ಲಿ 7 ತಾತ್ಕಾಲಿಕ ಪ್ರಾಂಚೈಸಿ ತೆರೆಯಲಾಗಿದೆ. ಅಲ್ಲಿಯವರೆಗೆ ಈ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ಧಾನ್ಯ ಸಿಗುವುದು ಕಷ್ಟದ ಮಾತು.
ಸೀಮೆ ಎಣ್ಣೆ ವಿತರಣೆಯಲ್ಲಿ ಮೋಸ: ಸರ್ಕಾರದ ನಿಯಮಾವಳಿಗಳ ಪ್ರಕಾರ ಸೀಮೆ ಎಣ್ಣೆಯನ್ನು ಬ್ಯಾರೆಲ್ನಿಂದ ನೇರವಾಗಿ ಬಾಟಲಿ, ಡಬ್ಬಾಗಳಿಗೆ ಸುರಿಯದೆ ಬಕೀಟ್ಗೆ ಹಾಕಬೇಕು. ಆದರೆ ಇಲ್ಲಿ ಸೀಮೆ ಎಣ್ಣೆ ಮಾರುವವರು ಈ ನಿಯಮ ಪಾಲಿಸುತ್ತಿಲ್ಲ. ಬರೀ ಬುರಗ ಸೀಮೆ ಎಣ್ಣೆ ನೀಡಿ ತೂಕದಲ್ಲಿ ಭಾರಿ ಮೋಸ ಮಾಡುತ್ತಿದ್ದಾರೆ.
ಸೀಮೆ ಎಣ್ಣೆ ಪಡೆಯಬೇಕಾದರೆ ಪಡಿತರ ಚೀಟಿದಾರರು ಮುನ್ನಾ ದಿನದ ರಾತ್ರಿ ಸೀಮೆ ಎಣ್ಣೆ ವಿತರಣೆ ಜಾಗೆಯಲ್ಲಿ ಮಲಗಬೇಕು. ಇಲ್ಲವೆ ಬೆಳಗಿನ 4 ಗಂಟೆಗೆ ಪಾಳೆ ಹಚ್ಚಬೇಕು. ಆದರೂ ಸರಿಯಾಗಿ ಸೀಮೆ ಎಣ್ಣೆ ಸಿಗುವುದು ಇಲ್ಲಿ ಕನಸಿನ ಮಾತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

