ಚಾಮರಾಜನಗರ

ಚುನಾವಣೆಗೂ ಮೊದಲೇ ಸೋತ ಬಿಜೆಪಿ, ಕೆಜೆಪಿ

Published On :

ಚಾಮರಾಜನಗರ: ಮುಂದಿನ ವಿಧಾನಸಭಾ ಚುನಾವಣೆಯ ದಿಕೂಚ್ಸಿ ಎಂದೇ ಪರಿಗಣಿಸಲಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎದುರು ಚುನಾವಣೆಗೆ ಮುನ್ನವೇ ಬಿಜೆಪಿ ಮತ್ತು ಕೆಜೆಪಿ ಎರಡೂ ಅಭ್ಯರ್ಥಿಗಳನ್ನು ಹಾಕುವುದರಲ್ಲೇ ಸೋಲೊಪ್ಪಿಕೊಂಡಿವೆ.
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ ಹಾಗೂ ಹನೂರು ಮತ್ತು ಯಳಂದೂರು ಪಟ್ಟಣ ಪಂಚಾಯ್ತಿ 109 ಸ್ಧಾನಗಳಿಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಶನಿವಾರದವರಗೆ 610 ಮಂದಿ ನಾಮಪತ್ರ ಸಲ್ಲಿಸಿದ್ದರೆ.
ಜಿಲ್ಲೆಯಲ್ಲಿ ಪ್ರಬಲವಾಗಿರುವ ಕಾಂಗ್ರೆಸೆ ಎಲ್ಲಾ 109 ಸ್ಥಾನಗಳಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಆರಂಭದಲ್ಲೇ ಮುನ್ನಡೆ ಸಾಧಿಸಿದೆ. ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕೆಜೆಪಿ ಎಲ್ಲಾ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ವಿಫಲವಾಗಿದ್ದು,  ಇವರೆಡು ಪಕ್ಷಗಳಿಂತ ಜೆಡಿಎಸ್ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.  
ಕಾಂಗ್ರೆಸ್ ಭದ್ರಕೋಟೆಯಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಎಚ್.ಎಸ್. ಮಹದೇವಪ್ರಸಾದ್ ಮತ್ತು ಸಂಸದ ಆರ್. ಧ್ರುವನಾರಾಯಣ ಜೋಡಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಕಣಕ್ಕಿಳಿಸುವ ಜೊತೆಗೆ ಕಳೆದ  ಬಾರಿ ಬೇರೆ ಪಕ್ಷದಲ್ಲಿ ಗೆಲವು ಸಾಧಿಸಿದ್ದ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಕಣಕ್ಕಿಳಿಸಿದೆ. ಜತೆಗೆ ಜಿಲ್ಲಾಧ್ಯಕ್ಷರ ತವರು ಕ್ಷೇತ್ರ ಗುಂಡ್ಲುಪೇಟೆಯಲ್ಲಿ ಸರಿಯಾಗಿ ಕೆಲಸ ಮಾಡದ ಮತ್ತು ಜಿಲ್ಲಾಧ್ಯಕ್ಷ ಮಾತು ಕೇಳದ ಅಭ್ಯರ್ಥಿಗಳಿಗೆ ಕೊಕ್ ನೀಡಲಾಗಿದ್ದು, 18 ಮಂದಿ ಪೈಕಿ 5 ಮಂದಿ ಹಳಬರನ್ನು ಮಾತ್ರ ಕಣಕ್ಕಿಳಿಸಲಾಗಿದೆ.  ಹೀಗಾಗಿ ಚಾಮರಾಜನಗರ 31, ಕೊಳ್ಳೇಗಾಲ 31, ಗುಂಡ್ಲುಪೇಟೆ 23, ಹನೂರು 13 ಹಾಗೂ ಯಳಂದೂರು 11  ಸೇರಿದಂತೆ ಒಟ್ಟು 109 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಕೆಜೆಪಿಯಿಂದ 83 ಮಂದಿ: ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಪ್ರಬಲ ವಿರೋಧ ಪಕ್ಷವಾಗಿರುವ ಕೆಜೆಪಿಯ ಲೆಕ್ಕಚಾರ ತಲೆಕೆಳಕ್ಕಾಗಿದ್ದು, ಜಿಲ್ಲೆಯ 109 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ವಿಫಲವಾಗಿದೆ.
ಇದಕ್ಕೆ ಪಕ್ಷದಲ್ಲಿನ ಸಮನ್ವಯ ಕೊರತೆ ಮತ್ತು ಪಕ್ಷಕ್ಕೆ ಬರುವುದಾಗಿ ಭರವಸೆ ನೀಡಿ ಕೊನೆಯ ಕ್ಷಣದಲ್ಲಿ ಕೆಲವರು ಕೈ ಕೊಟ್ಟಿದ್ದರಿಂದ  ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಹಿನ್ನೆಡೆಗೆ ಕಾರಣವಾಗಿದ್ದು,  31 ವಾರ್ಡ್‌ಗಳ ಪೈಕಿ 21 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದೆ. ಉಳಿದಂತೆ ಗುಂಡ್ಲುಪೇಟೆ 23  ಮತ್ತು ಹನೂರಿನಲ್ಲಿ ಮಾತ್ರ 13 ಎಲ್ಲಾ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದೆ. ಕೊಳ್ಳೇಗಾಲದಲ್ಲಿ  20 ಮತ್ತು ಯಳಂದೂರಿನಲ್ಲಿ 6 ಮಂದಿ  ಸೇರಿದಂತೆ ಒಟ್ಟು 83 ಮಂದಿಯನ್ನು ಮಾತ್ರ ಕಣಕ್ಕಿಳಿಸಿದೆ.
ಬಿಜೆಪಿ: ಬಿಜೆಪಿಗೆ ಜಿಲ್ಲಾಧ್ಯಕ್ಷ  ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರ ರಾಜಿನಾಮೆ ಬಳಿಕ ಸಮರ್ಥ ನಾಯಕರ ಕೊರತೆ ಎದುರಿಸುತ್ತಿದ್ದು, ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದ್ದರೂ ಕಳೆದ ಬಾರಿ ಆಯ್ಕೆಯಾಗಿದ್ದ ಕೆಲವರು ಈ ಬಾರಿಗೆ ಚುನಾವಣೆ ಸ್ಪರ್ಧಿಸಲು ಕೆಲವರು ಹಿಂದೇಟು ಹಾಕಿದ್ದು, ಚಾಮರಾಜನಗರದಲ್ಲಿ 23, ಕೊಳ್ಳೇಗಾಲದಲ್ಲಿ 26, ಯಳಂದೂರಿನಲ್ಲಿ  10 ಮಂದಿ ಕಣಕ್ಕಿಳಿಸಿದ್ದು, ಗುಂಡ್ಲುಪೇಟೆಯಲ್ಲಿ 12 ಮತ್ತು ಹನೂರಿನಲ್ಲಿ ಕೇವಲ 4 ಮಂದಿಯನ್ನು ಮಾತ್ರ ಕಣಕ್ಕಿಳಿಸಿದೆ.
ಜೆಡಿಎಸ್‌ನಿಂದ 85 ಅಭ್ಯರ್ಥಿ: ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಲ್ಲಿ ಕೆಜೆಪಿ ಮತ್ತು ಬಿಜೆಪಿಗಿಂತ ಮುಂದಿದ್ದು, ಜಿಲ್ಲೆಯ 109 ವಾರ್ಡ್‌ಗಳ ಪೈಕಿ 85 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಚಾಮರಾಜನಗರದಲ್ಲಿ 28, ಕೊಳ್ಳೇಗಾಲದಲ್ಲಿ 25, ಗುಂಡ್ಲುಪೇಟೆಯಲ್ಲಿ 10, ಹನೂರಿನಲ್ಲಿ 11 ಮಂದಿಯನ್ನು ಮಾತ್ರ ಕಣಕ್ಕಿಳಿಸಿದ್ದು, ಯಳಂದೂರಿನಲ್ಲಿ ಎಲ್ಲಾ 11 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದೆ.
ಬಿಎಸ್‌ಆರ್ ವತಿಯಿಂದ ಚಾಮರಾಜನಗರ 25, ಕೊಳ್ಳೇಗಾಲ 15,  ಹನೂರು 6 , ಯಳಂದೂರು 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಗುಂಡ್ಲುಪೇಟೆಯಲ್ಲೇ ಕೇವಲ 2 ಮಂದಿ  ಸ್ಪರ್ಧಿಸಿದ್ದು, ಜಿಲ್ಲೆಯಲ್ಲಿ 58 ಮಂದಿ ಮಾತ್ರ ಕಣಕ್ಕಿಳಿದಿದ್ದಾರೆ.
ವಾಟಾಳ್ ಪಕ್ಷ ಚಾಮರಾಜನಗರ ನಗರಸಭೆಯಲ್ಲಿ 18 ಮಂದಿಯನ್ನು ಕಣಕ್ಕಿಳಿಸಿದೆ. ಕರ್ನಾಟಕ ಮಕ್ಕಳ ಪಕ್ಷ ಚಾಮರಾಜನಗರದಲ್ಲಿ 10, ಎಸ್‌ಡಿಪಿಐ ಚಾಮರಾಜನಗರ 8 ಮತ್ತು ಕೊಳ್ಳೇಗಾಲ 1 ಸೇರಿದಂತೆ9, ರಿಪಬ್ಲಿಕನ್ ಪಾರ್ಟಿ ಹನೂರಿನಲ್ಲಿ ಮಾತ್ರ 3 ಮಂದಿ ಕಣಕ್ಕಿಳಿಸಿದ್ದು. ಒಟ್ಟಾರೆ ವಿವಿಧ ಪಕ್ಷಗಳ 450 ಅಭ್ಯರ್ಥಿಗಳು ಕಣದಲ್ಲಿದ್ದು, ಉಳಿದಂತೆ 160 ಮಂದಿ ಪಕ್ಷೇತರರು ಸ್ಪರ್ಧಿಸಿದ್ದಾರೆ.
-ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.